Advertisement

ಸಾಧನೆಗೆ ಅಂಗವಿಕಲತೆ ಎಂದೂ ಅಡ್ಡಿಯಲ್ಲ

12:58 PM Mar 27, 2019 | Lakshmi GovindaRaju |

ಚಿಕ್ಕನಾಯಕನಹಳ್ಳಿ: ಅಂಗವಿಕಲತೆ ಸಾಧನೆಗೆ ಅಡ್ಡಿ ಮಾಡುವುದಿಲ್ಲ, ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು. ಛಲವೊಂದಿದ್ದರೆ ಸಾಕು ಎನ್ನುವಂತೆ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ಉಪನ್ಯಾಸಕ ಬಿ.ಜಿ.ನಾಗರಾಜು ಅಂಗವಿಕಲತೆ ಮೆಟ್ಟಿ ನಿಂತು ಸುಂದರವಾದ ಬದುಕು ಕಟ್ಟಿಕೊಂಡಿದ್ದಾರೆ.

Advertisement

1985ರಲ್ಲಿ ಜನಿಸಿದ ಇವರು ಹುಟ್ಟಿನಿಂದಲೇ ಅಂಗವಿಕಲತೆ ನೋವು ಅನುಭವಿಸಿದವರು. ಸಣ್ಣತನದಿಂದಲೇ ಎಲ್ಲರಂತೆ ಸಮಾಜದಲ್ಲಿ ತಲೆಯೆತ್ತಿ ನಿಲ್ಲಬೇಕೆಂಬ ಆಚಲ ನಿಲುವು ಮೈಗೂಡಿಸಿಕೊಂಡಿದ್ದರು. ಸಮಾಜದಲ್ಲಿ ಯಾವ ವ್ಯಕ್ತಿಯೂ ನನ್ನಿಂದ ಸಾಧ್ಯವಾಗುವುದಿಲ್ಲ ಎಂಬ ಮಾತು ಹಾಡದಂತೆ ಹಿರಿಯರು ಹೇಳುವಂತೆ ಸಾಧ್ಯವಾದರೆ ಓಡಬೇಕು, ಓಡಲು ಸಾಧ್ಯವಾಗದಿದರೆ ಕನಿಷ್ಠ ನಡೆಯಬೇಕು, ನಡೆಯಲು ಸಾಧ್ಯವಾಗದಿದ್ದರೆ ಕನಿಷ್ಠ ತೆವಳಬೇಕು.

ಆದರೆ, ಸುಮ್ಮನೆ ಮಾತ್ರ ಇರಬೇಡಿ ಎಂಬ ಮಾತುಗಳನ್ನು ಬಲವಾಗಿ ನಂಬಿರುವ ನಾಗರಾಜು, ಅಂಗವಿಕಲತೆ ನಡುವೆಯೂ ದಿನನಿತ್ಯ ಕಾಲೇಜಿನಲ್ಲಿ ಚಟುವಟಿಕೆಯಿಂದ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವ ಮೂಲಕ ಅಚ್ಚುಮೆಚ್ಚಿನ ಉಪನ್ಯಾಸಕರಾಗಿದ್ದಾರೆ.

ಛಲ ಮೂಡಿತು: ಕಡು ಬಡತನದಲ್ಲಿ ಹುಟ್ಟಿದ ನಾಗರಾಜು ಇವರ ತಂದೆ ಗೋವಿಂದಪ್ಪ, ತಾಯಿ ಲಕ್ಷ್ಮೀದೇವಮ್ಮ ಮಗನಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿಯಲ್ಲಿ ಜನಿಸಿದ್ದು, ಬಾಲ್ಯದ ಜೀವನ ಕಷ್ಟಕರವಾಗಿತ್ತು. ಮಕ್ಕಳು ಆಟವಾಡುತ್ತಿರುವಾಗ ಅವರ ಜೊತೆ ಸೇರಲು ಸಾಧ್ಯವಾಗದೆ ಮನಸ್ಸಿನಲ್ಲಿಯೇ ದುಖಃ ಪಡುತ್ತಿದ್ದರು.

ಕುಟುಂಬದಲ್ಲಿ ನಡೆಯುತ್ತಿದ್ದ ಶುಭ ಸಮಾರಂಭಗಳಿಗೆ ನಾಗರಾಜುರವರನ್ನು ಕರೆದುಕೊಂಡು ಹೋಗದೆ ಮನೆಯಲ್ಲಿಯೇ ಬಿಟ್ಟು ಹೋಗುತ್ತಿದ್ದರು. ಇದರಿಂದ ಕೆಲವು ಬಾರಿ ಮಾನಸಿಕವಾಗಿ ಕುಗ್ಗಿ ಹೋಗಿದ್ದ ನಾಗರಾಜು ಅಂದೇ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಮೂಡಿಸಿಕೊಂಡರು.

Advertisement

ಮಾನಸಿಕ ನೋವಿನ ದಿನಗಳು: ಶಾಲೆ ದಿನಗಳಲ್ಲಿ ಕೆಲ ಸಹಪಾಠಿಗಳು, ಸ್ನೇಹಿತರು, ಊರಿನ ಕೆಲವರು ಕುಳ್ಳ, ಕುಂಟ ಎಂದೆಲ್ಲ ಹೀಯಾಳಿಸಿದ್ದಾಗ ಜೀವನದ ಬಗ್ಗೆ ಜಿಗುಪ್ಸೆ ಮನೋಭಾವನೆ ಉಂಟಾಗಿತ್ತು. ಆದರೆ, ಇನ್ನೂ ಕೆಲವರು ಮಾನಸಿಕ ಧೈರ್ಯ ತುಂಬಿದ ಉದಾಹರಣೆಗಳು ಉಂಟು.

