ನವದೆಹಲಿ: ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಾಗೂ ವಿಶ್ವ ಹಿಂದು ಪರಿಷತ್ ನಡುವೆ, ಶ್ರೀರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಣ್ಣ ಭಿನ್ನಾಭಿಪ್ರಾಯ ಎದ್ದಿದೆ.
ಮಂದಿರದ ಎತ್ತರ 125 ಅಡಿ ಇರಬೇಕೆಂದು 1987ರಲ್ಲೇ ವಿಹಿಂಪ ತೀರ್ಮಾನಿಸಿತ್ತು. ಆದರೆ ಮಂದಿರದ ಭವ್ಯತೆ ಹೆಚ್ಚಿಸಬೇಕು, ಅದನ್ನು ಮೂರಂತಸ್ತಿನಲ್ಲಿ ನಿರ್ಮಿಸಬೇಕೆಂಬ ಉದ್ದೇಶದಿಂದ ಈ ಎತ್ತರವನ್ನು 165 ಅಡಿಗೇರಿಸಲು ಟ್ರಸ್ಟ್ ತೀರ್ಮಾನಿಸಿದೆ. ಇದಕ್ಕೆ ವಿಶ್ವ ಹಿಂದು ಪರಿಷತ್ ವಿರೋಧಿಸಿದೆ ಎಂದು ಮೂಲಗಳು ಹೇಳಿವೆ.
ಎತ್ತರವನ್ನು ಹೆಚ್ಚಿಸಿದರೆ ನಿರ್ಮಾಣಕಾರ್ಯ ತಡವಾಗುತ್ತದೆ ಎನ್ನುವುದು ವಿಹಿಂಪ ಆತಂಕ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಟ್ರಸ್ಟ್ ಸದಸ್ಯ ಸ್ವಾಮಿ ಗೋವಿಂದದೇವ ಗಿರಿ, ಮಂದಿರ ನಿರ್ಮಾಣ ವಿಶ್ವಹಿಂದು ಪರಿಷತ್‌ಗೆ ಅನುಸಾರವಾಗಿಯೇ ಇರುತ್ತದೆ. ಆದರೆ ಅದರ ವಿನ್ಯಾಸ, ಅಳತೆಯಲ್ಲಿ ತುಸು ಬದಲಾವಣೆಯಾಗಬಹುದು ಎಂದಿದ್ದಾರೆ. 1987ರಲ್ಲಿ ವಾಸ್ತುಶಿಲ್ಪಿ ಚಂದ್ರಕಾಂತ್ ಸೊಂಪುರ, ವಿಹಿಂಪ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ ಬಯಕೆಯಂತೆ ದೇವಸ್ಥಾನದ ಅಳತೆಯನ್ನು ಸಿದ್ಧಪಡಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಪ್ರಧಾನಿ ಸಲಹೆ: ರಾಮಮಂದಿರ ನಿರ್ಮಾಣದ ಕೆಲಸವು ಶಾಂತಿಯುತವಾಗಿ ನಡೆಯಬೇಕು ಎಂದು ಟ್ರಸ್ಟ್ ಸದಸ್ಯರಿಗೆ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ. ಗುರುವಾರ ಮೋದಿಯನ್ನು ಟ್ರಸ್ಟ್ ಸದಸ್ಯರು ಭೇಟಿಯಾಗಿದ್ದ ವೇಳೆ, ಅವರು ಈ ಸಲಹೆ ನೀಡಿದ್ದಾಗಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.
ಜಮೀನು ಸ್ವೀಕಾರ: ಇನ್ನೊಂದೆಡೆ, ಸುಪ್ರೀಂ ಆದೇಶದಂತೆ ತಮಗೆ ನೀಡಲಾದ 5 ಎಕರೆ ಭೂಮಿಯನ್ನು ಉತ್ತರಪ್ರದೇಶ ಸುನ್ನಿ ವಕ್ಫ್ ಮಂಡಳಿ ಸ್ವೀಕರಿಸಿದೆ. ಸೋಮವಾರ ಸಭೆ ನಡೆಸಿ, ಆ ಜಮೀನನ್ನು ಹೇಗೆ ಬಳಸಿಕೊಳ್ಳಬೇಕು ಎಂದು ತೀರ್ಮಾನಿಸಲಾಗುವುದು ಎಂದೂ ಮಂಡಳಿ ಹೇಳಿದೆ.