Advertisement

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

12:17 AM Sep 12, 2022 | Team Udayavani |

ನಮ್ಮ ಹಿರಿಯರಿಗೆ ಅನುಭವ ಮತ್ತು ಅವರ ಹಿರಿಯರಿಂದ ಹರಿದು ಬಂದ ಜ್ಞಾನವೇ ವಿದ್ಯೆ, ಬದುಕಿಗೆ ಹಾದಿಯಾಗಿತ್ತು. ಇದರೊಂದಿಗೆ ವಿಶೇಷವಾದ ಕೌಶಲವೂ ಕರಗತವಾಗಿತ್ತು. ಇದು ಇಂದಿಗೂ ನಾವು ಕಾಣುವ ಒಂದು ಸತ್ಯ. ಕಲಿತ ಪದವಿಗೂ ಉದ್ಯೋಗಕ್ಕೂ ಸಂಬಂಧವಿಲ್ಲ. ಕೃಷಿ ಕಾಲೇಜುಗಳಲ್ಲಿ ಓದಿ ಪದವಿ ಪಡೆದ ಎಷ್ಟು ಮಂದಿ ಕೃಷಿ ಕ್ಷೇತ್ರವನ್ನು ತಮ್ಮ ಜೀವನಕ್ಕಾಗಿ ಆರಿಸಿಕೊಳ್ಳುತ್ತಾರೆ? ಪುಸ್ತಕದ ಜ್ಞಾನವೇ ಬೇರೆ, ಕೃಷಿ ಕ್ಷೇತ್ರದ ಪ್ರಾಯೋಗಿಕ ಜ್ಞಾನವೇ ಬೇರೆ ಎಂದು ಕೃಷಿಯಲ್ಲಿ ತೊಡಗಿಸಿಕೊಂಡ ಬಳಿಕವಷ್ಟೇ ಅರಿವಿಗೆ ಬರುತ್ತದೆ.

