Advertisement

ಕಣ್ಮರೆಯಾಗುತ್ತಿದೆ ಕರಾವಳಿ ಕೃಷಿಕರ ಭತ್ತದ ಕಣಜ

12:15 AM Nov 19, 2019 | Sriram |

ಬೆಳ್ಮಣ್‌: ಆಧುನಿಕ ಬದುಕಿನ ಧಾವಂತದಲ್ಲಿ ಕರಾವಳಿ ಭಾಗದ ರೈತರು ಹೊಲದಲ್ಲಿ ಬೆಳೆದ ಬೆಳೆಗಳನ್ನು ಗದ್ದೆ ಗಳಲ್ಲಿಯೇ ವಿಲೇವಾರಿ ಮಾಡಿ ಹೊಲದಿಂದ ನೇರ ಅಕ್ಕಿ ಗಿರಣಿಗೆ ಸಾಗಿಸುತ್ತಿದ್ದು ಕೃಷಿಕರ ಹೆಮ್ಮೆಯ ಭತ್ತದ ಕಣಜ (ತುಪ್ಪೆ, ತಿರಿ) ನೇಪಥ್ಯಕ್ಕೆ ಸರಿಯುತ್ತಿದೆ.

Advertisement

ಕರಾವಳಿ ಜಿಲ್ಲೆಗಳ ಪ್ರತಿಯೊಂದು ರೈತರ ಮನೆಯ ಅಂಗಳದಲ್ಲಿ ಕಟಾವು ಮುಗಿದ ಬಳಿಕ 3-4 ತಿಂಗಳು ರಾರಾಜಿಸುತ್ತಿದ್ದ ಈ ಭತ್ತದ ಕಣಜಗಳು ನಾನಾ ಕಾರಣಗಳಿಂದ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ.

ಕೃಷಿ ಪರಿಕರಗಳ ಪೈಕಿ ಬಹಳಷ್ಟು ಆಕರ್ಷಣೆಯ ಈ ತುಪ್ಪೆಗಳು ಇನ್ನು ಇತಿಹಾಸ ಮಾತ್ರ. ಕೂಲಿಯಾಳುಗಳ ಕೊರತೆಯಿಂದಾಗಿ ಯಾಂತ್ರೀಕೃತ ಕೃಷಿ ಪದ್ಧತಿಗಳತ್ತ ಒಲವು ತೋರುತ್ತಿರುವ ರೈತರು ಉಳುಮೆಯ ಕೋಣ ಮಾರಾಟ ಮಾಡಿ ಟ್ರಾಕ್ಟರ್‌ಗಳಿಗೆ ಜೋತು ಬಿದ್ದಾಗಲೇ ನೊಗ, ನೇಗಿಲುಗಳ ವಿಳಾಸವೇ ಇಲ್ಲದಂತಾಯಿತು. ಇದರ ಬೆನ್ನಲ್ಲೇ ಮಹಿಳೆಯರ ಮೂಲಕ ನಾಟಿ, ಕೊಯ್ಲು ಮಾಡುತ್ತಿದ್ದ ಕರಾವಳಿಯ ಕೃಷಿಕ ಈಗ ನಾಟಿ ಯಂತ್ರಗಳ ಮೂಲಕ ನಾಟಿ ನಡೆಸಿ ಕಟಾವು ಯಂತ್ರಗಳ ಮೂಲಕ ಕಟಾವು ಮಾಡಿ ಕೈ ತೊಳೆದುಕೊಂಡಿದ್ದಾನೆ.

ಕಾಣೆಯಾದ ಕಣಜ
ಹಿಂದೆ ರೈತರು ಎಕರೆಗಟ್ಟಲೆ ಸಾಗುವಳಿ ಮಾಡಿ ಮನೆಯಂಗಳದಲ್ಲಿ ಪರ್ವತದೆತ್ತರದ ಭತ್ತದ ಕಣಜ (ಕೆಲವು ಕಡೆ 2-3) ಹಾಕಿ ಕೃಷಿ ಬದುಕಿನ ಬಗ್ಗೆ ಹೆಮ್ಮೆ ಪಡುತ್ತಿದ್ದರು. ಕೆಲವರಿಗೆ ಇದು ಶ್ರೀಮಂತಿಕೆಯ ಪ್ರತೀಕವೂ ಆಗಿತ್ತು.

ಕಣಜದೊಳಗೆ ಹಾಕಿದ ಶುದ್ಧ ಭತ್ತವನ್ನು 3-4 ತಿಂಗಳುಗಳ ಬಳಿಕ ತೆಗೆದು ಒಂದೋ ಮನೆಯಲ್ಲಿಯೇ ಬೇಯಿಸಿ, ಒಣಗಿಸಿ ಗಿರಣಿಗೆ ಸಾಗಿಸಿ ಅದೇ ಭತ್ತದ ಅಕ್ಕಿ ಪಡೆಯಲಾಗುತ್ತಿತ್ತು. ಇಲ್ಲವೇ ಹಸಿ ಭತ್ತವನ್ನು ಗಿರಣಿಗೆ ಕೊಂಡೊಯ್ದು ಅದೇ ಭತ್ತದ ಅಕ್ಕಿಯನ್ನು ತರಲಾಗುತ್ತಿತ್ತು. ಆದರೆ ಈಗ ಮನೆಯಲ್ಲಿ ಭತ್ತ ಬೇಯಿಸುವವರೇ ಇಲ್ಲ ಎನ್ನಬಹುದು.

