Advertisement

ನರ್ಮ್ ಬಸ್‌ಗಳಲ್ಲಿನ ಆಧುನಿಕ ಸೌಲಭ್ಯಗಳೇ ಮಾಯ!

10:01 AM Oct 22, 2018 | Team Udayavani |

ಮಹಾನಗರ: ನಗರದ ವಿವಿಧ ಭಾಗಗಳಲ್ಲಿ ಓಡಾಡುತ್ತಿರುವ ಕೆಎಸ್‌ಆರ್‌ ಟಿಸಿ ನರ್ಮ್ ಬಸ್‌ ಆರಂಭವಾಗುವ ಸಮಯದಲ್ಲಿ ಇದ್ದ ಅನೇಕ ಹೈಟೆಕ್‌ ಸೌಲಭ್ಯಗಳು ದಿನಕಳೆದಂತೆ ಮಾಯವಾಗುತ್ತಿದೆ. ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ನೀಡುವ ನಿಟ್ಟಿನಲ್ಲಿ ಆರಂಭಗೊಂಡ ಕೆಎಸ್‌ಆರ್‌ಟಿಸಿ ನರ್ಮ್ ಬಸ್‌ ನಗರದ ವಿವಿಧ ಕಡೆಗಳಿಗೆ ದಿನನಿತ್ಯ ಪ್ರಯಾಣ ನಡೆಸುತ್ತಿದ್ದು, ಇತರ ಬಸ್‌ ಗಳಿಂದ ವಿಭಿನ್ನ ಹಾಗೂ ಪ್ರಯಾಣಿಕ ಸ್ನೇಹಿಯಾಗಿರಬೇಕು ಎನ್ನುವ ನಿಟ್ಟಿನಲ್ಲಿ ಹಲವು ಸೌಲಭ್ಯಗಳನ್ನು ನರ್ಮ್ ಬಸ್‌ಗೆ ನೀಡಲಾಗಿತ್ತು. ಆದರೆ ಇದೀಗ ನಗರದಲ್ಲಿ ಸಂಚರಿಸುತ್ತಿರುವ ಬಹುತೇಕ ಬಸ್‌ಗಳಲ್ಲಿ ಹಿಂದೆ ಇದ್ದ ಸೌಲಭ್ಯಗಳು ಮಾಯವಾಗಿವೆ.

Advertisement

ಸ್ಟೀಕರ್‌ ಮಾತ್ರ
ನಗರದಲ್ಲೇ ಓಡಾಡುವವರಿಗೆ ನಗರದ ಎಲ್ಲ ಬಸ್‌ ನಿಲ್ದಾಣಗಳ ಬಗ್ಗೆ ಅರಿವಿರುತ್ತದೆ. ಆದರೆ ಹೊರ ಭಾಗಗಳಿಂದ ಬರುವವರಿಗೆ ಅರಿವಿರುವುದಿಲ್ಲ. ಈ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಬಸ್‌ ನಿಲ್ದಾಣ ಸಮೀಪಿಸುತ್ತಿದ್ದಂತೆ ಅದು ಯಾವ ಬಸ್‌ ನಿಲ್ದಾಣ ಎಂಬ ಕುರಿತಂತೆ ತಿಳಿಸುವುದಕ್ಕಾಗಿ ನರ್ಮ್ ಬಸ್‌ನಲ್ಲಿ ಸ್ಪೀಕರ್‌ ಮೂಲಕ ಸ್ಥಳದ ಹೆಸರು ಹೇಳುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈಗ ಬಸ್‌ನಲ್ಲಿ ಸ್ಪೀಕರ್‌ ಮಾತ್ರ ಇದ್ದು, ಸ್ಥಳದ ಹೆಸರು ತಿಳಿಸುವ ವ್ಯವಸ್ಥೆ ಇಲ್ಲ.

