Advertisement

ಶಿಮುಲ್‌ ನೂತನ ಅಧ್ಯಕ್ಷರ ಆಯ್ಕೆ ಅನೂರ್ಜಿತ

04:35 PM Apr 30, 2022 | Niyatha Bhat |

ಶಿವಮೊಗ್ಗ: ಮಧ್ಯ ಕರ್ನಾಟಕದ ಪ್ರತಿಷ್ಠಿತ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟ ಅಧ್ಯಕ್ಷರ ಆಯ್ಕೆಯನ್ನು ಹೈಕೋರ್ಟ್‌ ರದ್ದುಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳಿಗೆ ತಲಾ 10 ಸಾವಿರ ರೂ. ದಂಡ ವಿಧಿಸಿದೆ.

Advertisement

ಈ ಹಿಂದಿನ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಸಂದರ್ಭದಲ್ಲೂ ಹಗ್ಗಜಗ್ಗಾಟ ನಡೆದಿತ್ತು. ಆ ಪ್ರಕರಣ ಸಹ ನ್ಯಾಯಾಲಯದ ಮೆಟ್ಟಿಲೇರಿ ಅವಿಶ್ವಾಸ ಮಂಡನೆಗೆ ಹಲವು ಬಾರಿ ತಡೆ ತರಲಾಗಿತ್ತು. ಕೊನೆಗೂ ಮುಹೂರ್ತ ಫಿಕ್ಸ್‌ ಆಗಿ ಅವಿಶ್ವಾಸ ಮಂಡನೆ ನಡೆದು ಅಧ್ಯಕ್ಷರನ್ನು ಕೆಳಗಿಳಿಸಲಾಗಿತ್ತು. ಇದಾದ ಬಳಿಕವೂ ಹೊಸ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲೂ ರಾಜಕೀಯ ಮೇಲಾಟ ನಡೆದು ಮತ್ತೆ ಗೊಂದಲ ಸೃಷ್ಟಿಯಾಗಿ ಇಬ್ಬರು ನಿರ್ದೇಶಕರು ನ್ಯಾಯಾಲಯದ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಈಗ ಅಧ್ಯಕ್ಷರ ಆಯ್ಕೆಯನ್ನೇ ಅನೂರ್ಜಿತಗೊಳಿಸಿದೆ.

ಏನಿದು ಪ್ರಕರಣ

ಜ.1ರಂದು ಶಿಮುಲ್‌ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಚುನಾವಣೆ ಹಿಂದಿನ ದಿನ ಇಬ್ಬರು ನಿರ್ದೇಶಕರನ್ನು ಹಾಲಿನ ಸೊಸೈಟಿಯಲ್ಲಿ ಅಕ್ರಮ ನಡೆದಿದೆ ಎಂಬ ದೂರಿನ ಆಧಾರದ ಮೇಲೆ ಅಮಾನತುಗೊಳಿಸಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಹೇರಲಾಗಿತ್ತು. ಇದನ್ನು ಪ್ರಶ್ನಿಸಿ ಹಾಲಿ ಉಪಾಧ್ಯಕ್ಷ ಎಚ್‌.ಕೆ. ಬಸಪ್ಪ ಹಾಗೂ ಶಿವಶಂಕರಪ್ಪ ಅವರು ಕೋರ್ಟ್‌ ಮೆಟ್ಟಿಲೇರಿ, ಶಿಮುಲ್‌ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸದಂತೆ ರಾಜಕೀಯ ಮಾಡಿ ಕಾರಣ ಇಲ್ಲದೆ ಅಮಾನತು ಮಾಡಲಾಗಿದೆ ಎಂದು ದೂರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಸೊಸೈಟಿಯಲ್ಲಿ ನಡೆದಿರುವ ವ್ಯವಹಾರಗಳಿಗೆ ಸಂಬಂಧಿಸಿದಂತೆ ಅನಗತ್ಯವಾಗಿ ಅಮಾನತು ಮಾಡಲಾಗಿದೆ. ಆದ್ದರಿಂದ ಅಧ್ಯಕ್ಷರ ಆಯ್ಕೆಯನ್ನು ಅನೂರ್ಜಿತಗೊಳಿಸಿ ಅಮಾನತು ಮಾಡಿದ ಮೂವರು ಅಧಿಕಾರಿಗಳಿಗೆ ದಂಡ ವಿಧಿಸಿದೆ. ಅಲ್ಲದೆ ಮುಂದಿನ ಆರು ವಾರದೊಳಗೆ ಹೊಸ ಅಧ್ಯಕ್ಷರ ಆಯ್ಕೆ ಮಾಡುವಂತೆ ಸೂಚನೆ ನೀಡಿದೆ.

