ನಮ್ ತಂದೆ ಶರ್ಟ್ ಪ್ಯಾಂಟ್ ಹಾಕಿದ್ರು ಅಂತ ನಾನು ಅದನ್ನೇ ಹಾಕ್ಕೋಬೇಕೆಂದಿಲ್ಲ. ಅವರು ರಾಜ್‌ಕುಮಾರ್. ರಾಜ್ ಕುಮಾರ್ ಒಬ್ರೆ ಆಗಿರಲಿ ಅನ್ನೋದು ಆಸೆ….
ಶಿವರಾಜಕುಮಾರ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 34 ವರ್ಷಗಳಾಗಿವೆ. ಒಬ್ಬ ನಟ ಚಿತ್ರರಂಗದಲ್ಲಿ 34 ವರ್ಷ ಸಾಗಿಬರೋದೆಂದರೆ ಅದು ಸುಲಭದ ಮಾತಲ್ಲ. ಸೋಲು-ಗೆಲುವು, ನೋವು, ನಲಿವು ಎಲ್ಲವನ್ನು ಸಮಾನವಾಗಿ ಸ್ವೀಕರಿಸುತ್ತಾ ಬಂದ ಶಿವರಾಜಕುಮಾರ್ ಈಗ 125ನೇ ಸಿನಿಮಾದ ಹೊಸ್ತಿಲಿನಲ್ಲಿ ನಿಂತಿದ್ದಾರೆ. ಇತ್ತೀಚೆಗಷ್ಟೇ ಅವರ 123ನೇ ಸಿನಿಮಾದ ಮುಹೂರ್ತ ನಡೆದಿದೆ. 124ನೇ ಚಿತ್ರದ ಪ್ಲ್ರಾನ್ ನಡೆಯುತ್ತಿದೆ. ಈ ಹಿಂದೆ ಸೆಟ್ಟೇರಿದ “ಎಸ್‌ಆರ್‌ಕೆ’ 124 ಸಿನಿಮಾ ಆಗುವ ಸಾಧ್ಯತೆ ಇದೆ. ಇನ್ನು, 125ನೇ ಸಿನಿಮಾ. “ಭೈರತಿ ರಣಗಲ್’. ಇದನ್ನು ತಮ್ಮದೇ ಬ್ಯಾನರ್‌ನಲ್ಲಿ ಮಾಡಲು ಶಿವಣ್ಣ ತಯಾರಾಗಿದ್ದಾರೆ.
ಈ ಮೂಲಕ ನಿರ್ಮಾಣಕ್ಕೂ ಇಳಿಯುತ್ತಿದ್ದಾರೆ. ಇದರ ಜೊತೆಗೆ ಶಿವಣ್ಣ ಹೊಸ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಅದು ನಿರ್ದೇಶನ. ಹೌದು, ಇಷ್ಟು ವರ್ಷದ ನಟನಾ ಅನುಭವದೊಂದಿಗೆ ಈಗ ಶಿವಣ್ಣ ನಿರ್ದೇಶನದತ್ತ ಆಸಕ್ತಿ ತೋರಿದ್ದಾರೆ. ಈಗಾಗಲೇ ಒನ್‌ಲೈನ್ ಕಥೆ ರೆಡಿಯಾಗಿದ್ದು, ಟೈಟಲ್ ಕೂಡಾ ಸದ್ಯದಲ್ಲೇ ರಿಜಿಸ್ಟರ್ ಆಗಲಿದೆ. ಮುಂದಿನ ವರ್ಷ ನಿರ್ದೇಶನ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡುವ ಶಿವಣ್ಣ, “ಮುಂದಿನ ವರ್ಷ ನಾನು ನಿರ್ದೇಶನ ಮಾಡುವ ಸಾಧ್ಯತೆ ಇದೆ. ಈಗಾಗಲೇ ಒನ್‌ಲೈನ್, ಟೈಟಲ್ ಎಲ್ಲವೂ ಹೊಳೆದಿದೆ. ನೋಡೋಣ’ ಎಂದಷ್ಟೇ ಹೇಳುತ್ತಾರೆ. ಹಾಗಾದರೆ ಶಿವಣ್ಣ ಸಿನಿಮಾದಲ್ಲಿ ಯಾರಿರುತ್ತಾರೆ, ಪುನೀತ್ ಏನಾದರೂ ನಟಿಸುತ್ತಾರಾ ಎಂದರೆ, “ಎಲ್ಲವೂ ಮುಂದೆ ಗೊತ್ತಾಗಲಿದೆ’ ಎಂದು ನಗೆ ಬೀರುತ್ತಾರೆ.