Advertisement

ಈಗಂತೂ ಹೊಲದಿಂದ ಶುದ್ಧ ಮಾಡದ ಕಳೆ ತುಂಬಿದ ಭತ್ತಗಳನ್ನು ಗೋಣಿ ಚೀಲಕ್ಕೆ ತುಂಬಿ ಮಿಲ್ಲಿಗೆ ಕೊಟ್ಟು ಹಣ ಪಡೆಯುತ್ತಿದ್ದಾರೆ. ಅವರ ಭತ್ತದ ಅಕ್ಕಿಯನ್ನು ಅವರೇ ಪಡೆಯುವವರು ತೀರಾ ವಿರಳವಾಗಿದ್ದಾರೆ.

ಅನುಭವಿ ಆಳುಗಳ ಕೊರತೆ
ಭತ್ತದ ಕಣಜದ ರಾಶಿಯನ್ನು ಒಪ್ಪ ಓರಣ ಮಾಡುವುದೂ ಒಂದು ಕೌಶಲ. ಈಗ ಅಂತಹ ಕೈಚಳಕದ ಅನುಭವಿ ಕೃಷಿಕರೂ ಇಲ್ಲದ ಕಾರಣ ಈ ಕಣಜಗಳ ಪರಿಕಲ್ಪನೆ ನೇಪಥ್ಯಕ್ಕೆ ಸರಿಯುತ್ತಿದೆ. ಅನುಭವಿಗಳಿಂದ ಮಾತ್ರ ಇಂತಹ ಕಣಜ ತಯಾರಿ ಸಾಧ್ಯ. ಕಟ್ಟೆಯಲ್ಲಿ ಆರಂಭದಲ್ಲಿ ಇಡುವ ಬೈಹುಲ್ಲಿನ ಸರಪಳಿಯಿಂದ ತುದಿಯ ತಿರಿಯವರೆಗೂ ಲೆಕ್ಕಾಚಾರವಿದೆ. ಇದರಲ್ಲಿ ಎಡವಟ್ಟು ಆದರೆ ಕಣಜಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ.

ಹಿಂದೆಲ್ಲ ಭತ್ತದ ಕಣಜ ನಿರ್ಮಿಸುವು ದೆಂದರೆ ಅದು ಆಸುಪಾಸಿನ ಜನರಿಗೆ ಸಂಭ್ರಮದ ದಿನ. ಮನೆ ಮಂದಿ ಮಾತ್ರವಲ್ಲದೆ ಪರಿಸರದ ಜನರೂ ಬಂದು ಅದಕ್ಕೆ ಕೈ ಜೋಡಿಸುತ್ತಿದ್ದರು. ಕಣಜ ಪೂರ್ತಿಯಾದ ಬಳಿಕ ಕೆಲವು ಮನೆಗಳಲ್ಲಿ ವಿಶೇಷ ಊಟವನ್ನೂ ಒದಗಿಸಲಾಗುತ್ತಿತ್ತು. ಆದರೆ ಇವೆಲ್ಲವೂ ಈಗ ಮಾಯವಾಗುತ್ತಿದೆ.

ಮುಂದಿನ ಪೀಳಿಗೆಗೆ ಪರಿಚಯಿಸಿ
ನಮ್ಮ ಕೃಷಿ ಪರಂಪರೆಯ ಹೆಮ್ಮೆಯಾಗಿರುವ ಈ ಸಿರಿ ತುಪ್ಪೆಗಳನ್ನು ನಾವು ಇಂದಿಗೂ ಮುಂದುವರಿಸಿದ್ದೇವೆ. ಕೂಲಿಯಾಳುಗಳ ಕೊರತೆ ಇದ್ದರೂ ನಮ್ಮ ಕೃಷಿ ಬದುಕಿನ ಆಯಾಮಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಾದುದು ನಮ್ಮ ಕರ್ತವ್ಯ.
-ಸುಕುಮಾರ ಶೆಟ್ಟಿ,ತಾಳಿಪಾಡಿಗುತ್ತು,ಪ್ರಗತಿಪರ ಕೃಷಿಕರು

ಪರಂಪರೆ ಉಳಿಕೆ ಕಷ್ಟಕರ
ಇಂದಿನ ಕಾಲದಲ್ಲಿ ಕೂಲಿಯಾಳುಗಳ ಕೊರತೆ, ಪ್ರಕೃತಿಯ ಅಸಮತೋಲನದ ನಡುವೆ ಕೃಷಿ ಕಾರ್ಯ ನಡೆಸುವುದೇ ಒಂದು ಸವಾಲು. ಹಾಗಾಗಿ ಕಣಜ ದಂತಹ ಪೂರ್ವ ಕಾಲದ ಪರಂಪರೆ ಉಳಿಸಲುವುದು ಕಷ್ಟದ ಮಾತು.
-ಸುಧಾಕರ ಸಾಲ್ಯಾನ್‌,ಸಂಕಲಕರಿಯ

-ಶರತ್‌ ಶೆಟ್ಟಿ ಬೆಳ್ಮಣ್‌

Advertisement

Udayavani is now on Telegram. Click here to join our channel and stay updated with the latest news.

Next