ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಮಕ್ಕಳ ಚಿತ್ರಗಳು ತಯಾರಾಗಿ ಬಿಡುಗಡೆಯಾಗಿವೆ. ಆ ಸಾಲಿಗೆ “ಪುಟಾಣಿ ಸಫಾರಿ’ ಹೊಸ ಸೇರ್ಪಡೆ. ಹೊಸತಂಡ ಸೇರಿಕೊಂಡು ಹೀಗೊಂದು ಅಡ್ವೆಂಚರ್ ಕುರಿತು ಸಿನಿಮಾ ಮಾಡಿದೆ. ಆ ಬಗ್ಗೆ ಹೇಳಲೆಂದೇ ನಿರ್ದೇಶಕ ರವೀಂದ್ರ ವಂಶಿ ತಮ್ಮ ತಂಡದೊಂದಿಗೆ ಪತ್ರಕರ್ತರ ಮುಂದೆ ಹಾಜರಾಗಿದ್ದರು. ನಿರ್ದೇಶಕ ರವೀಂದ್ರ ವಂಶಿ ಅವರಿಗೆ “ಜಂಗಲ್ ಬುಕ್’ ಚಿತ್ರ ನೋಡಿದಾಗ, ನಾವೇಕೆ ಅಂಥದ್ದೊಂದು ಮಕ್ಕಳ ಸಿನಿಮಾವನ್ನು ಕನ್ನಡದಲ್ಲಿ ಮಾಡಬಾರದು ಅಂತ ಯೋಚನೆ ಬಂತಂತೆ. ಹಾಗೆ ಹುಟ್ಟಿಕೊಂಡ ಯೋಚನೆಯೇ “ಪುಟಾಣಿ ಸಫಾರಿ’. ಇದೊಂದು ಅಡ್ವೆಂಚರ್ ಕುರಿತಾದ ಸಿನಿಮಾ ಎಂದು ಮಾತಿಗಿಳಿದ ಅವರು, ಬರೀ ಓದಿನ ಕಡೆ ಗಮನಹರಿಸುವ ಮಕ್ಕಳು, ಒಮ್ಮೆ ಕಾಡಿಗೆ ಹೋಗಿ, ಅಲ್ಲಿ ದಾರಿ ತಪ್ಪಿ, ಕಾಡು ಪ್ರಾಣಿಗಳ ನಡುವೆ ಸಿಲುಕಿ ಅನುಭವಿಸುವ ಸಮಸ್ಯೆಗಳು ಹಾಗೂ ಅವರು ಹೇಗೆ ಅಲ್ಲಿಂದ ಆಚೆ ಬರುತ್ತಾರೆ ಎಂಬುದು ಚಿತ್ರದ ಒನ್‌ಲೈನ್. ಇಲ್ಲಿ ಸಫಾರಿ ಅಂದಮೇಲೆ ಪ್ರಾಣಿಗಳು ಇರಲೇಬೇಕು. ಗ್ರಾಫಿಕ್ಸ್ ಹೆಚ್ಚಾಗಿ ಬಳಸಲಾಗಿದೆ. ಗ್ರೀನ್‌ಮ್ಯಾಟ್‌ನಲ್ಲೇ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಶಿರಸಿ, ಸಿದ್ಧಾಪುರ ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ಯಶಸ್ವಿಯಾಗಿ ಚಿತ್ರೀಕರಣ ಮಾಡಿದ್ದು, ಇಷ್ಟರಲ್ಲೇ ಸಿನಿಮಾ ತೋರಿಸುವುದಾಗಿ ಹೇಳಿಕೊಂಡರು ನಿರ್ದೇಶಕರು.
ನಿರ್ಮಾಪಕ ಚಂದ್ರಶೇಖರ್ ಅವರಿಗೆ ಇದು ಮೊದಲ ಸಿನಿಮಾ. “ಶಾಸಕ ಮುನಿರತ್ನ ಅವರ ಸಹಕಾರ, ಸಲಹೆಯಿಂದ ಈ ಚಿತ್ರ ಮಾಡಿದ್ದೇನೆ. ಇಲ್ಲಿ ಮಕ್ಕಳಿಗೆ ಇಷ್ಟವಾಗುವಂತಹ ಅಂಶಗಳಿವೆ. ಪೋಷಕರೂ ತಿಳಿದುಕೊಳ್ಳುವ ವಿಷಯಗಳಿವೆ. ಇದೊಂದು ಮನರಂಜನೆಯ ಜತೆಗೆ ಸಣ್ಣದ್ದೊಂದು ಸಂದೇಶ ಸಾರುವ ಚಿತ್ರ’ ಎಂದು ವಿವರ ಕೊಟ್ಟರು ಅವರು.
ಅಂದು ಚಿತ್ರದ ಹಾಡು ಮತ್ತು ಟೀಸರ್ ರಿಲೀಸ್ ಮಾಡಿದ ಶಾಸಕ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, “ಚಂದ್ರಶೇಖರ್ ನಮ್ಮ ಕ್ಷೇತ್ರದವರು. ಮೊದಲ ಸಿನಿಮಾ ಆಗಿದ್ದರಿಂದ ಭಯ ಇದ್ದೇ ಇರುತ್ತೆ. ಮಕ್ಕಳ ಸಿನಿಮಾಗೆ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನೂ ಕಾನೂನು ರೀತಿಯಲ್ಲಿ ಸಿಗಲು ಸಹಾಯ ಮಾಡುತ್ತೇನೆ. ಕನ್ನಡ ಚಿತ್ರರಂಗ ಸಣ್ಣ ಮಾರುಕಟ್ಟೆ ಹೊಂದಿದೆ. ಹಾಗಾಗಿ ಇಲ್ಲಿ ಯಾರೇ ಬಂದರೂ, ಇತಿಮಿತಿಯಲ್ಲಿ ಸಿನಿಮಾ ಮಾಡಬೇಕು’ ಎಂದು ಕಿವಿ ಮಾತು ಹೇಳಿದರು ಮುನಿರತ್ನ.
ಚಿತ್ರಕ್ಕೆ ಯೋಗರಾಜ್ ಭಟ್ ಗೀತೆ ಬರೆದರೆ, ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ. ಜೀವನ್ ಛಾಯಾಗ್ರಹಣವಿದೆ. ಸಿ.ರವಿಚಂದ್ರನ್ ಅವರು ಕತ್ತರಿ ಪ್ರಯೋಗಿಸಿದ್ದಾರೆ. ಚಿತ್ರದಲ್ಲಿ ರಾಕಿನ್, ರಾಜೀವ್, ವಿಜಯ್, ಸಹನಾ, ಬೇಬಿ ಮಾನಸ ಇತರರು ನಟಿಸಿದ್ದಾರೆ. ಮನೀಶ್, ರೇಣುಕಾ ಪ್ರಸಾದ್, ರವಿಗೌಡ್ರು, ಮೋಹನ್‌ಕುಮಾರ್ ಇತರರು “ಪುಟಾಣಿ ಸಫಾರಿ’ ತಂಡಕ್ಕೆ ಶುಭಹಾರೈಸುವ ಹೊತ್ತಿಗೆ ಪತ್ರಿಕಾಗೋಷ್ಠಿಗೆ ತೆರೆಬಿತ್ತು.