Advertisement
ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ “ವಿಶ್ವ ವಿಕಲಚೇತನರ ದಿನಾಚರಣೆ-2024′ ಸಮಾರಂಭವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 2023-24ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ 7 ಜಿಲ್ಲೆಗಳಲ್ಲಿ 2 ಕೋಟಿ ರೂ. ವೆಚ್ಚದಲ್ಲಿ 10 ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗಳನ್ನು ತೆರೆಯಲಾಗಿದ್ದು, ಇನ್ನೂ 13 ಹೊಸ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲಾಗಿದೆ. ಗ್ರಾಮೀಣ ಪುನರ್ವಸತಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರ ಅವಲಂಬಿತರಿಗೆ ನೀಡಲಾಗುವ ಮರಣ ಪರಿಹಾರ ನಿಧಿಯನ್ನು 2023ನೇ ಸಾಲಿನಲ್ಲಿ 50 ಸಾವಿರದಿಂದ 1 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ವಿವರಿಸಿದರು.
Related Articles
ವಿಕಲಚೇತನರು ಸಮಾಜಕ್ಕೆ ಹೊರೆಯಲ್ಲ, ಅವರು ಸಮಾಜದ ಆಸ್ತಿ. ವಿಶೇಷ ಚೇತನರ ಸಶಕ್ತೀಕರಣಕ್ಕೆ ಸರಕಾರ ಸದಾ ಬದ್ಧವಾಗಿದ್ದು, ಶ್ರೇಯೋಭಿವೃದ್ಧಿಗಾಗಿ ಪ್ರಸಕ್ತ ಸಾಲಿನ ಪೂರಕ ಅಂದಾಜಿನಲ್ಲಿ 44 ಕೋಟಿ ರೂ.ಗಳನ್ನು ಮಂಜೂರು ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದರು.
ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ರಾಜ್ಯದಲ್ಲಿ ಸುಮಾರು 15 ಲಕ್ಷ ವಿಕಲಚೇತನರಿದ್ದಾರೆ. ಇವರೆಲ್ಲರ ಆರೈಕೆ ಮಾಡಿ ವಿಶೇಷ ಸೌಲಭ್ಯಗಳನ್ನು ನೀಡುವುದು ಸರಕಾರದ ಕರ್ತವ್ಯ ಎಂದರು.
Advertisement
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಅಂಗವೈಕಲ್ಯ ವರವೂ ಅಲ್ಲ, ಶಾಪವೂ ಅಲ್ಲ. ದೇವರು ಜೀವನದಲ್ಲಿ ನೀಡಿರುವ ಪರೀಕ್ಷೆ. ಇದನ್ನು ಮೆಟ್ಟಿನಿಂತು ಸಾಧನೆಗೈದ ಪುಟ್ಟರಾಜ ಗವಾಯಿ, ಪಂಚಾಕ್ಷರಿ ಗವಾಯಿ ಮತ್ತಿತರ ಅನೇಕರು ಸಮಾಜಕ್ಕೆ ಪ್ರೇರಣೆಯಾಗಿದ್ದಾರೆ ಎಂದರು. ನಿಮಗೆಲ್ಲ ಗಣಪತಿ ಸ್ಫೂರ್ತಿ. ಆನೆಯ ತಲೆ, ಸೊಂಡಿಲು, ಮುರಿದ ದಂತವಿದ್ದರೂ ಆತನನ್ನು ವಿಘ್ನ ನಿವಾರಿಸುವ ನಾಯಕ ಎಂದು ಪೂಜಿಸುತ್ತೇವೆ. ಅದೇ ರೀತಿ ನಿಮ್ಮಲ್ಲಿ ಮನೋಬಲ ಹೆಚ್ಚಾಗಿರಬೇಕು. ನಿಮಗೆ ಎಲ್ಲ ರೀತಿಯ ಸಾಧನೆ ಮಾಡುವ ಶಕ್ತಿ ಇದೆ. ಸಾಧನೆಯ ಹಾದಿಯಲ್ಲಿ ಯಾವುದೇ ರಾಜಿ ಬೇಡ ಎಂದು ವಿಶೇಷ ಚೇತನ ಮಕ್ಕಳಲ್ಲಿ ವಿಶ್ವಾಸ ತುಂಬಿದರು.