ಬೆಂಗಳೂರು: ರಾಜ್ಯದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯ ಅನುಷ್ಠಾನವೇ “ವಿಪತ್ತಿನಲ್ಲಿದೆ’. ಎಲ್ಲವೂ ಅಧಿಕಾರಿಗಳ ಊಹೆ, ಕಲ್ಪನೆ ಹಾಗೂ ಕಾಗದಗಳಲ್ಲಿ ಮಾತ್ರ ಇದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಸೂಕ್ಷ್ಮ ಗ್ರಹಿಕೆ ಇಲ್ಲದ್ದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಸೋಮ ವಾರ ಹೈಕೋರ್ಟ್ ಕಟು ಧಾಟಿಯಲ್ಲಿ ಹೇಳಿದೆ.
ಈ ಕುರಿತಂತೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಎ. ಮಲ್ಲಿಕಾರ್ಜುನ್ ಹಾಗೂ ಹೈಕೋರ್ಟ್ ಕಾನೂನು ಸೇವಾ ಸಮಿತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಸರ್ಕಾರಕ್ಕೆ ಚಾಟಿ ಬೀಸಿತು.
ವಿಚಾರಣೆ ವೇಳೆ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದ ಅನುಪಾಲನಾ ವರದಿಯನ್ನು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು. ಇದನ್ನು ಪರಿಶೀಲಿಸಿದ ನ್ಯಾಯಪೀಠ, ನ್ಯಾಯಾಲಯದ ನಿರ್ದೇಶನಗಳನ್ನು ಯಥಾವತ್ತಾಗಿ ಪಾಲಿಸಿರುವುದು ವರದಿಯಲ್ಲಿ ಕಾಣುತ್ತಿಲ್ಲ. ಈ ವಿಚಾರ ವಾಗಿ ರಾಜ್ಯ ಸರ್ಕಾರಕ್ಕೆ ಗಂಭೀರತೆ, ಸೂಕ್ಷ್ಮತೆ ಇಲ್ಲದ್ದು ವರದಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಬರ ಅಥವಾ ಪ್ರವಾಹದ ವೇಳೆ ಜಾನು ವಾರು ಕಳೆದುಕೊಂಡ ರೈತರಿಗೆ ಪರ್ಯಾಯ ಜಾನುವಾರು ಒದಗಿಸಲು 30 ಸಾವಿರ ರೂ.ವರೆಗೆ ವೆಚ್ಚ ಮಾಡಲು ಕೇಂದ್ರ ವಿಪತ್ತು ನಿರ್ವಹಣಾ ನಿಧಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆ ಸಂಪೂರ್ಣ ಹಣ ಕೇಂದ್ರ ಸರ್ಕಾರ ದಿಂದಲೇ ಬಂದಿರುತ್ತದೆ. ಅದಾಗ್ಯೂ, ರಾಜ್ಯ ಸರ್ಕಾರದ ಅಧಿಕಾರಿಗಳು ತಮ್ಮದೇ ಊಹೆಗಳನ್ನು ಮಾಡಿಕೊಂಡು, ಇಲ್ಲದ ನಿಬಂಧನೆಗಳನ್ನು ವಿಧಿಸುತ್ತಿ ದ್ದಾರೆ. ಕೇಂದ್ರ ಹಣ ಕೊಟ್ಟಿರುವಾಗ, ಅದರ ಮಾರ್ಗ ಸೂಚಿಯಂತೆ ವೆಚ್ಚ ಮಾಡುವುದು ಬಿಟ್ಟು, ಅವರಿಗೆ ತೋಚಿದಂತೆ ಮಾಡುವ ಅಧಿಕಾರ ಕೊಟ್ಟಿದ್ದು ಯಾರು? ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.
ಅಲ್ಲದೇ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ರಾಜ್ಯ ಮಟ್ಟದ ವಿಪತ್ತು ನಿರ್ವಹಣಾ ಕಾರ್ಯ ಕಾರಿ ಸಮಿತಿಗಳು ನಿಯಮಿತವಾಗಿ ಸಭೆಗಳನ್ನು ನಡೆ ಸಿಲ್ಲ. ಈವರೆಗೆ ರಾಜ್ಯ ವಿಪತ್ತು ನಿರ್ವಹಣಾ ಯೋಜ ನೆಯೇ ಅಸ್ತಿತ್ವಕ್ಕೆ ಬಂದಿಲ್ಲ. ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಗಳು ನಿಷ್ಕ್ರಿಯವಾಗಿವೆ. 2013-14ರ ನಂತರ ರಾಜ್ಯ ವಿಪತ್ತು ಉಪಶಮನ ನಿಧಿಗೆ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಹಣವೇ ಮೀಸಲಿಟ್ಟಿಲ್ಲ. ಹೀಗಾಗಿ, ಕಾಯ್ದೆಯ ಅನುಷ್ಠಾನವೇ ವಿಪತ್ತಿನಲ್ಲಿದೆ ಎಂದು ನ್ಯಾಯಪೀಠ ತೀಕ್ಷ್ಣವಾಗಿ ಹೇಳಿತು.
ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಗಳ ರಚನೆ, ಅವು ಗಳ ಸಭೆಯ ನಡಾವಳಿಗಳು ಸೇರಿದಂತೆ ಹೈ ಕೋರ್ಟ್ ಗಮನಿಸಿರುವ ಎಲ್ಲ ಅಂಶಗಳ ಬಗ್ಗೆ ವಿವರಣೆ ನೀಡು ವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ನ್ಯಾಯ ಪೀಠ, ವಿಚಾರಣೆಯನ್ನು ಸೆ.13ಕ್ಕೆ ಮುಂದೂಡಿತು.