Advertisement

ನಮ್ಮ ಹಿರಿಯರು ಮಾತಿನ ನಡುವೆ ಪುಂಖಾನುಪುಂಖ ವಾಗಿ ಗಾದೆಗಳನ್ನು ಹರಿಸುತ್ತಿದ್ದರು. ಆಗಾಗ ಒಗಟುಗಳನ್ನು ಎಸೆದು ಅದನ್ನು ಬಿಡಿಸುವಂತೆ ಸವಾಲು ಹಾಕುತ್ತಿದ್ದರು. ಕೆಲವರು ಮಾತಿನ ಮಧ್ಯೆ ಅದೆಷ್ಟೋ ದಾಸರ ಹಾಡುಗಳ ಸಾಲುಗಳನ್ನು ನಿದರ್ಶನವಾಗಿ ನೀಡುತ್ತಿದ್ದರು. ಇನ್ನು ಕೆಲವರಿಗೆ ಸರ್ವಜ್ಞನ ವಚನಗಳು ನಾಲಗೆಯ ಮೇಲೆ. ಸಂದರ್ಭಕ್ಕೆ ತಕ್ಕಂತೆ ಹೊರಬೀಳುತ್ತಿದ್ದವು. ಅನೇಕರಿಗೆ ಯಕ್ಷಗಾನ ಸಾಹಿತ್ಯವೂ ಕಂಠಪಾಠ; ಹಾಗೆಂದು ಮೇಳದಲ್ಲಿ ತಿರುಗಾಟ ನಡೆಸಿದವರಲ್ಲ. ಸಾಕಷ್ಟು ಆಟ ನೋಡಿದವರು. ಕಲಾವಿದರ ಒಡನಾಟದಲ್ಲಿ ಸದಾ ಇದ್ದವರು. ಇನ್ನು ಆ ಕಾಲದ ಹಳ್ಳಿಯ ಪಂಡಿತರು. ಅವರಿಗೆ ರೋಗದ ಲಕ್ಷಣ ಹೇಳಿದರೆ ಸಾಕು. ಇಂಥ ಗಿಡಮೂಲಿಕೆಯನ್ನು ಸೂಚಿಸಿ ಔಷಧದ ಮಾಹಿತಿ ನೀಡುತ್ತಿದ್ದರು. ಯಾವ ಗಿಡದಲ್ಲಿ ಯಾವ ಔಷಧೀಯ ಗುಣಗಳಿವೆ ಎಂಬುದನ್ನು ಪತ್ತೆ ಹಚ್ಚುವಲ್ಲಿ ಅವರು ನಿಷ್ಣಾತರು. ಅವರೇನೂ ವೈದ್ಯಕೀಯ ಅಥವಾ ಸಸ್ಯಶಾಸ್ತ್ರದಲ್ಲಿ ಪದವಿ ಪಡೆದವರಲ್ಲ. ಇಂದಿಗೂ ಕೆಲವರು ಮೆಕ್ಯಾನಿಕ್‌ಗಳಿದ್ದಾರೆ. ಅವರಲ್ಲಿ ಯಾವುದೇ ತಾಂತ್ರಿಕ ಕೋರ್ಸಿನ ಪ್ರಮಾಣಪತ್ರವಿಲ್ಲ. ಅವರಿಗೆ ಫೋನಾಯಿಸಿ, ವಾಹನದ ಸಮಸ್ಯೆ ಹೇಳಿದರೆ ಸಾಕು. ಅದರ ದೋಷ ಎಲ್ಲಿ ಎಂದು ಅಲ್ಲಿಂದಲೇ ಹೇಳುತ್ತಾರೆ. ಕೃಷಿ ಕುಟುಂಬದಲ್ಲಿ ಹಿರಿಯರೊಂದಿಗೆ ಹಾರೆ ಹೆಗಲಿ ಗೇರಿಸಿಕೊಂಡು ಗದ್ದೆಗೆ ಹೋಗುವುದು ಸಾಮಾನ್ಯವಾಗಿತ್ತು. ಹಿರಿಯರೊಂದಿಗೆ ಕೃಷಿ ಚಟುವಟಿಕೆಗಳ ಕಲಿಕೆ ಅಂದು ವಿಶೇಷವಾಗಿತ್ತು. ಯಾವ ಮಣ್ಣಿಗೆ ಯಾವ ಬೆಳೆ, ಯಾವ ಗೊಬ್ಬರ ಯಾವ ಬೆಳೆಗೆ ಈ ಜ್ಞಾನಗಳೆಲ್ಲ ಅಂದು ಪಠ್ಯ ದಲ್ಲಿರಲಿಲ್ಲ. ಹಿರಿಯರ ಅನುಭವದಲ್ಲಿ ಅಡಗಿತ್ತು. ಅದೇ ಕೃಷಿ ಕುಟುಂಬದ ಕಿರಿಯರಿಗೂ ಹರಿದು ಬಂತು. ಇದ ರಂತೆ ಶಿಲ್ಪಕಲೆ ಮೊದಲಾಗಿ ಅನೇಕ ಕರಕುಶಲ ಕಲೆಗಳು ನಮ್ಮ ಹಿರಿಯರಿಗೆ ಒಲಿದು ಬಂದ ವಿದ್ಯೆಗಳಾಗಿದ್ದವು.

ಬ್ರಿಟಿಷರ ಕಾಲದಲ್ಲಿ ಉದ್ಯೋಗ
ಬ್ರಿಟಿಷ್‌ ಶಿಕ್ಷಣ ಪದ್ಧತಿ ನಮ್ಮಲ್ಲಿ ಬೇರೂರುವ ಮೊದಲು ಜ್ಞಾನಪರಂಪರೆಯಲ್ಲಿ ಈ ವೈವಿಧ್ಯ ಹೇರಳವಾಗಿತ್ತು. ಹಿರಿಯರಿಂದ ಬಳುವಳಿಯಾಗಿ ಬಂದ ಈ ಜ್ಞಾನಪರಂಪರೆಗೆ ವಿಶೇಷ ಮಹತ್ವವಿತ್ತು. ಅದೇ ಅವರ ಜೀವನೋಪಾಯದ ಮಾರ್ಗವೂ ಆಗಿತ್ತು. ಈ ವೃತ್ತಿ ಬಗ್ಗೆ ಅವರಿಗೆ ಅಭಿಮಾನವೂ ಇತ್ತು. ಹಾಗಾಗಿ ಬ್ರಿಟಿಷರ ಕಾಲದಲ್ಲಿ ಉದ್ಯೋಗಕ್ಕೆ ಸೇರುವುದು ಸ್ವಾಭಿಮಾನದ ಪ್ರಶ್ನೆಯಾಗಿತ್ತು. ಕೃಷಿಕನಿಗಿರುವ ಗೌರವ ಈ ಉದ್ಯೋಗಕ್ಕಿರಲಿಲ್ಲ. ಏನಿದ್ದರೂ ಅದೊಂದು ಗುಲಾಮಗಿರಿ ಎಂಬ ಭಾವನೆ ಭಾರತೀಯರಲ್ಲಿತ್ತು. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಅನೇಕ ದೇಶಭಕ್ತರು ಉದ್ಯೋಗಕ್ಕೆ ವಿದಾಯ ಹೇಳಿದರು. ಬ್ರಿಟಿಷ್‌ ಮಾದರಿಯ ಶಿಕ್ಷಣ ನೀಡುವ ಶಾಲಾ, ಕಾಲೇಜುಗಳನ್ನೂ ಬಹಿಷ್ಕರಿಸಿದರು. ಈ ಶಿಕ್ಷಣಕ್ಕೆ ಪ್ರತಿಯಾಗಿ ರಾಷ್ಟ್ರೀಯ ಶಾಲೆಗಳು ಹುಟ್ಟಿಕೊಂಡವು.

