ಹೊಸದಿಲ್ಲಿ : 2ಜಿ ಹಾಗೂ ಕಲ್ಲಿದ್ದಲು ಹಗರಣದಲ್ಲಿ ಸಿಬಿಐ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ವಿರುದ್ಧ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಇಂದು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಆದೇಶಿಸಿದೆ.
ಸಿನ್ಹಾ ಅವರು ಕಲ್ಲಿದ್ದಲು ಹಗರಣದಲ್ಲಿ ಶಾಮೀಲಾಗಿರುವ ಕೆಲವು ಆರೋಪಿಗಳೊಂದಿಗೆ ಕೈಜೋಡಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಸುಪ್ರೀಂ ಕೋರ್ಟ್ ಇಂದು ಸೋಮವಾರ ಹೇಳಿದೆ.
ಮಾಜಿ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರು ತಮ್ಮ ಅಧಿಕಾರವನ್ನು ದುರುಪಯೋಗಿಸಿರುವುದಾಗಿ ಆಪಾದಿಸಲಾಗಿದೆ.
ಜಸ್ಟಿಸ್ ಎಂ ಬಿ ಲೋಕೂರ್ ನೇತೃತ್ವದ ಸುಪ್ರೀಂ ಕೋರ್ಟಿನ ವಿಶೇಷ ಪೀಠವು ಸಿನ್ಹಾ ವಿರುದ್ಧ ತೀರ್ಪು ಪ್ರಕಟಿಸುವುದಿತ್ತಾದೂ ಅತ್ಯಂತ ಮುಖ್ಯ ಸಾಕ್ಷ್ಯದ ಕೊರತೆಯಿಂದಾಗಿ ಅದು ಸಿನ್ಹಾ ವಿರುದ್ಧ ಎಸ್‌ಐಟಿ ತನಿಖೆಗೆ ಆದೇಶಿಸಿದೆ.
ರಂಜಿತ್ ಸಿನ್ಹಾ ಅವರು 2ಜಿ ಹಾಗೂ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಮೇಲ್ ಮಟ್ಟದ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸಿ ತನಿಖೆಯ ಮೇಲೆ ಪ್ರಭಾವ ಬೀರಿರುವುದನ್ನು ಮಾಜಿ ಸಿಬಿಐ ನಿರ್ದೇಶಕ ಎಂ ಎಲ್ ಶರ್ಮಾ ನೇತೃತ್ವದ ತಂಡವು ಕಂಡುಕೊಂಡಿರುವುದನ್ನು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಕೋರ್ಟಿಗೆ ತಿಳಿಸಿರುವ ಹಿನ್ನೆಲೆಯಲ್ಲಿ 2016ರ ಜುಲೈ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಈ ಕೇಸಿಗೆ ಸಂಬಂಧಪಟ್ಟ ತನ್ನ ಆದೇಶನ್ನು ಕಾದಿರಿಸಿತ್ತು.