ನವದೆಹಲಿ: ದೇಶದಲ್ಲಿ ಕಾರ್ಪೊರೇಟ್ ಮತ್ತು ವೈಯಕ್ತಿಕ ತೆರಿಗೆಗಳ ಸಂಗ್ರಹ ಪ್ರಮಾಣ ಏ.1ರಿಂದ ಅ.8ರವರೆಗೆ ಶೇ.24 ಏರಿಕೆಯಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯದ ತೆರಿಗೆ ಇಲಾಖೆ ಭಾನುವಾರ ತಿಳಿಸಿದೆ.
ನಗದು ಲೆಕ್ಕಾಚಾರದಲ್ಲಿ ಹೇಳುವುದಿದ್ದರೆ 8.98 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಇದರಿಂದಾಗಿ ಬಜೆಟ್ ಮಂಡನೆ ವೇಳೆ ನಿರೀಕ್ಷೆ ಮಾಡಿದ್ದಕ್ಕಿಂತ ನಿವ್ವಳ ತೆರಿಗೆ ಸಂಗ್ರಹ ಶೇ.52ಕ್ಕಿಂತ ಹೆಚ್ಚಾದಂತಾಗಿದೆ.
ವೈಯಕ್ತಿಕ ಆದಾಯ ತೆರಿಗೆ ಶೇ.32, ಕಾರ್ಪೊರೇಟ್ ತೆರಿಗೆಯಲ್ಲಿ ಶೇ.16.73ರಷ್ಟು ಹೆಚ್ಚು ಸಂಗ್ರಹವಾಗಿದೆ. ರಿಟರ್ನ್ಸ್ ಸಲ್ಲಿಕೆ ಮಾಡಿದವರಿಗೆ ಮರು ಪಾವತಿ ಮಾಡಿದ ಬಳಿಕ ಮೊತ್ತವನ್ನು ಹೊಂದಾಣಿಕೆ ಮಾಡಿದ ಬಳಿಕ ನೇರ ತೆರಿಗೆ ಸಂಗ್ರಹ ಪ್ರಮಾಣ 7.45 ಲಕ್ಷ ಕೋಟಿ ರೂ. ಆಗಿದೆ.
ಫೆ.1ರಂದು ಮಂಡಿಸಲಾಗಿದ್ದ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ 14.20 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹ ಮಾಡುವ ಗುರಿ ಹಾಕಿಕೊಳ್ಳಲಾಗಿತ್ತು. 2021-22ನೇ ಸಾಲಿನಲ್ಲಿ 14.10 ಲಕ್ಷ ಕೋಟಿ ರೂ. ಸಂಗ್ರಹ ಮಾಡಲಾಗಿತ್ತು.
ರಿಟರ್ನ್ಸ್ ಸಲ್ಲಿಕೆ ಮಾಡಿದವರಿಗೆ 1.53 ಲಕ್ಷ ಕೋಟಿ ರೂ. ಮೊತ್ತವನ್ನು ನೀಡಲಾಗಿದೆ. ಕಳೆದ ವಿತ್ತೀಯ ವರ್ಷಕ್ಕೆ ಹೋಲಿಕೆ ಮಾಡಿದರೆ ಅದರ ಪ್ರಮಾಣ ಶೇ.81 ಹೆಚ್ಚಾಗಿದೆ ಎಂದು ತೆರಿಗೆ ವಿಭಾಗ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.