ಮೇಲ್ಮನವಿ ಸಲ್ಲಿಸುವೆ

Advertisement

ಜ.1ರಂದು ಶಿಮುಲ್‌ ಚುನಾವಣೆ ನಡೆದಿದ್ದು ಬಹುಮತ ಪಡೆದು ಆಯ್ಕೆಯಾಗಿದ್ದೇನೆ. ಅವರಿಬ್ಬರು ಅಮಾನತು ಮಾಡಿದ್ದ ಪ್ರಕರಣಕ್ಕೂ ಇದಕ್ಕೂ ಸಂಬಂಧವಿಲ್ಲ. ಅನಗತ್ಯವಾಗಿ ಇದನ್ನು ಎಳೆತರಲಾಗಿದೆ. ನಷ್ಟದಲ್ಲಿದ್ದ ಶಿಮುಲ್‌ ಅನ್ನು ಲಾಭಕ್ಕೆ ಮರಳಿಸಿದ್ದೇವೆ. ರೈತರಿಗೆ ಉತ್ತಮ ದರ ನೀಡಿದ್ದೇವೆ. ಇದನ್ನೆಲ್ಲ ಸಹಿಸದೆ ರಾಜಕೀಯ ಮಾಡಲಾಗುತ್ತಿದೆ. ಕೋರ್ಟ್‌ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವೆ. ಕಾನೂನಿಗೆ ಗೌರವ ಕೊಟ್ಟು ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿದಿದ್ದು ಉಪಾಧ್ಯಕ್ಷರಿಗೆ ಜವಾಬ್ದಾರಿ ಹಸ್ತಾಂತರಿಸಲಾಗಿದೆ ಎಂದು ಶ್ರೀಪಾದ ಹೆಗಡೆ ನಿಸರಾಣಿ ತಿಳಿಸಿದ್ದಾರೆ.

ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಇಬ್ಬರು ನಿರ್ದೇಶಕರನ್ನು ಅಮಾನತು ಮಾಡಲಾಗಿತ್ತು. ಇದು ಸರಿಯಲ್ಲ ಎಂದು ಪ್ರಶ್ನೆ ಮಾಡಿದ್ದೆವು. ಹೈಕೋರ್ಟ್‌ ಸಹ ಅಮಾನತು ಮಾಡಿದ ಅಧಿಕಾರಿಗಳಿಗೆ ದಂಡ ವಿಧಿಸಿದೆ. ಜತೆಗೆ ಅವರ ಮೇಲೆ ಇಲಾಖೆ ತನಿಖೆಗೆ ಸೂಚನೆ ನೀಡಿದೆ. ಅಧ್ಯಕ್ಷರ ಆಯ್ಕೆಯನ್ನು ರದ್ದುಗೊಳಿಸಿದೆ. ಆರು ವಾರದೊಳಗೆ ಚುನಾವಣೆ ನಡೆಸಲು ಸೂಚಿಸಿದೆ. ನಮ್ಮ ಮೇಲೆ ಗುರುತರವಾದ ಆರೋಪಗಳು ಇರಲಿಲ್ಲ. ರಾಜಕೀಯ ಉದ್ದೇಶದಿಂದ ಈ ರೀತಿ ನಮ್ಮನ್ನು ನಡೆಸಿಕೊಂಡರು. ಹಣ ದುರುಪಯೋಗ ಆಗಿರಲಿಲ್ಲ. ರಿಸರ್ವ್‌ ಫಂಡ್‌ ಅನ್ನು ಪ್ರತ್ಯೇಕವಾಗಿ ಇರಿಸಿಲ್ಲ. ಕಟ್ಟಡಕ್ಕೆ ಅನುಮತಿ ಪಡೆದಿಲ್ಲ. ಹಾಲು ಉತ್ಪಾಕದರ ಹಣ ಪಾವತಿಯನ್ನು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ನಡೆಸಲು ಸಹಕಾರ ಇಲಾಖೆ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಅಮಾನತು ಮಾಡಿದ್ದರು. ಇದರಲ್ಲಿ ಯಾವುದೇ ದುರುಪಯೋಗ ಆಗಿರಲಿಲ್ಲ. ಕಾನೂನು ಪಾಲನೆ ಮಾಡಲು ನೋಟಿಸ್‌ ಮೂಲಕ ತಿಳಿಸಬಹುದಿತ್ತು. ಆದರೂ ನಮ್ಮನ್ನು ದುರುದ್ದೇಶ ಪೂರ್ವಕವಾಗಿ ಅಮಾನತು ಮಾಡಲಾಗಿದೆ ಎಂದು ನಿರ್ದೇಶಕ ಶಿವಶಂಕರಪ್ಪ ತಿಳಿಸಿದ್ದಾರೆ.

ರಾಜಕೀಯ ಮೇಲಾಟ

ಶಿಮುಲ್‌ ಅಧಿಕಾರ ಗದ್ದುಗೆ ಎಂಬುದು ಹಾವು ಏಣಿ ಆಟವಾಗಿದ್ದು ಅಧಿಕಾರಕ್ಕಾಗಿ ಪರಸ್ಪರ ಕಾಲೆಳೆಯುವ ಪ್ರವೃತ್ತಿಯಿಂದ ಶಿಮುಲ್‌ ಅಭಿವೃದ್ಧಿಗೆ ಕಂಟಕವಾಗಿದೆ ಎಂದು ಒಕ್ಕೂಟದ ಸದಸ್ಯರು ಆರೋಪಿಸಿದ್ದಾರೆ. ಹಿಂದಿನ ಅಧ್ಯಕ್ಷರನ್ನು ಅವಿಶ್ವಾಸ ಮಂಡಿಸಿ ಒತ್ತಡದಿಂದ ಕೆಳಗಿಳಿಸಲಾಯಿತು. ಹೊಸ ಅಧ್ಯಕ್ಷರಾಗಲು ಪ್ರತಿಸ್ಪರ್ಧಿಗಳನ್ನು ಅಮಾನತು ಮಾಡಿಸಲಾಯಿತು. ನಾಲ್ಕೇ ತಿಂಗಳಿಗೆ ಅವರ ಅಧಿಕಾರ ಮುಗಿದಿದೆ. ಹೀಗೆ ಆದರೆ ಹಾಲು ಉತ್ಪಾದಕರು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಅಲವತ್ತುಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next