ತುಮಕೂರು : ಅಧಿಕಾರಕ್ಕೇರಲೇ ಬೇಕೆಂದು ನವಕರ್ನಾಟಕ ಪರಿವರ್ತನಾ ಯಾತ್ರೆ ಆರಂಭಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಘಾತಕಾರಿ ಎನ್ನುವಂತೆ ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತ ಬಹಿರಂಗಗೊಂಡಿದೆ. ಮಾಜಿ ಸಚಿವ ಸೊಗಡು ಶಿವಣ್ಣ ಬಹಿರಂಗವಾಗಿ ತಮ್ಮ ಅಸಮಧಾನ ತೋಡಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸೊಗಡು ಶಿವಣ್ಣ ‘ಬಿಜೆಪಿಯಲ್ಲಿ ಈಗ ಮೂಲ ಕಾರ್ಯಕರ್ತರಿಗೆ ಬೆಲೆ ಇಲ್ಲದಾಗಿದೆ. ಎಲ್ಲಾ ವಲಸಿಗರದ್ದೆ ಆಗಿದೆ. ಬಿಜೆಪಿ ಯಾತ್ರೆ ಕೆಜೆಪಿ ಯಾತ್ರೆಯಾಗಿ ಪರಿವರ್ತನೆಯಾಗಿದೆ’ ಎಂದು ಅಸಮಧಾನ ಹೊರ ಹಾಕಿದರು.
‘ಬಿಜೆಪಿ ಪರಿವರ್ತನಾ ಯಾತ್ರೆ ವಿಫಲವಾಗಿದ್ದು ಎಲ್ಲರನ್ನು ಒಟ್ಟಾಗಿ ಕರೆದಕೊಂಡು ಹೋಗುತ್ತಿಲ್ಲ, ಜನರನ್ನು ಬಿಜೆಪಿ ಕಾರ್ಮಿಕರನ್ನಾಗಿ 500,1000 ರೂಪಾಯಿಗಳನ್ನು ನೀಡಿ ಕರೆತರಲಾಗುತ್ತಿದೆ’ ಎಂದು ಬಾಂಬ್ ಸಿಡಿಸಿದ್ದಾರೆ.
ಯಾತ್ರೆಗೆ ಗೈರಾದ ಬಗ್ಗೆ ಪ್ರತಿಕ್ರಿಯಿಸಿ ‘ಯಡಿಯೂರಪ್ಪ ಅವರು 9 ಗಂಟೆಗೆ ಫೋನ್ ಮಾಡಿ, ಬಾರಪ್ಪ.. ಎಂದರು. ನಾನು ಜನಸಂಘದಿಂದ ಬಂದು ಪಕ್ಷಕ್ಕಾಗಿ ಹೋರಾಡಿವನು.ಈಗ ತುಮಕೂರಿನಲ್ಲಿ ಪಕ್ಷವನ್ನು ಅಪ್ಪ ಮಕ್ಕಳಿಗೆ ಬರೆದುಕೊಡಲಾಗಿದೆ’ಎಂದು ಬಸವರಾಜ್ ಮತ್ತು ಜ್ಯೋತಿ ಗಣೇಶ್ ವಿರುದ್ಧ ಆಕ್ರೋಶ ಹೊರಹಾಕಿದರು.
‘ಬಸವರಾಜ್ ಮತ್ತು ಜ್ಯೋತಿ ಗಣೇಶ್ ಅವರು ಕಾಂಗ್ರೆಸ್‌ನಿಂದ ಬರುವಾಗ ನಾನು ವಿರೋಧಿಸಿದ್ದೆ ಆದರೆ ಯಡಿಯೂರಪ್ಪ ಅವರ ಮಾತಿಗ ಕಟ್ಟು ಬಿದ್ದು ಸುಮ್ಮನಾಗಿದ್ದೆ’ ಎಂದರು.
‘ನಾನು ಗೆದ್ದು ಸಚಿವನಾಗಿದ್ದು ನನ್ನ ವರ್ಚಸ್ಸಿನಿಂದ’ ಎಂದು ಪರೋಕ್ಷವಾಗಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದರು.
‘ನಾನು ವ್ಯಕ್ತಿಗಿಂತ ಪಕ್ಷಕ್ಕೆ ಬದ್ಧನಾಗಿರುವವನು, ಈಗ ನನ್ನ ಸಹನೆಯ ಕಟ್ಟೆ ಒಡೆದು ಹೋಗುವ ಕಾಲ ಬಂದಿದೆ’ ಎಂದರು.