Advertisement

ನೇರ ತೆರಿಗೆ ಸಂಗ್ರಹ ಶೇ.24 ಹೆಚ್ಚಳ: ಕೇಂದ್ರ ವಿತ್ತ ಖಾತೆ

01:12 AM Feb 12, 2023 | Team Udayavani |

ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಸಂಗ್ರಹ ಶೇ. 24ರಷ್ಟು ಹೆಚ್ಚಳವಾಗಿದ್ದು, ಈವರೆಗೆ ಒಟ್ಟು 15.67 ಲಕ್ಷ ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ಶನಿವಾರ ಕೇಂದ್ರ ವಿತ್ತ ಸಚಿ ವಾಲಯ ಮಾಹಿತಿ ನೀಡಿದೆ.

Advertisement

ಜತೆಗೆ ರೀಫ‌ಂಡ್‌ (ಮರು ಪಾವತಿ)ಗೆ ಹೊಂದಾಣಿಕೆ ಮಾಡಿದ ಬಳಿಕ ನಿವ್ವಳ ನೇರ ತೆರಿಗೆ ಸಂಗ್ರಹ 12.98 ಲಕ್ಷ ಕೋಟಿ ರೂ. ಆಗಿದ್ದು, ಶೇ. 18.40ರ ಬೆಳವಣಿಗೆ ದಾಖಲಿಸಿದೆ. ಇದು ಪ್ರಸಕ್ತ ಹಣಕಾಸು ವರ್ಷದ ನೇರ ತೆರಿಗೆ ಸಂಗ್ರಹದ ಪರಿಷ್ಕೃತ ಅಂದಾಜಿನ ಶೇ. 79ರಷ್ಟು ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ತಿಳಿಸಿದೆ.

ಫೆ. 10ರ ವರೆಗೆ 15.67 ಲಕ್ಷ ಕೋಟಿ ರೂ. ಸಂಗ್ರಹವಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 24.09ರಷ್ಟು ಏರಿಕೆ ಆಗಿದೆ. ವಿತ್ತ ವರ್ಷ ಮುಗಿಯಲು ಇನ್ನೂ 2 ತಿಂಗಳು ಬಾಕಿಯಿದ್ದು, ಹಾಲಿ ಹಣಕಾಸು ವರ್ಷದಲ್ಲಿ (2022 23) ನೇರ ತೆರಿಗೆಯ ಆದಾಯವು ಶೇ. 17ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. 2021 22ರ ಹಣಕಾಸು ವರ್ಷದಲ್ಲಿ ಒಟ್ಟಾರೆ ನೇರ ತೆರಿಗೆ ಸಂಗ್ರಹ 14.08 ಲಕ್ಷ ಕೋಟಿ ರೂ. ಆಗಿತ್ತು.

ಎಪ್ರಿಲ್‌ ಮತ್ತು ಫೆಬ್ರವರಿ 10ರ ನಡುವೆ ಒಟ್ಟು ಕಾರ್ಪೊರೇಟ್‌ ಆದಾಯ ತೆರಿಗೆ ಮತ್ತು ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ ಕ್ರಮವಾಗಿ ಶೇ. 19.33 ಮತ್ತು ಶೇ. 29.63ರಷ್ಟು ಏರಿಕೆ ಕಂಡಿದೆ.

ರಾಜ್ಯ: ದಾಖಲೆ ಜಿಎಸ್‌ಟಿ ಸಂಗ್ರಹ
ಬೆಂಗಳೂರು: ಈ ವರ್ಷದ ಜನವರಿಯಲ್ಲಿ 6,085 ಕೋಟಿ ರೂ. ಜಿಎಸ್‌ಟಿ ಸಂಗ್ರಹಿಸುವ ಮೂಲಕ ರಾಜ್ಯ ಸರಕಾರ ದಾಖಲೆ ಬರೆದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹರ್ಷ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಶೇ. 30ರಷ್ಟು ಅತ್ಯಧಿಕ ಬೆಳವಣಿಗೆ ಪ್ರಮಾಣ ಹೊಂದಿರುವ ರಾಜ್ಯವಾಗಿ ಮುಂದುವರಿದಿದೆ. ತೆರಿಗೆ ಸಂಗ್ರ ಹಣೆಯಲ್ಲಿ ಸುಧಾರಣೆ, ಹೆಚ್ಚಿನ ಕಣ್ಗಾವಲು, ಆರ್ಥಿಕತೆಯಲ್ಲಿ ಚೇತರಿಕೆ ಹಾಗೂ ತೆರಿಗೆದಾರರಲ್ಲಿ ಹೆಚ್ಚಿರುವ ಅನುಸರಣೆಯಿಂದಾಗಿ ಗಮನಾರ್ಹ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next