Advertisement
ಅವಳಿನಗರದಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಗಸ್ತು ವಾಹನಗಳನ್ನು ಹೆಚ್ಚಿಸಲಾಗಿದೆ. ಅಕ್ರಮ ದಂಧೆಗಳನ್ನು ನಿಯಂತ್ರಿಸಲು 2-3 ವರ್ಷಗಳಿಂದ ಎಲ್ಲ ಠಾಣೆಗಳಲ್ಲಿ ಬೀಟ್ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಸಾರ್ವಜನಿಕರನ್ನು ಸಹಭಾಗಿತ್ವ ಮಾಡಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಟ್ಕಾ, ಜೂಜಾಟ, ಮೀಟರ್ ಬಡ್ಡಿ, ಕ್ರಿಕೆಟ್ ಬೆಟ್ಟಿಂಗ್, ಸರಗಳ್ಳತನ, ಮನೆಗಳ್ಳತನ, ಸುಲಿಗೆ, ದರೋಡೆ ಸೇರಿದಂತೆ ಮಾರಣಾಂತಿಕ ಹಲ್ಲೆ, ಚಾಕು ಇರಿತ, ಕೊಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇದು ಅವಳಿನಗರದ ಜನಸಾಮಾನ್ಯರ ನಿದ್ರೆಗೆಡಿಸಿದೆ.
Related Articles
Advertisement
ಅಕ್ರಮ ನಿಯಂತ್ರಣಕ್ಕೆ ಡಿಸಿಪಿ ನೇತೃತ್ವದಲ್ಲಿ ವಿಶೇಷ ತಂಡ : ಮೀಟರ್‌ಬಡ್ಡಿ ಕುಳಗಳು, ರೌಡಿಗಳು, ಗೂಂಡಾಗಳು, ಅಕ್ರಮ ದಂಧೆಕೋರರು, ಮಹಿಳೆಯರಿಗೆ ಸಾಲ ಕೊಡಿಸುವುದಾಗಿ ವಂಚಿಸುವ ಜಾಲ ಹಾಗೂ ದುಷ್ಟಶಕ್ತಿಗಳ ಮಟ್ಟಹಾಕಲು ಹಾಗೂ ಅಪರಾಧ ಚಟುವಟಿಕೆಗಳು, ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಿಸುವ ನಿಟ್ಟಿನಲ್ಲಿ ಆಯುಕ್ತರು ಆಯಾ ವಿಭಾಗದ ಡಿಸಿಪಿಗಳ ನೇತೃತ್ವದಲ್ಲಿ ರೌಡಿ, ಗೂಂಡಾಗಳ ಮೇಲೆ ನಿಗಾ ವಹಿಸಲು ಎರಡು ವಿಶೇಷ ತಂಡ ರಚಿಸಿದ್ದಾರೆ.
ಜನರ ಸಹಭಾಗಿತ್ವದ ಬೀಟ್ ವ್ಯವಸ್ಥೆ ಫೇಲ್ ಆಗಿದ್ದೆಲ್ಲಿ? : ಅವಳಿನಗರದಲ್ಲಿ ಈ ಹಿಂದೆ ಬೀಟ್ ವ್ಯವಸ್ಥೆಯನ್ನು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ರೂಪಿಸಲಾಗಿತ್ತು. ಆದರೆ ಬೀಟ್ ವ್ಯವಸ್ಥೆಯಲ್ಲಿ ನೇಮಕಗೊಂಡಿದ್ದವರಲ್ಲಿ ಕೆಲವರು ಅಕ್ರಮ ದಂಧೆಕೋರರು, ಅಪರಾಧ ಚಟುವಟಿಕೆಯಲ್ಲಿ ತೊಡಗಿಕೊಂಡವರೊಂದಿಗೆ ಗುರುತಿಸಿಕೊಂಡಿದ್ದರು. ಅಲ್ಲದೆ ಅಂತಹ ದಂಧೆಕೋರರ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ಕೊಡುತ್ತಿರಲಿಲ್ಲ. ಹೀಗಾಗಿ ಜನರ ಸಹಭಾಗಿತ್ವದ ವ್ಯವಸ್ಥೆ ಹಿನ್ನಡೆ ಕಂಡಿತು.
