Advertisement

ವಿಲೇ ಮಾಡದಿದ್ದರೂ ಇಲಾಖಾ ವಿಚಾರಣೆ ಇಲ್ಲ!

06:00 AM Nov 23, 2018 | Team Udayavani |

ಬೆಂಗಳೂರು: ಸಕಾಲದಡಿ ಸೇವೆಗಳನ್ನು ನಿಗದಿತ ಕಾಲಮಿತಿಯಲ್ಲಿ ಒದಗಿಸಬೇಕೆಂಬ ನಿಯಮವಿದ್ದರೂ 64 ಇಲಾಖೆಗಳಲ್ಲಿ 8,881 ಮಂದಿ ಸಕ್ಷಮ ಅಧಿಕಾರಿಗಳು ಸಕಾಲದಲ್ಲಿ ಅರ್ಜಿ ವಿಲೇವಾರಿ ಮಾಡದೇ ನಿರ್ಲಕ್ಷ್ಯ ಮಾಡಿರುವುದು ಬಯಲಾಗಿದೆ!

Advertisement

ನಿರ್ದಿಷ್ಟ ಸಕ್ಷಮ ಅಧಿಕಾರಿಯೊಬ್ಬರು ಸಕಾಲದಡಿ ಸಲ್ಲಿಕೆಯಾದ ಏಳಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡದೆ ಬಾಕಿ ಉಳಿಸಿಕೊಂಡಿದ್ದರೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂಬ ನಿಯಮವಿದೆ. ಹಾಗಿದ್ದರೂ 8,881 ಅಧಿಕಾರಿಗಳ ವಿರುದ್ಧ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಇ-ಆಡಲಿತ) ಏಳಕ್ಕೂ ಹೆಚ್ಚು ಅರ್ಜಿ ವಿಲೇವಾರಿ ಮಾಡದೇ ಇರುವ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.

ನಿಯಮವೇನು?
ಸಕಾಲದಡಿ 897 ಸೇವೆಗಳು ಲಭ್ಯವಿದ್ದು, ಪ್ರತಿ ಸೇವೆಯನ್ನು ಇಂತಿಷ್ಟು ಅವಧಿಯಲ್ಲಿ ಒದಗಿಸಬೇಕೆಂಬ ನಿಯಮವಿದೆ. ಒಂದು ವೇಳೆ ಸಕಾಲದಲ್ಲಿ ಸೇವೆ ಲಭ್ಯವಾಗದಿದ್ದರೆ ಅರ್ಜಿದಾರರು ಮೇಲ್ಮನವಿ ಸಲ್ಲಿಸಲು ಅವಕಾಶವಿರಲಿದೆ. ಜತೆಗೆ ಪ್ರತಿ ದಿನದ ವಿಳಂಬಕ್ಕೆ ಸಂಬಂಧಪಟ್ಟ ಅಧಿಕಾರಿಗೆ 20ರೂ. ದಂಡ ವಿಧಿಸಿ ಅದನ್ನು ಅರ್ಜಿದಾರರಿಗೆ ಒದಗಿಸಲು ಅವಕಾಶವಿದೆ.

ಯೋಜನೆ ವ್ಯಾಪ್ತಿಯಲ್ಲೇ ಲೋಪ
ವಿಚಿತ್ರವೆಂದರೆ ಸಕಾಲ ಯೋಜನೆ ವ್ಯಾಪ್ತಿಯನ್ನು ಒಳಗೊಂಡ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲೇ ಆರು ಅಧಿಕಾರಿಗಳು  ಅರ್ಜಿ ವಿಲೇವಾರಿ ಮಾಡದೆ ಬಾಕಿ ಉಳಿಸಿಕೊಂಡಿದ್ದಾರೆ.

ಅರ್ಜಿ ಬಾಕಿ ಉಳಿಸಿಕೊಂಡ ಅಧಿಕಾರಿಗಳು
1. ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ – 3,583
2. ಕಂದಾಯ ಇಲಾಖೆ – 1,150
3. ಗೃಹ ಇಲಾಖೆ – 872
4. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – 463
5. ಸಾರ್ವಜನಿಕ ಶಿಕ್ಷಣ ಇಲಾಖೆ – 289
6. ಮುದ್ರಾಂಕ ಮತ್ತು ನೋಂದಣಿ ಇಲಾಖೆ -255

Advertisement

ಶಿಕ್ಷೆಯೂ ಉಂಟು
ಯಾವುದೇ ಅಧಿಕಾರಿ ಏಳಕ್ಕೂ ಹೆಚ್ಚು ಅರ್ಜಿ ಬಾಕಿ ಉಳಿಸಿಕೊಂಡರೆ ಅವರ ವಿರುದ್ಧ ಇಲಾಖೆ ವಿಚಾರಣೆ ನಡೆಯಬೇಕು. ನಿರ್ಲಕ್ಷ್ಯ ತೋರಿರುವುದು ಸಾಬೀತಾದರೆ ಸೂಕ್ತ ಕ್ರಮ ಜರುಗಿಸಬೇಕು. ಬಡ್ತಿ ಕಡಿತ ಸೇರಿ ಇತರೆ ಕ್ರಮಕ್ಕೂ ನಿಯಮದಲ್ಲಿ ಅವಕಾಶವಿದೆ.

ಸಮರ್ಪಕವಾಗಿ ಸೇವೆ ದೊರೆಯುವಂತೆ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆೆ. ಏಳಕ್ಕೂ ಹೆಚ್ಚು ಅರ್ಜಿ ಬಾಕಿ ಉಳಿಸಿಕೊಂಡ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಇ- ಆಡಳಿತ) ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಇಲಾಖಾ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.
– ಕೆ. ಮಥಾಯಿ, ಸಕಾಲ ಆಡಳಿತಾಧಿಕಾರಿ

– ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next