ಹಿರಿಯರಿಂದ ಹರಿದು ಬಂದ ಜ್ಞಾನ
ನಮ್ಮ ಹಿರಿಯರ ಈ ಜ್ಞಾನವೇ ಅಂದು ದೊಡ್ಡ ಸಂಪತ್ತಾಗಿತ್ತು. ಇವರಲ್ಲಿ ಅನೇಕರು ಶಾಲೆಯ ಮೆಟ್ಟಿಲೇರಿದವರಲ್ಲ. ಒಂದೊಮ್ಮೆ ಓದಿದ್ದರೂ ಕಡಿಮೆ ವಿದ್ಯಾಭ್ಯಾಸ. ಅವರ ಹಿರಿಯರ ಅನುಭವ ಮತ್ತು ಅವರಿಂದ ಬಂದ ಜ್ಞಾನವೇ ಅವರ ವಿದ್ಯೆ, ಬದುಕಿಗೆ ಹಾದಿ. ಇದರೊಂದಿಗೆ ವಿಶೇಷವಾದ ಕೌಶಲವೂ ಕರಗತವಾಗಿತ್ತು. ಇಂದಿಗೂ ನಾವು ಕಾಣುವ ಒಂದು ಸತ್ಯ. ಕಲಿತ ಪದವಿಗೂ ಉದ್ಯೋಗಕ್ಕೂ ಸಂಬಂಧವಿಲ್ಲ. ಕೃಷಿ ಕಾಲೇಜುಗಳಲ್ಲಿ ಓದಿ ಪದವಿ ಪಡೆದ ಎಷ್ಟು ಮಂದಿ ಕೃಷಿ ಕ್ಷೇತ್ರವನ್ನು ತಮ್ಮ ಜೀವನಕ್ಕಾಗಿ ಆರಿಸಿಕೊಳ್ಳುತ್ತಾರೆ? ಒಂದೊಮ್ಮೆ ಆರಿಸಿ ಕೊಂಡರೂ ನಿಧಾನವಾಗಿ ಅವರ ಗಮನಕ್ಕೆ ಬರಬಹುದು. ಪುಸ್ತಕದ ಜ್ಞಾನವೇ ಬೇರೆ, ಕೃಷಿ ಕ್ಷೇತ್ರದ ಪ್ರಾಯೋಗಿಕ ಜ್ಞಾನವೇ ಬೇರೆ. ಈಗಿನ ಎಲ್ಲ ಉದ್ಯೋಗಗಳಿಗೂ ಮಾನ್ಯತೆ ಪಡೆದ ವಿ.ವಿ.ಯಿಂದ ಪಡೆದ ಪದವಿಯೇ ಕನಿಷ್ಠ ಅರ್ಹತೆ. ಇನ್ನು ನೇಮಕ ಮಾಡಿಕೊಂಡ ಕಂಪೆನಿ ಅಥವಾ ಸಂಸ್ಥೆಯವರು ಅವರಿಗೆ ಪ್ರತ್ಯೇಕ ತರಬೇತಿ ನೀಡುತ್ತಾರೆ. ಇಲ್ಲಿಯೂ ಮುಖ್ಯವಾದುದು ಕೌಶಲ. ಈ ಕೌಶಲವು ಕೇವಲ ಓದಿನಿಂದ ಸಾಧ್ಯವಿಲ್ಲ. ಮಾಹಿತಿ ಸಂಗ್ರಹದಂತಿರುವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಪರೀಕ್ಷೆಗಾಗಿ ತಯಾರಿ. ಅಂಕಗಳಿಗಾಗಿ ಓದು. ಆದರೆ ಕೌಶಲ ಅದರಿಂದಾಚೆಗೆ ಕಾರ್ಯನಿರ್ವಹಿಸುತ್ತದೆ. ಒಂದರ್ಥದಲ್ಲಿ ಇದೇ ನಿಜವಾದ ಬುದ್ಧಿವಂತಿಕೆ.

