ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಮಳೆಗಾಲದಲ್ಲಿ ಸಂಭವಿಸಿದ ತೀವ್ರ ಹಾನಿಯನ್ನು ಮನಗಂಡು ಜಿಲ್ಲಾಡಳಿತವು ಪ್ರಸಕ್ತ ವರ್ಷದಲ್ಲಿ ಉಂಟಾಗಬಹುದಾದ ವಿಪತ್ತುಗಳನ್ನು ಎದುರಿಸಲು ಸರ್ವ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎಂಆರ್‌ಪಿಎಲ್ ನೆರವಿನೊಂದಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿ ಕಾರವು ಖರೀದಿಸಿದ ರಕ್ಷಣಾ ಸಾಮಗ್ರಿ ಗಳನ್ನು ವಿವಿಧ ಇಲಾಖೆಗಳಿಗೆ ಸೋಮವಾರ ಹಸ್ತಾಂತರಿಸಿ ಅವರು ಮಾತನಾಡಿದರು. ಹಿಂದಿನ ವಿಪತ್ತುಗಳು ಭವಿಷ್ಯದಲ್ಲಿ ಅವುಗಳ ನಿರ್ವಹಣೆಗೆ ಅನುಭವ ನೀಡುತ್ತವೆ. ಈ ನಿಟ್ಟಿನಲ್ಲಿ ವಿಪತ್ತುಗಳ ಸಂದರ್ಭದಲ್ಲಿ ಸಾರ್ವಜನಿಕರ ಜೀವಹಾನಿ ರಕ್ಷಣೆಗೆ ಯಾವುದೇ ಸಮಸ್ಯೆ ಬಾರದಂತೆ, ಮುಂಚೂಣಿ ಇಲಾಖೆಗಳಿಗೆ ರಕ್ಷಣಾ ಸಾಮಗ್ರಿಗಳನ್ನು ಖರೀದಿಸಿ ನೀಡಲಾಗುತ್ತಿದೆ. ಇದು ಕಾರ್ಯಾಚರಣೆಗೆ ಹೆಚ್ಚು ಬಲ ನೀಡಲಿದೆ ಎಂದರು.
ವಿಪತ್ತು ನಿರ್ವಹಣಾ ಸಾಮಗ್ರಿ ಗಳನ್ನು ಖರೀದಿಸಲು ಎಂಆರ್‌ಪಿಎಲ್‌ನ ಸಿಎಸ್‌ಆರ್ ನಿಧಿಯಿಂದ 1 ಕೋಟಿ ರೂ. ನೆರವು ಮಂಜೂರು ಮಾಡಿದ ಎಂಆರ್‌ಪಿಎಲ್ ನಿರ್ದೇ ಶಕ ಸಂಜಯ್ ವರ್ಮಾ ಅವರನ್ನು ಸಮ್ಮಾನಿಸಲಾಯಿತು. ಸಂಸದ ನಳಿನ್ ಕುಮಾರ್ ಕಟೀಲು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ, ಶಾಸಕರಾದ ಉಮಾನಾಥ ಕೋಟ್ಯಾನ್, ಸಂಜೀವ ಮಠಂದೂರು, ಎಸ್.ಎಲ್. ಭೋಜೇಗೌಡ, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೇಯರ್ ದಿವಾಕರ ಪಾಂಡೇಶ್ವರ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ತಕ್ಷೀಲ್ ಸಂಸ್ಥೆಯ ಹರೀಶ್ ಉಪಸ್ಥಿತರಿದ್ದರು. ಎಡಿಸಿ ಎಂ.ಜೆ. ರೂಪಾ ಸ್ವಾಗತಿಸಿ, ಡಿಡಿಎಂಎ ಅಧಿಕಾರಿ ವಿಜಯ ಕುಮಾರ್ ವಂದಿಸಿದರು. ನಿರ್ಮಿತಿ ಕೇಂದ್ರದ ಇ.ಡಿ. ರಾಜೇಂದ್ರ ಕಲಾºವಿ ನಿರ್ವಹಿಸಿದರು.
ರಕ್ಷಣಾ ಸಾಮಗ್ರಿ ಹಸ್ತಾಂತರ
ತುರ್ತು ಸಂದರ್ಭಗಳಲ್ಲಿ ಬಳಸಲು 6 ಬೋಟುಗಳು, 5 ಬೋಟು ಎಂಜಿನ್‌ಗಳು, ಮರ ಕತ್ತರಿಸುವ ಯಂತ್ರಗಳು, ರಾಸಾಯನಿಕ ದುರಂತ ಸಂದರ್ಭದಲ್ಲಿ ಬಳಸುವ ಮಾಸ್ಕ್ಗಳು, ಸರ್ಚ್‌ಲೈಟ್‌ಗಳು, ಸ್ಟ್ರೆಚ್ಚರ್‌ಗಳು ಸೇರಿದಂತೆ ವಿವಿಧ ರಕ್ಷಣಾ ಸಾಮಗ್ರಿಗಳನ್ನು ಜಿಲ್ಲೆಯ ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕರು, ಮಹಾನಗರಪಾಲಿಕೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಸ್ತಾಂತರಿಸಿದರು.