Advertisement

ಯೋಜನೆ ಅನುಷ್ಠಾನದ ಬಗ್ಗೆ ಗಮನಕ್ಕೆ ತರದಿದ್ದರೆ ಶಿಸ್ತುಕ್ರಮ

09:45 PM Aug 23, 2019 | Team Udayavani |

ಅರಸೀಕೆರೆ: ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳನ್ನು ಚುನಾಯಿತ ಜನಪ್ರತಿನಿಧಿಗಳ ಗಮನಕ್ಕೆ ಅಧಿಕಾರಿಗಳು ತಾರದೇ ತಾವೇ ನಿರ್ಧಾರ ಕೈಗೊಂಡು ಅನುಷ್ಠಾನಕ್ಕೆ ಮುಂದಾದರೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲು ಮೇಲಧಿಕಾರಿಗಳಿಗೆ ತಾವೇ ಶಿಫಾರಸು ಮಾಡಬೇಕಾಗುತ್ತದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಎಚ್ಚರಿಕೆ ನೀಡಿದರು. ತಾಪಂ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಶುಕ್ರವಾರ ರೂಪಾ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯ ಪ್ರಾರಂಭ ದಲ್ಲಿಯೇ ತಾಪಂ ಸದಸ್ಯರು ಕೆಲವು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

Advertisement

ಏನು ಪ್ರಯೋಜನ?: ಕ್ಷೇತ್ರದ ಸಮಗ್ರ ಅಭಿವೃದ್ಧಿಯಲ್ಲಿ ಯಾವುದೇ ಲೋಪ-ದೋಷ ಉಂಟಾಗದಂತೆ ಪಕ್ಷಾತೀತವಾಗಿ ಅಧಿಕಾರಿಗಳು ಸ್ಪಂದಿಸಿ ಕೆಲಸ ಮಾಡಬೇಕು. ಕೃಷಿ ಇಲಾಖೆ ಸೇರಿ ಬಹುತೇಕ ಇಲಾಖೆ ಅಧಿಕಾರಿಗಳು, ತಮ್ಮ ಇಲಾಖೆಯ ಹೊಸ ಯೋಜನೆಗಳನ್ನು ಗಮನಕ್ಕೆ ತಾರದೇ ಹೋದರೆ ನಾವು ಚುನಾಯಿತ ಜನಪ್ರತಿನಿಧಿಗಳಾಗಿ ಏನು ಪ್ರಯೋಜನ. ಅಧಿಕಾರಿಗಳೇ ಫ‌ಲಾನುಭವಿಗಳನ್ನು ಆಯ್ಕೆಮಾಡುವುದಾದರೆ ಚುನಾಯಿತ ಜನಪ್ರತಿನಿಧಿಗಳು ಏನು ಕೆಲಸ ಮಾಡಬೇಕೆಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಏನು ಮಾಡಬೇಕೆಂದು ಗೊತ್ತಿದೆ: ಈ ಹಿನ್ನೆಲೆಯಲ್ಲಿ ಮಧ್ಯ ಪ್ರವೇಶಿಸಿದ ಶಾಸಕ ಶಿವಲಿಂಗೇಗೌಡ, ಸರ್ಕಾರದ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಾದರೆ ಜನಪ್ರತಿನಿಧಿಗಳು-ಅಧಿಕಾರಿಗಳು ಇಬ್ಬರೂ ಕೂಡಿ ಕೆಲಸ ಮಾಡಿದಾಗ ಮಾತ್ರ ಸಾಧ್ಯ. ಜನಪ್ರತಿನಿಧಿಗಳನ್ನು ನಿರ್ಲಕ್ಷಿಸಿ ನಡೆಯುವ ಅಧಿಕಾರಿಗಳಿಗೆ ಏನು ಮಾಡಬೇಕೆಂಬುದು ತನಗೆ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಸ್ಯೆ ತಪ್ಪಿಸಿ: ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪದಾರ್ಥ ಪಡೆಯಲು ಆಹಾರ ಇಲಾಖೆ ಬೆರಳಚ್ಚು ಕಡ್ಡಾಯ ಮಾಡಿದೆ. ಕೆಲವು ನ್ಯಾಯ ಬೆಲೆ ಅಂಗಡಿಗಳಲ್ಲಿ ಬೆರಳಚ್ಚು ಯಂತ್ರಗಳು ಬೆರಳಚ್ಚನ್ನು ತೋರಿಸುವುದಿಲ್ಲ. ಹಾಗೂ ಅಂತರ್ಜಾಲ ಸಂಪರ್ಕವೂ ಗ್ರಾಮೀಣ ಭಾಗದಲ್ಲಿ ಸಮರ್ಪಕವಾಗಿ ದೊರೆಯದ ಕಾರಣ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪದಾರ್ಥ ಪಡೆಯಲು ಗ್ರಾಹಕರು ಹೋರಾಟ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಆಹಾರ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಬಡವರ್ಗದ ಜನರ ಸಮಸ್ಯೆ ತಪ್ಪಿಸಿ ಸರಳ ವಿಧಾನದಲ್ಲಿ ಪಡಿತರ ಪದಾರ್ಥ ತಲುಪಿಸಿ ಎಂದು ಆಹಾರ ಇಲಾಖೆ ನಿರೀಕ್ಷಕ ದಯಾನಂದ್‌ರಿಗೆ ತಾಪಂ ಸದಸ್ಯ ಕಾಂತರಾಜ್‌ ಒತ್ತಾಯಿಸಿದರು.

