Advertisement

ಪ್ರಮಾಣಪತ್ರ ಸಲ್ಲಿಸಲು ಮಸೀದಿಗಳಿಗೆ ನಿರ್ದೇಶನ

03:03 PM Aug 11, 2021 | Team Udayavani |

ಬೆಂಗಳೂರು: “ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳು-2000’ರ ಅನ್ವಯ ಪರವಾನಿಗೆ ಪಡೆಯದ ಹೊತರು ಧ್ವನಿವರ್ಧಕಗಳನ್ನು ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿ ಪ್ರಮಾಣಪತ್ರ ಸಲ್ಲಿಸುವಂತೆ ನಗರದ ಥಣಿಸಂದ್ರ ಹಾಗೂ ಸುತ್ತಲಿನ 16 ಮಸೀದಿಗಳಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಈ ವಿಚಾರವಾಗಿ ಪಿ.ರಾಕೇಶ್‌ ಮತ್ತು ಅಯ್ಯಪ್ಪ ದಾಸ್‌ ಬಾಲಗೋಪಾಲ್‌ ಸೇರಿದಂತೆ ಥಣಿಸಂದ್ರ ಮುಖ್ಯ ರಸ್ತೆಯ ನಾರ್ಥ್ ಐಕಾನ್‌ ಅಪಾರ್ಟ್‌ಮೆಂಟ್‌ನ 32 ಮಂದಿ ನಿವಾಸಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ಹಾಗೂ ನ್ಯಾ.ಎನ್‌.ಎಸ್‌.ಸಂಜಯ್‌ ಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ಈ ನಿರ್ದೇಶನ ನೀಡಿತು.

ವಿಚಾರಣೆ ವೇಳೆ ಮಸೀದಿಗಳ ಆಡಳಿತ ಮಂಡಳಿ ಪರ ವಕೀಲರು ವಾದ ಮಂಡಿಸಿ, ಧ್ವನಿವರ್ಧಕಗಳ ಬಳಕೆಗೆ ಪರವಾನಿಗೆ ಪಡೆದುಕೊಳ್ಳಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, “ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳು-2000’ರ ಪ್ರಕಾರ ಸಂಬಂಧಪಟ್ಟ ಪ್ರಾಧಿಕಾರದಿಂದ ಲಿಖೀತ ಪರವಾನಿಗೆ ಪಡೆಯದ ಹೊರತು ಸಾರ್ವಜನಿಕರನ್ನು ಉದ್ದೇಶಿಸುವ ವ್ಯವಸ್ಥೆಗೆ ಧ್ವನಿವರ್ಧಕಗಳನ್ನು ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿ ಪ್ರಮಾಣಪತ್ರ ಸಲ್ಲಿಸಲು ಎಲ್ಲಾ 16 ಮಸೀದಿಗಳ ಆಡಳಿತ ಮಂಡಳಿಗಳಿಗೆ ನಿರ್ದೇಶನ ನೀಡಿತು.

ಈ ಮಧ್ಯೆ ಅರ್ಜಿದಾರರ ಪರ ವಕೀಲ ಶ್ರೀಧರ ಪ್ರಭು ವಾದ ಮಂಡಿಸಿ, ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ರಾಜ್ಯ ವಕ್ಫ್ ಮಂಡಳಿ ಸುತ್ತೋಲೆ ಹೊರಡಿಸಿರುವ ವಿಚಾರವನ್ನು ನ್ಯಾಯಪೀಠದ ಗಮನಕ್ಕೆ ತಂದರು.

Advertisement

ಇದನ್ನೂ ಓದಿ:ನಮಗೆ ಬೆಂಕಿ ಬಂಡಾಯ ಏನೂ ಇಲ್ಲ : ಸಚಿವ ಶ್ರೀರಾಮುಲು

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ಧ್ವನಿವರ್ಧಕಗಳ ಬಳಕೆ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳಡಿ ನಿರ್ವಹಿಸಲ್ಪಡಬೇಕಾದ ವಿಷಯ. ಈ ವಿಚಾರದಲ್ಲಿ ವಕ್ಫ್ ಮಂಡಳಿಗೆ ಯಾವ ಕೆಲಸವೂ ಇಲ್ಲ. ಮಂಡಳಿ ಹೊರಡಿಸಿದ ಸುತ್ತೋಲೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ ಎಂದು ಹೇಳಿತು.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ಅಡ್ವೋಕೇಟ್‌ ಜನರಲ್‌ ಅವರು ವಾದ ಮಂಡಿಸಲಿದ್ದಾರೆ. ಅದಕ್ಕಾಗಿ ಕಾಲಾವಕಾಶ ಬೇಕು ಎಂದು ಸರ್ಕಾರದ ಪರ ವಕೀಲರು ಕೋರಿದರು. ಅದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಆ.28ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next