ಬಸ್‌ ನಿಲುಗಡೆ ಬೆಲ್‌ ವ್ಯವಸ್ಥೆಯೂ ಬಂದ್‌
ಪ್ರಯಾಣಿಕರು ತಾವು ಇಳಿಯಬೇಕಾದ ಸ್ಥಳ ಬಂದಾಗ ಕಂಡೆಕ್ಟರ್‌ ಬಳಿ ಹೇಳಬೇಕು ಅಥವಾ ಡ್ರೈವರ್‌ ಬಳಿ ಬಂದು ಬಸ್‌ ನಿಲ್ಲಿಸುವಂತೆ ತಿಳಿಸಬೇಕು. ಇದು ಪ್ರಯಾಣಿಕರಿಗೆ ಕಷ್ಟವಾಗುತ್ತದೆ ಎಂಬ ದೃಷ್ಟಿಯಿಂದ ನರ್ಮ್ ಬಸ್‌ನ ಒಳಭಾಗದ ಕಂಬದಲ್ಲಿ ಬೆಲ್‌ ಅಳವಡಿಸಲಾಗಿತ್ತು. ಬೆಲ್‌ ಪ್ರಸ್‌ ಮಾಡಿದಾಗ ಕೂಡಲೇ ಸಂದೇಶ ಡ್ರೈವರ್‌ ಗೆ ಹೋಗಿ ಬಸ್‌ ನಿಲುಗಡೆಯಾಗುತ್ತಿತ್ತು. ಆದರೆ ಈಗ ಬಹುತೇಕ ಬಸ್‌ಗಳಲ್ಲಿ ಬೆಲ್‌ ಸಂಪರ್ಕವೇ ಕಡಿತಗೊಂಡಿದೆ. ಇದರಿಂದ ನರ್ಮ್ ಬಸ್‌ಗಳೂ ಇತರ ಬಸ್‌ಗಳಂತೆ ಆಗಿವೆ ಎಂಬುದು ಪ್ರಯಾಣಿಕರ ಅಳಲು.

ಬಹುತೇಕ ಸಿಸಿ ಕೆಮರಾಗಳು ಕಾರ್ಯಾಚರಿಸುತ್ತಿಲ್ಲ
ಸುರಕ್ಷತೆಯ ದೃಷ್ಟಿಯಿಂದ ನರ್ಮ್ ಬಸ್‌ಗಳಲ್ಲಿ ಅಳವಡಿಸಲಾದ ಸಿಸಿ ಕೆಮರಾ ಕೂಡ ಬಹುತೇಕ ಬಸ್‌ ಗಳಲ್ಲಿ ಕಾರ್ಯಚರಿಸುತ್ತಿಲ್ಲ. ಡ್ರೈವರ್‌ ಸೀಟ್‌ನ ಬದಿಯಲ್ಲಿ ಅಳವಡಿಸಲಾದ ಸ್ಕ್ರೀನ್‌ನಲ್ಲಿ ಕೆಮರಾದ ದೃಶ್ಯಗಳು ಕಾಣುತ್ತಿದ್ದವು. ಆದರೆ ಈಗ ಆ ಸ್ಕ್ರೀನ್‌ ಕಾರ್ಯಚರಿಸುತ್ತಿಲ್ಲ. ಸೂಕ್ತ ನಿರ್ವಹಣೆ ಇಲ್ಲದೆ ನರ್ಮ್ ಬಸ್‌ ಈ ಸ್ಥಿತಿಗೆ ಬಂದಿದೆ ಎಂಬುದು ಪ್ರಯಾಣಿಕರಿಗೆ ಅಭಿಪ್ರಾಯ.

ಡಿಜಿಟಲ್‌ ನಾಮಫಲಕ ಆಫ್‌
ಬಸ್‌ ಯಾವ ಭಾಗದಿಂದ ಯಾವ ಭಾಗಕ್ಕೆ ಸಂಚರಿಸುತ್ತಿದೆ ಎಂಬುದನ್ನು ತಿಳಿಸುವ ಸಲುವಾಗಿ ನರ್ಮ್ ಬಸ್‌ ಗಳಲ್ಲಿ ಅಳವಡಿಸಲಾದ ಡಿಜಿಟಲ್‌ ನಾಮಫಲಕಗಳು ಬಹುತೇಕ ಬಸ್‌ಗಳಲ್ಲಿ ಆಫ್‌ ಆಗಿವೆ. ಇದರ ಬದಲಾಗಿ ಇತರ ಬಸ್‌ಗಳಂತೆ ನರ್ಮ್ ಬಸ್‌ನಲ್ಲೂ ಬೋರ್ಡ್‌ ಗಳಲ್ಲಿ ಹೆಸರುಗಳನ್ನು ಹಾಕಲಾಗಿದೆ.

Advertisement

ಗಮನಹರಿಸಲಾಗುವುದು
ನಗರದಲ್ಲಿ ಸಂಚರಿಸುತ್ತಿರುವ ನರ್ಮ್ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಗಮನಹರಿಸಲಾಗುವುದು.
– ದೀಪಕ್‌ ಕುಮಾರ್‌,
ಕೆಎಸ್‌ಆರ್‌ಟಿಸಿ ವಿಭಾಗಾಧಿಕಾರಿ

 ಪ್ರಜ್ಞಾ ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next