ಅರ್ಜಿ ನೀಡಿ: ಇದಕ್ಕೆ ಪ್ರತಿಕ್ರಿಯಿಸಿದ ದಯಾನಂದ್‌, ಬೆರಳಚ್ಚು ನೀಡಿ ಪಡಿತರ ಪಡೆಯುವುದು ಕಡ್ಡಾಯ ಎಂದು ಸರ್ಕಾರ ನಿರ್ದೇಶನ ನೀಡಿದೆ. ಬೆರಳಚ್ಚು ಬಾರದ ವೃದ್ಧರಿಗೆ ಪರ್ಯಾಯ ವ್ಯವಸ್ಥೆ ಇದ್ದು ಅಂತಹವರು ಆಹಾರ ಇಲಾಖೆಗೆ ಬಂದು ಅರ್ಜಿ ನೀಡುವಂತೆ ಮನವಿ ಮಾಡಿದರು.

Advertisement

ಸೌಕರ್ಯವಿಲ್ಲ: ತಾಲೂಕಿನ ನೇರ್ಲಿಗೆ ಸರ್ಕಾರಿ ಶಾಲೆಯಲ್ಲಿ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಶೌಚಾಲಯ ಸೇರಿ ಅಗತ್ಯ ಮೂಲಭೂತ ಸೌಕರ್ಯಗಳಿಲ್ಲ. ಶಾಲೆ ಕಟ್ಟಡ ಹಳೆಯದ್ದಾಗಿದೆ. ಕಾಂಪೌಂಡ್‌ ಇಲ್ಲ ಹೀಗೆ ಹಲವು ಸಮಸ್ಯೆಗಳು ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಸದಸ್ಯ ವಿಜಯಕುಮಾರ್‌ ಗಮನ ಸೆಳೆದರು. ಈ ವೇಳೆ ಶಾಸಕ ಶಿವಲಿಂಗೇಗೌಡ ಮಧ್ಯ ಪ್ರವೇಶಿಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮೇಲಧಿಕಾರಿಗಳಿಗೆ ವರದಿ ನೀಡಬಹುದೇ ವಿನಹಃ ಇನ್ನೂ ಹೆಚ್ಚೇನು ಮಾಡಲು ಸಾಧ್ಯವಿಲ್ಲ.

