Advertisement

ಅಂಗವಿಕಲ ಸ್ವೋದ್ಯೋಗಿ ಚಂದ್ರಶೇಖರರಿಗೆ ನೆರವು ಬೇಕಿದೆ 

09:00 AM Jul 24, 2017 | |

ಪಡುಬಿದ್ರಿ: ಅಂಗವಿಕಲರೆನಿಸಿದ್ದರೂ ಸ್ವೋದ್ಯೋಗಿಯಾಗಿ ಪಡುಬಿದ್ರಿ ಪೇಟೆಯಲ್ಲಿ ಈವರೆಗೆ ಜೀವನ ನಿರ್ವಹಣೆ ಗೈಯುತ್ತಿರುವ ಚಂದ್ರಶೇಖರ ಕಾಂಚನ್‌ (59) ಇದೀಗ ಮತ್ತೆ ಅತಂತ್ರರಾಗಿದ್ದಾರೆ. 

Advertisement

ಅವಿಭಜಿತ ಜಿಲ್ಲೆಯಲ್ಲಿ ದೂರಸಂಪರ್ಕ ಕ್ರಾಂತಿಯನ್ನೇ ಹರಿಸಿದ ಮಹಾಪುರುಷ ಕೆ. ರಾಮ ಅವರ ಕರುಣೆಯೊಂದಿಗೆ, ಸುಮಾರು 30ವರ್ಷಗಳ ಹಿಂದೆ ಪಡುಬಿದ್ರಿ ಪೇಟೆಯಲ್ಲಿ ಟೆಲಿಫೋನ್‌ ಬೂತ್‌ ಒಂದನ್ನು ಕಾಂಚನ್‌ ಆರಂಭಿಸಿದ್ದರು. ಕಾಲಾಂತರದಲ್ಲಿ ಬಿಎಸ್‌ಎನ್‌ಎಲ್‌ ಲೋಕಲ್‌ ಕಾಲ್‌ ಬೂತನ್ನು ಉಳಿಸಿಕೊಂಡು, ಅದನ್ನೇ ನಂದಿನಿ ಹಾಲಿನ ಬೂತ್‌, ತಂಪು ಪಾನೀಯಗಳ ವ್ಯಾಪಾರವನ್ನಾಗಿ ಕಾಂಚನ್‌ ಪರಿವರ್ತಿಸಿಕೊಂಡಿದ್ದರು. ಈಗ ಹೆದ್ದಾರಿ ಕಾಮಗಾರಿ ಕಾರಣದಿಂದಾಗಿ ಇÊರು ಸ್ಥಳಾಂತರಗೊಳ್ಳಬೇಕಿದೆ. ಇವರ ಮುಂದಿನ ಬದುಕು ಕಟ್ಟಿಕೊಳ್ಳಲು ಸಹೃದಯಿಗಳ ನೆರವು ಬೇಕಾಗಿದೆ.

ಪಡುಬಿದ್ರಿ ಪೇಟೆಯಲ್ಲಿ ಹೆದ್ದಾರಿ ಚತುಃಷ್ಪಥ ಕಾಮಗಾರಿಗಾಗಿ ಕೆಲಸ ಕಾರ್ಯಗಳು ಆರಂಭವಾಗಿದ್ದು ಶುಕ್ರವಾರದಂದು ಚಂದ್ರಶೇಖರ ಕಾಂಚನ್‌ರಲ್ಲಿ ಅವರ ಬೂತನ್ನು ಅಲ್ಲಿಂದ ತೆರವುಗೊಳಿಸುವಂತೆ ನವಯುಗ ನಿರ್ಮಾಣ ಕಂಪೆನಿ ಸೂಚಿಸಿದೆ. ಶೇಕಡಾ 77ರಷ್ಟು ವಿಕಲಾಂಗರಾಗಿದ್ದು ತಮ್ಮ ಪತ್ನಿ ನೆರವಿನಿಂದ ಪೇಟೆಗೆ ಬಂದು ತಮ್ಮ ವಹಿವಾಟು ಮುಗಿಸಿ ರಾತ್ರಿಯ ವೇಳೆ ಪತ್ನಿಯೊಂದಿಗೇ ವಾಪಸಾಗುತ್ತಿದ್ದ ಕಾಂಚನ್‌ರಿಗೆ ಈಗ ದಿಕ್ಕು ತೋಚದಂತಾಗಿದೆ. 

ಸರಕಾರಿ ಕಚೇರಿಗಳನ್ನು ಸುತ್ತಲಾಗದ ಸ್ಥಿತಿಯಲ್ಲಿ, ನಡೆಯಲೂ ಕಠಿನ ಪರಿಶ್ರಮ ವಹಿಸಬೇಕಾಗಿರುವ ಪರಿಸ್ಥಿತಿಯಲ್ಲಿ ಚಂದ್ರಶೇಖರ್‌ ಕಾಂಚನ್‌ರಿದ್ದಾರೆ. ಈ ನಡುವೆಯೂ ಪಡುಬಿದ್ರಿ ಗ್ರಾ. ಪಂ. ಗೆ ತಮಗೊಂದಿಷ್ಟು ಸ್ಥಳಾವಕಾಶವನ್ನು ಕರುಣಿಸುವಂತೆ ಅರ್ಜಿಯನ್ನು ಸಲ್ಲಿಸುವುದಾಗಿಯೂ ಇವರು ಹೇಳಿದ್ದಾರೆ. ಪತ್ನಿ, ಎಂಜಿನಿಯರಿಂಗ್‌ ಹಾಗೂ ಎಂಬಿಎ ವ್ಯಾಸಂಗ ಮಾಡುತ್ತಿರುವ ತನ್ನ ಇಬ್ಬರು ಮಕ್ಕಳು ತಮ್ಮ ಕಲಿಕೆಯನ್ನು ಪೂರೈಸುವಲ್ಲಿಯವರೆಗೆ ಬದುಕಿನ ಜಟಕಾ ಬಂಡಿಯನ್ನೆಳೆಯಲು ತನಗೆ ಶಾಸಕರು, ಜನನಾಯಕರು ಹಾಗೂ ಪಂಚಾಯತ್‌ ಪ್ರತಿನಿಧಿಗಳಾದರೂ ಸಹಕರಿಸ ಬೇಕಾಗಿ ಚಂದ್ರಶೇಖರ ಸಾಲ್ಯಾನ್‌ (ಮೊ: 9902176055) ಬಯಸಿದ್ದಾರೆ. ಕೇವಲ ಆಡು ಮಾತಾಗದೇ ನುಡಿದಂತೆ ನಡೆವ ಸರಕಾರವೇ ದೀನ ದಲಿತರ ಮನೆ ಬಾಗಿಲಿಗೆ ಬರಲೆಂಬ ಹಾರೈಕೆ ಕಾಂಚನ್‌ ಅವರ ಗೆಳೆಯರದ್ದಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next