ಅಜೇಯ್ ರಾವ್ ನಾಯಕರಾಗಿ ನಟಿಸಿರುವ “ಶೋಕಿವಾಲ’ ಚಿತ್ರದ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದ ನಿರ್ದೇಶಕರಾದ ರವಿ ಬಸ್ರೂರ್, ನಂದಕಿಶೋರ್, ಹರಿ ಸಂತೋಷ್, ಶಶಾಂಕ್, ವಿ.ನಾಗೇಂದ್ರ ಪ್ರಸಾದ್ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಹಾಡಿನಲ್ಲಿ ನಟಿಸಿರುವ ನಿರ್ದೇಶಕರುಗಳೇ ಈ ಹಾಡನ್ನು ರೀಲಿಸ್ ಮಾಡಿದ್ದು ವಿಶೇಷ.
ಈ ಹಾಡನ್ನು ಚೇತನ್ ಕುಮಾರ್ ಬರೆದಿದ್ದು, ಶಶಾಂಕ್ ಶೇಷಗಿರಿ ಹಾಡಿದ್ದಾರೆ. ಶ್ರೀಧರ್.ವಿ.ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರ ಇದೇ ತಿಂಗಳ 29 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಕುಟುಂಬ ಸಮೇತ ಕುಳಿತು ನೋಡುವ ಸಿನಿಮಾವಾಗಿದ್ದು, ಎಲ್ಲರು ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು ನಿರ್ಮಾಪಕ ಟಿ.ಆರ್. ಚಂದ್ರಶೇಖರ್.
ಅಜೇಯ್ ರಾವ್ ಅವರಿಗೆ ನಾಯಕಿಯಾಗಿ ಸಂಜನಾ ಆನಂದ್ ನಟಿಸಿದ್ದಾರೆ. ಶರತ್ ಲೋಹಿತಾಶ್ವ, ಅರುಣಾ ಬಾಲರಾಜ್, ತಬಲಾ ನಾಣಿ, ಪ್ರಮೋದ್ ಶೆಟ್ಟಿ, ಗಿರಿ, ನಾಗರಾಜ ಮೂರ್ತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. “ಕ್ರಿಸ್ಟಲ್ ಪಾರ್ಕ್ ಸಿನಿಮಾಸ್’ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಹಾಗೂ ಕಿಶೋರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಮಜವಾಗಿದೆ ಟ್ರೇಲರ್: “ಶೋಕಿವಾಲ’ ಚಿತ್ರದ ಟ್ರೇಲರ್ ಕೂಡಾ ಬಿಡುಗಡೆಯಾಗಿದ್ದು, ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಆಗಿ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ಅಜೇಯ್ ರಾವ್ ಲವರ್ ಬಾಯ್ ಹಾಗೂ ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡದ ಮೊಗದಲ್ಲಿ ನಗುಮೂಡಿದೆ