ಮನೆ ಬಾಗಿಲಿಗೆ ಸ್ಟಿಕ್ಕರ್ ಅಂಟಿಸಿದ್ದಾಯ್ತು; ಆದ್ರೆ ಸ್ಪಂದನೆಯೇ ಇಲ್ಲ: ಇತ್ತೀಚೆಗೆ ಅವಳಿನಗರದಲ್ಲಿ ಮನೆ ಮನೆಗೆ, ಕಚೇರಿಗಳಲ್ಲಿ ಆಯಾ ಪ್ರದೇಶದ ಬೀಟ್ ಸಿಬ್ಬಂದಿ ಹೆಸರು, ದೂರವಾಣಿ ಸಂಖ್ಯೆಗಳ ಮಾಹಿತಿ ಒಳಗೊಂಡ ಸ್ಟಿಕ್ಕರ್ ಅಂಟಿಸಿ ಹೋಗಲಾಗಿದೆ. ತುರ್ತು ಸಂದರ್ಭದಲ್ಲಿ, ಸಮಸ್ಯೆಗಳಾದಲ್ಲಿ ಸಂಪರ್ಕಿಸುವಂತೆಯೂ ಹೇಳಿ ಹೋಗಲಾಗಿದೆ. ಆದರೆ ಎಷ್ಟೋ ಬಾರಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಸಾಧ್ಯವಾಗುತ್ತಿಲ್ಲ. ಸೂಕ್ತ ಸ್ಪಂದನೆಯೇ ಇಲ್ಲ. ಕರೆಯನ್ನು ಸ್ವೀಕರಿಸುವುದಿಲ್ಲ ಎಂಬುದು ಸಾರ್ಜಜನಿಕರನೇಕರ ಅಹವಾಲು.
ಸಮರ್ಪಕವಾಗಿ ಗಸ್ತು ತಿರುಗದ ವಾಹನ ವಿಚಾರಣೆ ಅವಳಿನಗರದಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ 2017ರ ಜ. 20ರಿಂದ 25 ಚಾಲುಕ್ಯ ಗಸ್ತುವಾಹನಗಳನ್ನು ನಿಯೋಜಿಸಲಾಗಿತ್ತು. ಆದರೆ ಅವು ಸಮರ್ಪಕವಾಗಿ ಗಸ್ತು ತಿರುಗುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬಂದ ಹಿನ್ನೆಲೆಯಲ್ಲಿ ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ನೇತೃತ್ವದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಇವುಗಳಲ್ಲಿ ಕೆಲವು ಚಾಲುಕ್ಯ ವಾಹನಗಳು ದುರಸ್ತಿಗೆ ಬಂದಿದ್ದು, ಅವುಗಳ ರಿಪೇರಿ ಕೂಡ ಆಗಬೇಕಿದೆ.