ಮೆಕಾಲೆ ಶಿಕ್ಷಣ
ಮೆಕಾಲೆ ತಂದ ಶಿಕ್ಷಣ ಪದ್ಧತಿಯ ಪರಿಣಾಮವೋ ಏನೋ? ನಮ್ಮ ಜ್ಞಾನದ ವೈವಿಧ್ಯ ಪರಂಪರೆ ಕಣ್ಮರೆಯಾಯಿತು. ಬ್ರಿಟಿಷ್‌ ಮಾದರಿಯ ಶಿಕ್ಷಣ ನಮಗೆ ಬಹಳ ಪ್ರಿಯವಾಯಿತು. ಈ ಪದವಿಯನ್ನು ಓದಿದವರಿಗೆ ಮಾತ್ರ ಸಮಾಜದಲ್ಲಿ ವಿಶೇಷವಾದ ಗೌರವ ಹಾಗೂ ಸರಕಾರಿ ಉದ್ಯೋಗ ಎಂಬ ಭಾವನೆ ಬೆಳೆಯಲಾರಂಭಿಸಿತು. ಭಾರತದಲ್ಲಿ ಬ್ರಿಟಿಷರು ಬಿಟ್ಟು ಹೋದ ಈ ಶಿಕ್ಷಣ ಪದ್ಧತಿಯನ್ನು ಅನೇಕರು ಟೀಕಿಸಿದರು. ಶಿಕ್ಷಣ ಎಂದರೆ ಕೇವಲ ಮಾಹಿತಿ ಸಂಗ್ರಹವಲ್ಲ. ಸಂಸ್ಕಾರ ಅಥವಾ ಗುಣಗಳನ್ನು ನಮ್ಮಲ್ಲಿ ಬೆಳೆಸಬೇಕು ಎಂದು ಪ್ರತಿಪಾದಿಸಿದರು. ಈ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆಗಳೂ ನಡೆದವು. ಸುಧಾರಣೆಯತ್ತ ಚಿಂತನೆಗಳೂ ನಡೆದವು. ಆದರೆ ಈ ಎಚ್ಚರ ನಮ್ಮಲ್ಲಿ ಮೂಡುವಾಗ ನಮ್ಮ ಜ್ಞಾನಪರಂಪರೆಯ ಅನೇಕ ಅಂಶಗಳು ಕಣ್ಮರೆಯಾಗಿದ್ದವು. ಕೌಶಲಾಧಾರಿತ ಅನೇಕ ಕಸುಬುಗಳು ಪ್ರೋತ್ಸಾಹವಿಲ್ಲದೆ ಅಸ್ತಿತ್ವವನ್ನು ಕಳೆದುಕೊಂಡಿದ್ದವು. ಇಂದಿಗೂ ಇದು ಮುಂದುವರಿಯುತ್ತಿದೆ. ಉದಾಹರಣೆಗೆ ಈಗ ಕೃಷಿಯನ್ನೇ ತೆಗೆದುಕೊಳ್ಳೋಣ. ಯಾರಿಗೆ ಬೇಕು ಹೇಳಿ? ಪದವಿ ಪಡೆದು ಸರಕಾರಿ ಅಥವಾ ಖಾಸಗಿ ಕಂಪೆನಿಗಳಲ್ಲಿ ಲಕ್ಷಗಟ್ಟಲೆ ಸಂಪಾದಿಸುವವನಿಗಿರುವ ಗೌರವ ಕೃಷಿಯೊಂದಿಗೆ ಬದುಕುತ್ತಿರುವ ವಿದ್ಯಾವಂತ ಕೃಷಿಕನಿಗಿಲ್ಲ. ಇವನನ್ನು ಮದುವೆಯಾಗಲೂ ಹಿಂದೆ ಮುಂದೆ ನೋಡುವ ಕಾಲ.