ಈಗ ಉಪನ್ಯಾಸಕ: ವಿದ್ಯಾಭ್ಯಾಸದಲ್ಲಿ ಮುಂದಿದ್ದ ಇವರು ಎಂಎಸ್‌ಡಬ್ಲೂ, ಬಿ.ಇಡಿ ಶಿಕ್ಷಣ ಮುಗಿಸಿ ಬೆಂಗಳೂರಿನ ಕೆಲ ಎನ್‌ಜಿಓಗಳಲ್ಲಿ ಕೆಲಸ ನಿರ್ವಹಿಸಿದರು. ನಂತರ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಕಾರ್ಯ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು: ಸಮಾಜ ಕಾರ್ಯ ವಿಭಾಗದ ತರಗತಿಗಳನ್ನು ತೆಗೆದುಕೊಳ್ಳುವ ನಾಗರಾಜು, ವಿದ್ಯಾರ್ಥಿಗಳಿಗೆ ಸಾಮಾಜಿಕ ಬದ್ಧತೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಉತ್ತಮವಾದ ಶಿಕ್ಷಣ ನೀಡುತ್ತಿದ್ದಾರೆ. ಅಂಗವಿಕಲತೆ ಇದ್ದರೂ ಯಾರಿಗೂ ಕಡಿಮೆ ಇಲ್ಲದಂತೆ ಕಾಲೇಜಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದು, ಹಲವರಿಗೆ ಸ್ಫೂರ್ತಿಯಾಗಿದ್ದಾರೆ.

ಕೆಲ ದೇಹದ ನ್ಯೂನತೆಗಳಿಂದ ಮಾನಸಿಕವಾಗಿ ಕುಗ್ಗಿ ಜೀವನವೇ ಮುಗಿಯಿತು ಎಂದು ತಲೆ ಮೇಲೆ ಕೈಹಿಡುವ ಕೆಲವರ ಮಧ್ಯದಲ್ಲಿ ನಾಗರಾಜು ಅಂಗವಿಕಲತೆ ಇದ್ದರೂ ಸರ್ಕಾರಿ ಉಪನ್ಯಾಸಕರಾಗಿ ಸುಖ, ಶಾಂತಿಯ ಜೀವನ ನಡೆಸುತ್ತಿದ್ದಾರೆ.

ಸಣ್ಣ ವಯಸ್ಸಿನಲ್ಲಿ ತುಂಬ ಕಷ್ಟದ ಜೀವನ ಸಾಗಿಸಿದ್ದು, ಮನೆಯಲ್ಲಿ ಬಡತನ ಬುದ್ಧಿ ಕಲಿಸಿತು. ಊರಿನಲ್ಲಿ ಶಾಲೆ ಇದ್ದುದರಿಂದ ಎಸ್ಸೆಸ್ಸೆಲ್ಸಿ ಪಾಸ್‌ ಮಾಡಿದೆ. ಮುಂದೆ ಓದಬೇಕು ಎಂಬ ಆಸೆ. ಆದರೆ, ಅಂಗವಿಕಲನಾದ ನನ್ನನ್ನು ಪಟ್ಟಣಕ್ಕೆ ಕಳುಹಿಸಿ ಓದಿಸಲು ಮನೆಯಲ್ಲಿ ಮನಸ್ಸಿರಲಿಲ್ಲ. ಆದರೆ, ದೇವರ ರೀತಿ ಬಂದ ಅಂಗವಿಕಲರ ಕಲ್ಯಾಣ ಎಂಬ ಸಂಸ್ಥೆ ನನಗೆ ಮುಂದೆ ಓದಲು ದಾರಿ ಮಾಡಿಕೊಟ್ಟಿತ್ತು. ಇದರ ಫ‌ಲವಾಗಿ ಈಗ ಉಪನ್ಯಾಸಕನಾಗಿದ್ದೇನೆ. ಅಂಗವಿಕಲತೆ ಶಾಪವಲ್ಲ.
-ನಾಗರಾಜು. ಸಾಮಾಜಿಕ ಕಾರ್ಯ ಉಪನ್ಯಾಸಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚಿಕ್ಕನಾಯಕನಹಳ್ಳಿ

ನಾಗರಾಜು ಸಾರ್‌ ನಮಗೆ ಉತ್ತಮ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಜೊತೆ ಸ್ನೇಹಿತರಂತೆ ಇರುತ್ತಾರೆ. ನಮಗೆಲ್ಲ ಇವರನ್ನು ಕಂಡರೆ ಅಚ್ಚು ಮೆಚ್ಚು.
-ರಾಕೇಶ್‌, ಸಮಾಜಕಾರ್ಯ ವಿದ್ಯಾರ್ಥಿ

* ಚೇತನ್‌

Advertisement

Udayavani is now on Telegram. Click here to join our channel and stay updated with the latest news.

Next