ಬೆಂಗಳೂರು: ಬಿಬಿಎಂಪಿ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಹಾಗೂ ಶಂಕುಸ್ಥಾಪನಾ ಫಲಕಗಳ ಅಳವಡಿಕೆ ವೇಳೆ ಶಿಷ್ಟಾಚಾರ ಪಾಲಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಜರುಗಿಸುವುದಾಗಿ ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಎಚ್ಚರಿಕೆ ನೀಡಿದರು.
ಶುಕ್ರವಾರ ನಡೆದ ಬಿಬಿಎಂಪಿ ಮಾಸಿಕ ಸಭೆಯಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕ್ರಮಗಳಲ್ಲಿ ಪಾಲಿಕೆ ಸದಸ್ಯರ ಹೆಸರು ಮುದ್ರಿಸದೆ ಶಿಷ್ಟಾಚಾರ ಉಲ್ಲಂಘಿಸಿ ಅಪಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಮಹಿಳಾ ಸದಸ್ಯರಾದ ಆಶಾ ಸುರೇಶ್, ಮಂಜುಳಾ ನಾರಾಯಣಸ್ವಾಮಿ ಮತ್ತು ಮಮತಾ ವಾಸುದೇವ್, ಶಿಷ್ಟಾಚಾರ ಉಲ್ಲಂಘಿಸಿದ ಅಧಿಕಾರಿ ಕಾರ್ಯಪಾಲಕ ಎಂಜಿನಿಯರ್ ನಂದೀಶ್‌ರನ್ನು ಅಮಾನತುಗೊಳಿಸಿ ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಆಯುಕ್ತರು, ಈ ಹಿಂದೆಯೇ ಕಡ್ಡಾಯವಾಗಿ ಶಿಷ್ಟಾಚಾರ ಪಾಲಿಸಬೇಕೆಂಬ ಸುತ್ತೋಲೆ ಹೊರಡಿಸಿದ್ದರೂ ಪಾಲಿಕೆ ಸದಸ್ಯರಿಗೆ ಅವಮಾನ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.
ಆಲಿಬಾಬಾ ಮತ್ತು 40 ಕಳ್ಳರು: ರಾಜರಾಜೇಶ್ವರಿ ನಗರದಲ್ಲಿ ಆಲಿಬಾಬಾ ಮತ್ತು 40 ಕಳ್ಳರಿದ್ದು, ಅವರನ್ನು ಹಿಡಿದು ಶಿಕ್ಷಿಸುವವರು ಯಾರೂ ಇಲ್ಲದಂತಾಗಿದೆ. ಶಾಸಕರು ಬಿಬಿಎಂಪಿಯ ಅನುದಾನವೇ ಬೇಕಾಗಿಲ್ಲ ಎಂದು ಹೇಳುತ್ತಾರೆ. ಹಾಗಿದ್ದರೆ, ಅಧಿಕಾರಿಗಳು ತಿಂಗಳುಗಳುಗಟ್ಟಲೆ ಕಷ್ಟಪಟ್ಟು ಬಜೆಟ್ ಸಿದ್ಧ ಮಾಡುವುದೇಕೆ? ಬಿಬಿಎಂಪಿ ಚುನಾವಣೆ ನಡೆಸುವುದೇಕೆ? ಎಂದು ಪ್ರಶ್ನಿಸಿದರು. ಇದೇ ವೇಳೆ ರಾಜರಾಜೇಶ್ವರಿನಗರ ವ್ಯಾಪ್ತಿಯಲ್ಲಿ ಬಿಬಿಎಂಪಿ ಸದಸ್ಯೆಯರಿಗೆ ಶಾಸಕರಿಂದಾಗುತ್ತಿರುವ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಮಹಿಳಾ ಸದಸ್ಯರು ಮೇಯರ್ ಎದುರಿನ ಬಾವಿಗಿಳಿದು ಧರಣಿ ನಡೆಸಿದರು.
ರಕ್ಷಸಹಳ್ಳಕ್ಕೆ ಪರಿಹಾರ ನೀಡಿದ ಅಧಿಕಾರಿಗಳು: ಲಗ್ಗೆರೆ ವಾರ್ಡ್ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ, ಕಳೆದ ಮಳೆಗಾಲದಲ್ಲಿ ಪ್ರವಾಹ ಉಂಟಾಗಿ ಮನೆಗಳಿಗೆ ಹಾನಿಯಾಗಿದ್ದರಿಂದ ಚರಂಡಿ ಹೂಳು ತೆಗೆದು 30 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಆದರೆ, ಅಧಿಕಾರಿಗಳು ತಿಳಿಸಿದ ಸ್ಥಳದಲ್ಲಿ ರಾಕ್ಷಸ ಹಳ್ಳವಿದ್ದು, ಅಲ್ಲಿ ಮನೆಗಳು ಇಲ್ಲ. ಹೀಗಾಗಿ ತಪ್ಪು ಮಾಡಿದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಸಂಪತ್ ರಾಜ್, ಈ ಕುರಿತು ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಗುತ್ತಿಗೆದಾರರು ಕಪ್ಪುಪಟ್ಟಿಗೆ
ಆರ್.ಆರ್.ನಗರದ 9 ವಾರ್ಡ್‌ಗಳಲ್ಲಿ ಎಲ್‌ಇಡಿ ಬೀದಿ ದೀಪ ಹಾಗೂ ಸಿಸಿಟಿವಿ ಅಳವಡಿಕೆಗೆ ಟೆಂಡರ್ ನೀಡಲಾಗಿದೆ. ಆದರೆ, ಜೆಪಿ ಪಾರ್ಕ್ ಹಾಗೂ ಎಚ್‌ಎಂಟಿ ವಾರ್ಡ್ ಹೊರತುಪಡಿಸಿ ಉಳಿದೆಡೆ ಕೆಲಸ ಮಾಡಲಾಗುತ್ತಿದೆ ಎಂದು ಮಮತಾ ವಾಸುದೇವ್ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಮೇಯರ್, ಶನಿವಾರದಿಂದಲೇ ಎರಡು ವಾರ್ಡ್‌ಗಳಲ್ಲಿ ಗುತ್ತಿಗೆದಾರರು ಕೆಲಸ ಆರಂಭಿಸದಿದ್ದರೆ ಅವರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಆಯುಕ್ತರಿಗೆ ಸೂಚನೆ ನೀಡಿದರು.