Advertisement

ಸಮನ್ವಯ ಸಿದ್ಧಾಂತ
ಕೌಶಲಾಧಾರಿತ ಹಿರಿಯರ ಈ ಶ್ರೀಮಂತ ವಿದ್ಯೆಗಳನ್ನು ಕಾಪಾಡಿಕೊಳ್ಳುವುದು. ಅವಕಾಶವಿದ್ದಲ್ಲಿ ಅವರ ಕೌಶಲವನ್ನು ಆಧುನಿಕ ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವುದು. ಹಿರಿಯರ ಈ ವಿದ್ಯೆಗಳನ್ನು ಸಣ್ತೀವಿಲ್ಲದವುಗಳೆಂದು ಟೀಕಿಸುವ ಮೊದಲು ಅವುಗಳ ವೈಜ್ಞಾನಿಕ ಅಧ್ಯಯನ. ಇನ್ನೊಂದು ಯಾವುದೇ ಪದವಿ ಅಥವಾ ಪ್ರಮಾಣಪತ್ರಗಳಿಲ್ಲದ ಈ ವಿವಿಧ ಕ್ಷೇತ್ರಗಳ ಪರಿಣತರನ್ನು ಗುರುತಿಸಿ ಅವರ ಅನುಭವಗಳ ಸದುಪಯೋಗ ಮಾಡಿಕೊಳ್ಳುವುದು. ವಿ. ವಿ. ಅಥವಾ ಕಾಲೇಜುಗಳಲ್ಲಿ ಓದಿ ಪ್ರಮಾಣಪತ್ರ ಪಡೆದವರೊಂದಿಗೆ ಈ ಜ್ಞಾನಪರಂಪರೆಯ ಅನುಭವುಳ್ಳವರಿಗೂ ಸೂಕ್ತ ಗೌರವ ನೀಡುವುದು. ಉದಾ: ಕೃಷಿ ಕ್ಷೇತ್ರ. ವಿ. ವಿ.ಗಳಲ್ಲಿ ಓದದ ಅನೇಕ ಕೃಷಿ ಪಂಡಿತರು ನಮ್ಮ ನಡುವೆ ಇದ್ದಾರೆ. ಅವರ ಜ್ಞಾನವನ್ನು ಪಡೆಯಬಹುದು.

ಆಧುನಿಕ ಶಿಕ್ಷಣಕ್ಕಿಂತ ಭಿನ್ನವಾದ ಈ ದೇಶೀಯ ಜ್ಞಾನಪರಂಪರೆಯು ಹಿಂದೆ ಎಲ್ಲ ಕ್ಷೇತ್ರಗಳಲ್ಲೂ ಸಾಕಷ್ಟು ವಿಶಾಲವಾಗಿತ್ತು. ಅವರು ಅನುಭವಿ ಗಳಾದರೂ ಅವರಲ್ಲಿ ಕೆಲವರಲ್ಲಿ ಸಂವಹನದ ಕೌಶಲದ ಕೊರತೆ ಕಾಡುತ್ತಿತ್ತು. ಹಾಗಾಗಿ ಅವರ ಜ್ಞಾನ ಪ್ರಚಾರಕ್ಕೆ ಬರಲಿಲ್ಲ. ಅದು ಅವರಿಗೆ ಇಷ್ಟದ ಸಂಗತಿಯೂ ಆಗಿರಲಿಲ್ಲ. ಅಂಥವರನ್ನು ಗುರುತಿಸಿ ಅವರ ಅನುಭವಗಳನ್ನು ನಮ್ಮ ಮುಂದಿನವರಿಗೆ ಪರಿಚಯಿಸುವ ಕೆಲಸವಾಗಬೇಕು.

– ಡಾ| ಶ್ರೀಕಾಂತ್‌ ಸಿದ್ದಾಪುರ

Advertisement

Udayavani is now on Telegram. Click here to join our channel and stay updated with the latest news.

Next