ಬಡ್ಡಿಕುಳಗಳ ಜತೆ ಫ್ರೆಂಡ್ಲಿ ಫ್ರೆಂಡ್ಲಿ ? : ಬೀಟ್ ವ್ಯವಸ್ಥೆಯಲ್ಲಿ ಸಾರ್ವಜನಿಕರನ್ನು ಸೇರಿಸಿಕೊಂಡರೆ ಅಕ್ರಮ ಕುಳಗಳನ್ನು ಮಟ್ಟಹಾಕಲು ಎಷ್ಟರ ಮಟ್ಟಿಗೆ ಸಾಧ್ಯ ಎಂಬುದು ಮುಖ್ಯ. ಕೂಲಿ ಕಾರ್ಮಿಕರು, ಆಟೋ ಚಾಲಕರು, ತರಕಾರಿ, ಹಣ್ಣು-ಹಂಪಲು ಮಾರಾಟಗಾರರು ಸೇರಿದಂತೆ ಎಲ್ಲ ವರ್ಗದ ಜನರು ಬೀಟ್ ವ್ಯವಸ್ಥೆಯಲ್ಲಿರಬೇಕು. ಆ ಮೂಲಕ ಎಲ್ಲ ವರ್ಗದ ಜನರ ನೋವು ಪೊಲೀಸರಿಗೆ ಗೊತ್ತಾಗಬೇಕು ಎಂಬುದು ಆಶಯವಾಗಿತ್ತು. ಆದರೆ ಮೀಟರ್‌ಬಡ್ಡಿ ಕುಳಗಳು ಇಂಥವರಿಂದಲೇ ಬಡ್ಡಿ ವಸೂಲಿ ಮಾಡುತ್ತಾರೆ. ಹಣ್ಣು-ಹಂಪಲು, ತರಕಾರಿ ಸೇರಿದಂತೆ ಇನ್ನಿತರೆ ಠೊಕ ವ್ಯಾಪಾರಿಗಳು ತನ್ನ ಬಳಿಯೇ ಹಣ್ಣು, ತರಕಾರಿ ಖರೀದಿಸಬೇಕು. ತನ್ನ ಒತ್ತು ಗಾಡಿಯಲ್ಲೇ ಮಾರಾಟ ಮಾಡಬೇಕೆಂದು ಹೆದರಿಸಿ ಬೀದಿಬದಿಯ ವ್ಯಾಪಾರಿಗಳಿಂದ ಸಂಜೆ ಬಡ್ಡಿ ಸೇರಿ ಹಣ ವಸೂಲಿ ಮಾಡುತ್ತಾರೆ. ಹಣ್ಣು ಮತ್ತು ವ್ಯಾಪಾರ ಅವನದೇ ಆದ ಮೇಲೆ ಅಂಥವರೊಂದಿಗೆ ಹೊಂದಾಣಿಕೆ ಮಾಡಿಕೊಂಡ ಬಡ ವರ್ಗದವರು, ದೀನದಲಿತರ ನೋವಿಗೆ ಪೊಲೀಸ್ ಇಲಾಖೆ ಸ್ಪಂದಿಸಲು ಹೇಗೆ ಸಾಧ್ಯ. ಪೊಲೀಸರೇ ರೌಡಿಶೀಟರ್‌ಗಳು, ಗೂಂಡಾಗಳು, ಕ್ರಿಕೆಟ್ ಬೆಟ್ಟಿಂಗ್, ಬಡ್ಡಿ ಕುಳಗಳು, ಮಟ್ಕಾ ಬುಕ್ಕಿಗಳು ಸೇರಿದಂತೆ ಅಕ್ರಮ ಚಟುವಟಿಕೆ, ದಂಧೆಗಳಲ್ಲಿ ತೊಡಗಿದವರೊಂದಿಗೆ ಸ್ನೇಹಿತ್ವ ಬೆಳೆಸಿಕೊಂಡಿದ್ದಾರೆ. ಹೀಗಾದಾಗ ಅಂಥವರನ್ನು ಸದೆಬಡಿಯಲು ಹೇಗೆ ಸಾಧ್ಯವೆಂಬ ಮಾತುಗಳು ಜನರಿಂದ ಕೇಳಿಬರುತ್ತಿವೆ.
ಬೀಟ್ ವ್ಯವಸ್ಥೆ ನಿರಂತರವಾಗಿ ನಡೆಯುತ್ತಿದೆ. ಅದರ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗಿದೆ. ಬೀಟ್ ಸಿಬ್ಬಂದಿಯು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಯಾವುದೇ ಸ್ಥಳದಲ್ಲಿ ಅಹಿತಕರ ಘಟನೆ, ಅಕ್ರಮ ಚಟುವಟಿಕೆಗಳು ನಡೆದರೆ ಅಂತಹ ಪ್ರದೇಶಕ್ಕೆ ನಿಯೋಜಿತಗೊಂಡ ಬೀಟ್ ಸಿಬ್ಬಂದಿಯನ್ನೇ ಹೊಣೆಗಾರರನ್ನಾಗಿಸಲಾಗುವುದು. -ಆರ್. ದಿಲೀಪ್, ಹು-ಧಾ ಪೊಲೀಸ್ ಆಯುಕ್ತ
-ಶಿವಶಂಕರ ಕಂಠಿ