ಸರ್ಕಾರ ವಾರ್ಷಿಕ ಬಜೆಟ್‌ನಲ್ಲಿ ಶಿಕ್ಷಣ ಇಲಾಖೆಗೆ 20 ಸಾವಿರ ಕೋಟಿ ರೂ. ನೀಡುತ್ತದೆ ಈ ಪೈಕಿ 18500 ಕೋಟಿ ಶಿಕ್ಷಕರ ವೇತನಕ್ಕೆ ಹೋಗುತ್ತದೆ. ಉಳಿದ 1500 ಕೋಟಿ ರೂ.ಗಳಲ್ಲಿ ರಾಜ್ಯದ ಉದ್ದಗಲಕ್ಕೂ ಇರುವ ಸರ್ಕಾರಿ ಶಾಲೆಗಳಿಗೆ ಸುಣ್ಣಬಣ್ಣ ಬಳಿಸಲೂ ಸಾಧ್ಯವಾಗುವುದಿಲ್ಲ. ಪರಿಸ್ಥಿತಿ ಹೀಗಿದೆ. ತಾಲೂಕಿನ ಹಲವು ಶಾಲೆಗಳಿಗೆ ಹೊಸ ಕೊಠಡಿ ಅವಶ್ಯಕತೆ ಇದ್ದು, ವಿಶೇಷ ಅನುದಾನ ಬಿಡುಗಡೆ ಮಾಡಲು ಸರ್ಕಾರವನ್ನು ಒತ್ತಾಯಿಸಿದ್ದೇನೆ ಎಂದು ಹೇಳಿದರು. ತಾಪಂ ಇಒ ನಟರಾಜ್‌, ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಫೋನ್‌ ಕರೆ ಕಡ್ಡಾಯವಾಗಿ ಸ್ವೀಕರಿಸಿ: ಗ್ರಾಮೀಣಾ ಭಾಗದ ಕೆಲವು ಶಿಕ್ಷಕರು ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡದೆ ನಗರದಲ್ಲಿ ಓಡಾಡುತ್ತಿರುತ್ತಾರೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಕೆಲ ಅಧಿಕಾರಿಗಳು ಕಚೇರಿಯಲ್ಲಿ ಇರುವುದಿಲ್ಲ. ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ಹೇಳಿಕೊಳ್ಳೋಣ ಎಂದರೆ, ಮೊಬೈಲ್‌ ಸಂಖ್ಯೆ ಯಾರಿಗೂ ಕೊಟ್ಟಿಲ್ಲ. ಇನ್ನೂ ಕೆಲವರು ಫೋನ್‌ ಮಾಡಿದರೆ ರಿಸೀವ್‌ ಮಾಡುವುದಿಲ್ಲಾ. ಈ ರೀತಿ ಪ್ರತಿಕ್ರಿಯೆ ದೊರೆತರೆ ಸಾಮಾನ್ಯ ಜನರ ಪರಿಸ್ಥಿತಿ ಏನು ಎಂದು ಸದಸ್ಯ ಶಾನೇಗೆರೆ ಲಿಂಗರಾಜು ಪ್ರಶ್ನಿಸಿದರು.

ಅಂತಿಮವಾಗಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ನಗರಸಭೆ ಸೇರಿ ತಾಪಂ ಜಿಪಂ, ಗ್ರಾಪಂ ಪಿಡಿಒಗಳ ದೂರವಾಣಿ ಸಂಖ್ಯೆ ಇರುವ ಸಣ್ಣ ಡೈರಿ ಮಾಡಿಸಿ ಎಲ್ಲಾ ಚುನಾಯಿತ ಜನಪ್ರತಿನಿಧಿಗಳಿಗೂ ನೀಡುವಂತೆ ತಾಪಂ ಇಒ ನಟರಾಜ್‌ ಅವರಿಗೆ ಶಾಸಕ ಶಿವಲಿಂಗೇಗೌಡ ಸೂಚನೆ ನೀಡಿದರು. ಜನಪ್ರತಿನಿಧಿಗಳು ಫೋನ್‌ ಮಾಡಿದಾಗ ಕನಿಷ್ಟ ಅವರ ಸಮಸ್ಯೆ ಏನೆಂದು ಆಲಿಸುವ ಮನಸ್ಥಿತಿಯನ್ನು ಅಧಿಕಾರಿಗಳು ಬೆಳೆಸಿಕೊಳ್ಳುವಂತೆ ತಾಕೀತು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next