Advertisement

ಡೈರೆಕ್ಟರ‍್ಸ್‌ ಫಿಲಂ ಬಜಾರ್‌ಗೆ ಚಿತ್ರೋತ್ಸವದಲ್ಲಿ ಮೆಚ್ಚುಗೆ

12:33 PM Mar 12, 2020 | Lakshmi GovindaRaj |

ಇತ್ತೀಚೆಗಷ್ಟೇ 12ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ಅದ್ಧೂರಿಯಾಗಿ ನೆರವೇರಿದ್ದು ನಿಮಗೆ ಗೊತ್ತಿರಬಹುದು. ಈ ಬಾರಿಯ ಸಿನಿಮೋತ್ಸವದಲ್ಲಿ “ಡೈರೆಕ್ಟರ‍್ಸ್‌ ಫಿಲಂ ಬಜಾರ್‌’ ಎನ್ನುವ ವಿಶೇಷ ವಿಭಾಗವನ್ನು ಪರಿಚಯಿಸಲಾಗಿತ್ತು. ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಕಲ್ಪಿಸಿಕೊಡುವುದು, ಕನ್ನಡ ಚಿತ್ರ ನಿರ್ಮಾಪಕರಿಗೆ ತಮ್ಮ ಚಿತ್ರಗಳಿಂದ ವಿವಿಧ ಆದಾಯ ಮೂಲಗಳನ್ನು ಕಲ್ಪಿಸಿಕೊಡುವುದು, ನಿರ್ಮಾಪಕರು ಮತ್ತು ವಿತರಕರ ನಡುವೆ ಸಂವಹನ ಕಲ್ಪಿಸಿಕೊಡುವುದು, ಈ ಮೂಲಕ ನಿರ್ಮಾಪಕರ ಸ್ನೇಹಿಯಾಗಿ, ಚಿತ್ರರಂಗದ ಹಿತವನ್ನು ಕಾಪಾಡುವ ಆಶಯದೊಂದಿಗೆ ಹೊಸ ವೇದಿಕೆ ಸೃಷ್ಟಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು.

Advertisement

ಅದರಂತೆ ಈ ಬಾರಿಯ ಸಿನಿಮೋತ್ಸವದಲ್ಲಿ ಮೊದಲ ಬಾರಿಗೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಸಹಯೋಗದಲ್ಲಿ “ಡೈರೆಕ್ಟರ‍್ಸ್‌ ಫಿಲಂ ಬಜಾರ್‌’ ಎನ್ನುವ ಹೆಸರಿನಲ್ಲಿ ಚಟುವಟಿಕೆಗಳು ಶುರುವಾಗಿದೆ. ಇನ್ನು 12ನೇ ಬೆಂಗಳೂರು ಅಂತರ ರಾಷ್ಟ್ರೀಯ ಸಿನಿಮಾತ್ಸವದಲ್ಲಿ ಸುಮಾರು ಐದು ದಿನಗಳ ಕಾಲ ನಡೆದ “ಡೈರೆಕ್ಟರ‍್ಸ್‌ ಫಿಲಂ ಬಜಾರ್‌’ಗೆ ಸಿನಿಪ್ರಿಯರಿಂದ, ನಿರ್ಮಾಪಕರಿಂದ, ಚಿತ್ರೋದ್ಯಮದಿಂದ ಉತ್ತಮ ಪ್ರತಿಕ್ರಿಯೆ, ಸ್ಪಂದನೆ ವ್ಯಕ್ತವಾಗಿದೆ.

