Advertisement

3 ತಿಂಗಳಲ್ಲಿ ಕನ್ನಡ ಕಲಿಸದಿದ್ದರೆ ಶಿಸ್ತು ಕ್ರಮ: ಸಿಇಒ ಮಹಾಂತೇಶ

07:32 AM Jan 01, 2019 | |

ಹುಮನಾಬಾದ: ಶಾಲೆ ಯಾವ ಮಾಧ್ಯಮದ್ದೇ ಆಗಿರಲಿ ಕರ್ನಾಟಕದಲ್ಲಿರುವ ಪ್ರತೀ ಶಾಲೆಯ ಮಕ್ಕಳಿಗೆ ಕನ್ನಡ ಕಲಿಕೆ ಕಡ್ಡಾಯ. ಮೂರು ತಿಂಗಳ ನಂತರ ಮತ್ತೂಮ್ಮೆ ಭೇಟಿ ನೀಡುವೆ. ಆಗಲೂ ಇದೇ ಸ್ಥಿತಿ ಇದ್ದರೇ ಮುಖ್ಯಶಿಕ್ಷಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಪಂ ಸಿಇಒ ಮಹಾಂತೇಶ ಬೀಳಗಿ ಸೂಚಿಸಿದರು.

Advertisement

ಕುಮಾರಚಿಂಚೋಳಿ ಗ್ರಾಮಕ್ಕೆ ಸೋಮವಾರ ಮಧ್ಯಾಹ್ನ ಭೇಟಿ ನೀಡಿದ ಅವರು, ಗ್ರಾಮದ ಉರ್ದು ಶಾಲೆ ವಿದ್ಯಾರ್ಥಿಗಳನ್ನು ಕನ್ನಡದಲ್ಲಿ ಮಾತನಾಡಿಸಿದಾಗ ವಿದ್ಯಾರ್ಥಿಗಳು ತಬ್ಬಿಬಾದರು. ನಿಮಗೆ ಕನ್ನಡದಲ್ಲಿ ಮಾತನಾಡಲೂ ಬರುವುದಿಲ್ಲವೇ ಎಂದು ಪ್ರಶ್ನಿಸಿದಾಗ ವಿದ್ಯಾರ್ಥಿಗಳಿಂದ ಸ್ಪಷ್ಟ ಉತ್ತರ ಬಾರದಿರುವುದರಿಂದ ಬೇಸರಗೊಂಡು, 15 ನಿಮಿಷ ಕಾಲ ವರ್ಗ ಕೋಣೆಯಲ್ಲಿ ಮಕ್ಕಳಿಗೆ ಕನ್ನಡ ಕ್ಲಾಸ್‌ ತೆಗೆದುಕೊಂಡರು. ತೃಪ್ತಿಕರ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಅವರು ಮೊದಲನೇ ಬಾರಿಗೆ ಬಂದ ಕಾರಣ ಬಿಡುತ್ತಿರುವೆ. ಮುಂದಿನ ಮೂರು ತಿಂಗಳ ನಂತರ ಮತ್ತೂಮ್ಮೆ ಭೇಟಿ ನೀಡುವೆ. ಆಗಲೂ ಪರಿಸ್ಥಿತಿ ಸುಧಾರಿಸದಿದ್ದರೇ ನಿಮ್ಮ ವಿರುದ್ಧ ಶಿಸ್ತುಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ವೈದ್ಯರು ವಾರಕ್ಕೊಮ್ಮೆ ಆಸ್ಪತ್ರೆಗೆ ಬರುತ್ತಾರೆ ಕುಮಾರಚಿಂಚೋಳಿ ಗ್ರಾಮದ ಪಶು ಆಸ್ಪತ್ರೆಗೆ ಜಿಪಂ ಸಿಇಒ ಮಹಾಂತೇಶ ಬೀಳಗಿ ಭೇಟಿ ನೀಡಿದ ಸಂದರ್ಭದಲ್ಲಿ, ವೈದ್ಯರು ನಿತ್ಯ ಆಸ್ಪತ್ರೆಗೆ ಬರದೇ ವಾರಕ್ಕೊಮ್ಮೆ ಮಾತ್ರ ಕಾಣಿಸಿಕೊಳ್ಳುತ್ತಾರೆ. ನಮ್ಮೂರಿಗೆ ನಿತ್ಯ ಬರುವ ವೈದ್ಯರನ್ನು
ಕಳಿಸಿಕೊಡಿ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. ಸಮಸ್ಯೆ ಆಲಿಸಿದ ಅವರು ವಸ್ತುಸ್ಥಿತಿ ಪರಿಶೀಲಿಸಿ, ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿ ಉತ್ತಮ ನಂತರ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿ ಪರಿಶೀಲಿಸಿ, ಕಟ್ಟಡ ಕಾಮಗಾರಿ ಗುಣಮಟ್ಟದ್ದಾಗಿದೆ. ಶೀಘ್ರ ಉದ್ಘಾಟನೆಗೊಂಡು ಸಾರ್ವಜನಿಕ ಸೇವೆಗೆ ಸಮರ್ಪಣೆಗೊಂಡರೆ ಅನುಕೂಲವಾಗುತ್ತದೆ. ಚುನಾಯಿತ ಪ್ರತಿನಿಧಿ, ಸಂಬಂಧಪಟ್ಟ ಮೇಲಧಿಕಾರಿಗಳನ್ನು ಸಂಪರ್ಕಿಸಿ, ಸಾಧ್ಯವಾದಷ್ಟು ಶೀಘ್ರ ಸೇವೆಗೆ ಸಮರ್ಪಿಸಲು ಯತ್ನಿಸುವುದಾಗಿ ಮಹಾಂತೇಶ ಬೀಳಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next