ಇನ್ನು ತಮ್ಮ 34 ವರ್ಷದ ಚಿತ್ರರಂಗದ ಜರ್ನಿಯ ಬಗ್ಗೆಯೂ ಶಿವಣ್ಣ ಮಾತನಾಡಿದ್ದಾರೆ. “ಒಮ್ಮೆ ಹಿಂದಿರುಗಿ ನೋಡಿದಾಗ ಇಷ್ಟೆಲ್ಲಾ ಸಿನಿಮಾಗಳನ್ನು ನಾನೇ ಮಾಡಿದೆನಾ ಅನಿಸುತ್ತದೆ. 34 ವರ್ಷ ಚಿತ್ರರಂಗದಲ್ಲಿ ಇರಲು ನಾನು ಅರ್ಹನಾ ಎಂಬ ಆಲೋಚನೆಯೂ ಬರುತ್ತಿದೆ. ಅಷ್ಟರ ಮಟ್ಟಿಗೆ ನಾನು ಏನು ಮಾಡಿದ್ದೇನೆ ಎಂಬ ಪ್ರಶ್ನೆಯೂ ಕಾಡುತ್ತಿದೆ. ಹಾಗಂತ ಇಷ್ಟು ವರ್ಷ ಇದ್ದೀನಿ ಅದಕ್ಕೆ ಕಾರಣ ನಾನೇ ಎಂದರೆ ತಪ್ಪಾಗುತ್ತದೆ. ಅಪ್ಪ-ಅಮ್ಮನ ಆಶೀರ್ವಾದ, ಅಭಿಮಾನಿಗಳ, ಚಿತ್ರರಂಗದವರ ಸಹಕಾರದಿಂದ ಸಾಧ್ಯವಾಗಿದೆ. ಒಂದೊಂದು ಸಿನಿಮಾದ ಸ್ಟಿಲ್‌ಗಳನ್ನು ನೋಡಿದಾಗಲೂ ಮೊನ್ನೆ ಮೊನ್ನೆ ಈ ಚಿತ್ರದಲ್ಲಿ ನಟಿಸಿದಂತಿದೆಯಲ್ಲ ಎಂಬ ಭಾವ ಬರುತ್ತದೆ’ ಎನ್ನುತ್ತಾರೆ.
ನಾನು ಸಾಧು ಅಲ್ಲ, ನನಗೂ ಆಸೆ ಇದೆ: ಶಿವರಾಜಕುಮಾರ್ ನೇರವಾಗಿ ಮಾತನಾಡುವವರು. ಅದು ಏನೇ ಇರಲಿ, ಹೇಳಿಬಿಡುತ್ತಾರೆ. ಈ ಬಾರಿಯೂ ಅವರ ನೇರ ಮಾತುಗಳು ಮುಂದುವರಿದಿದೆ. “ನನಗೆ 58 ವರ್ಷ ಆಗಿದೆ ಎಂದ ಮಾತ್ರಕ್ಕೆ ನಾನು ಜೀನ್ಸ್, ಟೈಟ್ ಜೀನ್ಸ್ ಹಾಕಬಾರದೆಂಬ ರೂಲ್ಸ್ ಇದೆಯಾ. ನಾನು ಮನುಷ್ಯ, ಸಾಧುವಲ್ಲ. ನನಗೂ ಆಸೆ ಇದೆ, ಚೆನ್ನಾಗಿ ಕಾಣಬೇಕು, ಜನ ನನ್ನನ್ನು ನೋಡಬೇಕು ಎಂದು. ನಮ್ ತಂದೆ ಶರ್ಟ್ ಪ್ಯಾಂಟ್ ಹಾಕಿದ್ರು ಅಂತ ನಾನು ಅದನ್ನೇ ಹಾಕ್ಕೋ ಬೇಕೆಂದಿಲ್ಲ. ಅವರು ರಾಜ್‌ಕುಮಾರ್. ರಾಜ್ ಕುಮಾರ್ ಒಬ್ರೆ ಆಗಿರಲಿ ಅನ್ನೋದು ಆಸೆ. ಅವರನ್ನು ಫಾಲೋ ಮಾಡೋಣ. ಅವರ ಸ್ಟೈಲ್‌ನಲ್ಲ. ರಾಜ್‌ಕುಮಾರ್ ಯಾವತ್ತಿಗೂ ಒಂದೇ ಫಿಗರ್. ಇದು ಅವರ ಮಗನ ಫಿಗರ್’ ಎಂದು ನಗುತ್ತಾರೆ.
ಆರ್‌ಡಿಎಕ್ಸ್ ಮುಹೂರ್ತ: ಇನ್ನು ಶಿವರಾಜ್‌ಕುಮಾರ್ ಅವರ ಹೊಸ ಚಿತ್ರ “ಆರ್‌ಡಿಎಕ್ಸ್’ಗೆ ಬುಧವಾರ ಚಾಲನೆ ಸಿಕ್ಕಿದೆ. ತಮಿಳನ ಸತ್ಯಜ್ಯೋತಿ ಫಿಲಂಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ರವಿ ಅರಸು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣ ಪೊಲೀಸ್ ಆಫೀಸರ್ ಆಗಿ ನಟಿಸಲಿದ್ದಾರೆ. ಚಿತ್ರಕ್ಕೆ ಪ್ರಿಯಾ ಆನಂದ್ ನಾಯಕಿ. ಎಲ್ಲಾ ಓಕೆ “ಆರ್‌ಡಿಎಕ್ಸ್’ ಎಂದರೇನು ಎಂದು ನೀವು ಕೇಳಬಹುದು. ಶಿವಣ್ಣ ಹೇಳುವಂತೆ ನಾಯಕನ ವ್ಯಕ್ತಿತ್ವ. ಅಷ್ಟೊಂದು ಸ್ಟ್ರಾಂಗ್. ನೀವು ಬೇಕಾದರೆ ರಾಬರ್ಟ್ ಡೇವಿಡ್ ಕ್ಸೇವಿಯರ್ ಎಂದುಕೊಳ್ಳಬಹುದು!