ಇದರ ಬಗ್ಗೆ ಮಾಹಿತಿ ನೀಡಲು ಮಾಧ್ಯಮಗಳ ಮುಂದೆ ಬಂದಿದ್ದ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್‌, ಬಿ.ಆರ್‌ ಕೇಶವ ಮತ್ತಿತರ ಪದಾಧಿಕಾರಿಗಳು ಮೊದಲ ಬಾರಿಗೆ “ಡೈರೆಕ್ಟರ‍್ಸ್‌ ಫಿಲಂ ಬಜಾರ್‌’ ವೇದಿಕೆಗೆ ಸಿಕ್ಕ ಸ್ಪಂದನೆ, ಪ್ರತಿಕ್ರಿಯೆಗಳ ಬಗ್ಗೆ ಮಾತನಾಡಿದರು. ಮೊದಲಿಗೆ ಮಾತನಾಡಿದ ಟೇಶಿ ವೆಂಕಟೇಶ್‌, “ಕನ್ನಡ ಚಿತ್ರರಂಗದಲ್ಲಿ ಇದೊಂದು ವಿಭಿನ್ನ ಪ್ರಯೋಗ. ಕನ್ನಡ ಚಿತ್ರರಂಗದ ನಿರ್ದೇಶಕ ಮತ್ತು ನಿರ್ಮಾಪಕರ ಏಳಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ದೇಶದಲ್ಲೇ ಪ್ರಥಮ ಬಾರಿಗೆ ಕನ್ನಡದಲ್ಲಿ “ಡೈರೆಕ್ಟರ‍್ಸ್‌ ಫಿಲಂ ಬಜಾರ್‌’ ಎನ್ನುವ ಸಿನಿಮಾ ಮಾರುಕಟ್ಟೆ ನಿರ್ಮಾಣ ಮಾಡಿಕೊಟ್ಟಿದೆ.

40ಕ್ಕೂ ಹೆಚ್ಚು ಸಿನಿಮಾ ಬೈಯರ್‌ಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಇದರಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಿನಿಮಾಗಳಿಗೆ ವಿಶೇಷವಾದ ಮಾರುಕಟ್ಟೆ ನಿರ್ಮಾಣವಾಗುತ್ತಿದೆ. ಈ ಬಾರಿ ಬೆಂಗಳೂರು ಅಂತರ ರಾಷ್ಟ್ರೀಯ ಸಿನಿಮೋತ್ಸವದ ಮೂಲಕ ಇದಕ್ಕೆ ಚಾಲನೆ ಸಿಕ್ಕಿದ್ದು, ಪ್ರತಿ ನಾಲ್ಕು ತಿಂಗಳಿಗೊಮ್ಮೆ ಈ ಬಜಾರ್‌ ನಡೆಯಲ್ಲಿದ್ದು, ಕನ್ನಡ ನಿರ್ಮಾಪಕರ ಹಿತ ಕಾಯಲು ಈ ಕಾರ್ಯಕ್ರಮ ಮಾಡಲಾಗುತ್ತಿದೆ’ ಎಂದರು.

ಇದೇ ವೇಳೆ ಮಾತನಾಡಿದ ನಿರ್ದೇಶಕ ಬಿ.ಆರ್‌ ಕೇಶವ, “ಈ ಬಾರಿ ಡೈರೆಕ್ಟರ‍್ಸ್‌ ಫಿಲಂ ಬಜಾರ್‌ನಲ್ಲಿ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳು ಪಾಲ್ಗೊಂಡಿದ್ದವು. ಕನ್ನಡ ಸಿನಿಮಾಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಿಕೊಡುವುದು ಇದರ ಹಿಂದಿನ ಉದ್ದೇಶ. ಬೇರೆ ಬೇರೆ ಭಾಷೆಯ ನಿರ್ಮಾಪಕರು ವಿತರಕರು ಇದರಲ್ಲಿ ಭಾಗವಹಿಸಿದ್ದರು. ಎಲ್ಲರಿಂದಲೂ ಫಿಲಂ ಬಜಾರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಕಾರ್ಯಕ್ರಮವನ್ನು ಮುಂದೆಯೂ ಹೀಗೆ ಯಶಸ್ವಿಯಾಗಿ ನಡೆದುಕೊಂಡು ಹೋಗಲಿದೆ. ಇದಕ್ಕೆ ಚಿತ್ರರಂಗದ ಎಲ್ಲರ ಸಲಹೆ, ಸಹಕಾರ ಅಗತ್ಯ’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next