Advertisement

ಭ್ರಷ್ಟಾಚಾರ ಕಂಡರೆ ಶಿಸ್ತು ಕ್ರಮ

05:38 PM Nov 18, 2018 | Team Udayavani |

ಹೊನ್ನಾಳಿ: ಮನೆ ವಿತರಣೆಯಲ್ಲಿ ಭ್ರಷ್ಟಾಚಾರ ನಡೆಸಿದರೆ ಸೂಕ್ತ ಶಿಸ್ತು ಕ್ರಮಕ್ಕೆ ಮೇಲಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಪಿಡಿಒಗಳು ಹಾಗೂ ಕಾರ್ಯದರ್ಶಿಗಳಿಗೆ ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ಸಾಮರ್ಥ್ಯಸೌಧದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಅರ್ಹ ಫಲಾನುಭವಿಗಳಿಗೆ ಆಶ್ರಯ ಮನೆಗಳನ್ನು ಹಂಚುವ ವೇಳೆ ಕೆಲ ಪಿಡಿಒ ಹಾಗೂ ಕಾರ್ಯದರ್ಶಿಗಳು ಹಣ ಕೇಳುತ್ತಾರೆ ಎಂಬ ದೂರುಗಳು ಕೇಳಿಬಂದಿದ್ದು, ಇಂತಹ ದೂರುಗಳು ಮತ್ತೂಮ್ಮೆ ಬಂದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪಿಡಿಒ ಹಾಗೂ ಕಾರ್ಯದರ್ಶಿಗಳ ಮೊಬೈಲ್‌ ಗಳು ಚಾಲನೆಯಲ್ಲಿರಬೇಕು. ಗ್ರಾಮೀಣ ಪ್ರದೇಶದ ಜನತೆ ತಮ್ಮ ಕೆಲಸ ಕಾರ್ಯಗಳಿಗೆ ದೂರವಾಣಿ ಮಾಡಿದಾಗ ಸ್ವಿಚ್‌ಆಫ್‌ ಮಾಡಿರುವ ಪ್ರಸಂಗಗಳು ಕೇಳಿ ಬರುತ್ತಿವೆ. ಇದಾಗಬಾರದು ಎಂದರು.

ಗ್ರಾ.ಪಂಗಳಲ್ಲಿ ಈ ಸ್ವತ್ತು ನೋಂದಣಿಯನ್ನು ಶೀಘ್ರ ಮಾಡಿಕೊಡಬೇಕು. ಯಾರನ್ನೂ ಕಚೇರಿಗೆ ಅಲೆದಾಡುವಂತೆ ಮಾಡಬಾರದು ಎಂದ ಅವರು, ಒಂದು ವೇಳೆ ಸರ್ವೇಯರ್‌ಗಳು ಈ ಸ್ವತ್ತು ಮಾಡಿಕೊಡುವಲ್ಲಿ ವಿಳಂಬ ಮಾಡಿದರೆ ಇಓ ಅವರಿಗೆ ತಿಳಿಸಿ. ಅವರು ಕ್ರಮ ಕೈಗೊಳ್ಳುತ್ತಾರೆ ಎಂದು ಸೂಚಿಸಿದರು. 

ತಾಲೂಕಿನಾಧ್ಯಂತ ಮರಳಿನ ಸಮಸ್ಯೆಯಿಂದ 5300 ಆಶ್ರಯ ಮನೆಗಳ ನಿರ್ಮಾಣ ಸ್ಥಗಿತಗೊಂಡಿವೆ. ಪಿಡಿಒಗಳು ಅಂತಹ ಮನೆಗಳನ್ನು ಗುರ್ತಿಸಿ ಆ ಮನೆಗಳ ನಿರ್ಮಾಣಕ್ಕೆ ಮರಳನ್ನು ಕೊಡಿಸುವುದಕ್ಕೆ ಪತ್ರ ನೀಡಬೇಕು ಎಂದು ಸೂಚಿಸಿದರು. ಬೇಸಿಗೆ ಆರಂಭವಾಗುತ್ತಿರುವುದರಿಂದ ಕುಡಿಯುವ ನೀರು-ಜಾನುವಾರುಗಳಿಗೆ ಮೇವಿನ ಸಮಸ್ಯೆ ಬಾರದಂತೆ ನೊಡಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಎಲ್ಲಿದೆಯೋ ಅಂತಹ ಕಡೆ ಬೋರ್‌ ಕೊರೆಸುವುದಕ್ಕೆ ಈಗಲೇ ಕ್ರಿಯಾಯೋಜನೆ ತಯಾರಿಸಿ ಎಂದರು.
 
ತಾಪಂ ಇಒ ಕೆ.ಸಿ. ಮಲ್ಲಿಕಾರ್ಜುನ್‌ ಮಾತನಾಡಿ, ನರೇಗಾ ಯೋಜನೆಯ 422 ಕಾಮಗಾರಿಗಳಲ್ಲಿ ಬಹುತೇಕ ಮುಕ್ತಾಯ ಹಂತದಲ್ಲಿವೆ. ಈಗ ಜಿಲ್ಲೆಯಲ್ಲಿ ಜಗಳೂರು ಬಿಟ್ಟರೆ ಹೊನ್ನಾಳಿ ಎರಡನೇ ಸ್ಥಾನದಲ್ಲಿದ್ದು, ಬರುವ ದಿನಗಳಲ್ಲಿ ಹೊನ್ನಾಳಿ ತಾಲೂಕು ಪ್ರಥಮ ಸ್ಥಾನಕ್ಕೆ ಬರುವಂತೆ ಪಿಡಿಒಗಳು
ಕ್ರಿಯಾಶೀಲರಾಗಬೇಕು ಎಂದರು.

ಇದಕ್ಕೂ ಮೊದಲು ಜಿ.ಪಂ, ತಾ.ಪಂ. ಸದಸ್ಯರು ಪಿಡಿಒಗಳ ಮೇಲೆ ಆರೋಪಗಳ ಸುರಿಮಳೆಯನ್ನೇ ಮಾಡಿದರು. ತಾ.ಪಂ ಅಧ್ಯಕ್ಷೆ ಸುಲೋಚನಮ್ಮ, ಉಪಾಧ್ಯಕ್ಷ ಎಸ್‌ .ಪಿ. ರವಿಕುಮಾರ್‌, ಸಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ರಂಗನಾಥ್‌, ಜಿ.ಪಂ ಸದಸ್ಯರಾದ ಉಮಾರಮೇಶ್‌, ವೀರಶೇಖರಪ್ಪ, ಸುರೇಂದ್ರನಾಯ್ಕ, ತಾ.ಪಂ ಸದಸ್ಯರಾದ ಸಿ.ಆರ್‌.ಶಿವಾನಂದ್‌, ಸಿದ್ದಲಿಂಗಪ್ಪ, ತಿಪ್ಪೇಶ್‌, ರೇಖಾ ಉಮೇಶ್‌ ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next