ಬೆಂಗಳೂರು: ಜೆ.ಸಿ.ನಗರ ಸಹಾಯಕ ಪೊಲೀಸ್ ಆಯುಕ್ತ ಮಂಜುನಾಥ್ ಅವರು ಹೋಟೆಲ್ ಮಾಲೀಕ ರಾಜೀವ್ ಶೆಟ್ಟಿ ಮೇಲೆ ನಡೆಸಿದ ಹಲ್ಲೆ ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಎಸಿಪಿ ವಿರುದ್ಧ ಕ್ರಮಕೈಗೊಳ್ಳುವಂತೆ ಸದ್ಯದಲ್ಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರಿಗೆ ವರದಿ ಸಲ್ಲಿಸಲಿದ್ದಾರೆ.
ನ.9ರಂದು ತಡರಾತ್ರಿ ನಡೆದ ಘಟನೆ ಕುರಿತು ಆಂತರಿಕ ತನಿಖೆ ನಡೆಸಿದ ಉತ್ತರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಅವರು ಸಿದ್ಧಪಡಿಸಿರುವ ಮೂರು ಪುಟಗಳ ವರದಿ ಆಧರಿಸಿ ಎಸಿಪಿ ಮೇಲೆ ಶಿಸ್ತು ಕ್ರಮ ಜರುಗಿಸುವ ಕುರಿತು ಪೊಲೀಸ್ ಆಯುಕ್ತರು ಡಿಜಿಪಿ ಅವರಿಗೆ ಪತ್ರ ಬರೆಯಲಿದ್ದಾರೆ.
ಅಮಾನತು ಸಾಧ್ಯತೆ?: ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ತರಲು ಸಿದ್ಧವಾಗಿರುವ ಡಿಜಿಪಿ ನೀಲಮಣಿ ಎನ್.ರಾಜು ಪೊಲೀಸ್ ಇಲಾಖೆಯಲ್ಲಿ ಅಶಿಸ್ತು ಸಹಿಸುವುದಿಲ್ಲ. ಒಂದು ವೇಳೆ ಸಾರ್ವಜನಿಕರ ಜತೆ ಅನುಚಿತವಾಗಿ ನಡೆದುಕೊಂಡರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಡಿಸಿಪಿ ಚೇತನ್ ಸಿಂಗ್ ವರದಿಯನ್ನಾಧರಿಸಿ ಎಸಿಪಿ ಮಂಜುನಾಥ್ ಬಾಬು ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಬಹುದು ಎಂದು ಹೇಳಲಾಗುತ್ತಿದ್ದು ಅಮಾನತು ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಡಿಜಿಪಿಗೆ ವರದಿ: ಎಸಿಪಿ ಹಲ್ಲೆ ಪ್ರಕರಣ ಬಗ್ಗೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಹೊಟೇಲ್ ಮಾಲೀಕರ ಸಂಘವು ಎಸಿಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಹೊಟೇಲ್ ಮಾಲೀಕನಿಗೆ ಜೀವಬೆದರಿಕೆಯಿದ್ದು, ಸೂಕ್ತ ರಕ್ಷಣೆ ನೀಡಬೇಕೆಂದು ದೂರು ನೀಡಿದ್ಧಾರೆ. ಡಿಸಿಪಿ ನೀಡಿದ ತನಿಖಾ ವರದಿ ಹಾಗೂ ಠಾಣೆಯಲ್ಲಿ ದಾಖಲಾಗಿರುವ ದೂರನ್ನು ಪರಿಶೀಲಿಸಿ, ಸೂಕ್ತ ಕ್ರಮಕ್ಕಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ವರದಿ ಮಾಡುತೇ¤ನೆ ಎಂದರು.
ಡಿಸಿಪಿ ಚೇತನ್ ನೀಡಿರುವ ವರದಿಯಲ್ಲಿ ಅನಗತ್ಯವಾಗಿ ಎಸಿಪಿ ಹೋಟೆಲ್ ಮಾಲೀಕರ ವಿರುದ್ಧ ವರ್ತಿಸಿದ್ದಾರೆ. ಕಾನೂನು ಕ್ರಮತೆಗೆದುಕೊಳ್ಳುವ ಸಾಧ್ಯತೆಯಿದ್ದರೂ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಉಲ್ಲೇಖೀಸಿದ್ದಾರೆ. ಈ ಕುರಿತ ವರದಿಯನ್ನು ಡಿಜಿಪಿ ಅವರಿಗೆ ಸದ್ಯದಲ್ಲೇ ಕಳುಹಿಸುತ್ತೇನೆ ಎಂದರು.
ರವಿ ಪೂಜಾರಿ ಕರೆ ಬಂದದ್ದು ಕೀನ್ಯಾದಿಂದ?: ಹೋಟೆಲ್ ಮಾಲೀಕ ರಾಜೀವ್ ಶೆಟ್ಟಿಗೆ ಕರೆ ಬಂದಿರುವುದು ಎಲ್ಲಿಂದ ಎಂಬುದು ಇನ್ನು ಪತ್ತೆಯಾಗುತ್ತಿಲ್ಲ. ಸೈಬರ್ ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ಸೈಬರ್ ತಜ್ಞರ ಪ್ರಕಾರ +2543322331 ಈ ನಂಬರ್ ಕೀನ್ಯಾ ದೇಶದ್ದೆಂದು ಹೇಳಲಾಗಿದೆ. ಆದರೆ, ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಬೇರೆ ದೇಶಗಳ ಕೋಡ್‌ಗಳನ್ನು ಪಡೆದುಕೊಂಡು ಇಂಟರ್‌ನೆಟ್ ಕಾಲ್ ಮಾಡಿರುವ ಸಾಧ್ಯತೆಯಿದೆ. ಹೀಗಾಗಿ ರವಿಪೂಜಾರಿ ಹೆಸರಿನಲ್ಲಿ ಬಂದಿರುವ ಕರೆಯ ಕುರಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.