ಕೊಪ್ಪಳ: ತೋಟಗಾರಿಕೆ ಇಲಾಖೆಯು ಆಯೋಜನೆ ಮಾಡಿರುವ ಮಾವು ಮೇಳವು ರೈತರು ಹಾಗೂ ಗ್ರಾಹಕರಿಗೆ ತುಂಬ ಅನುಕೂಲವಾಗಲಿದೆ ಎಂದು ಜಿಲ್ಲಾಧಿಧಿಕಾರಿ ಎಂ. ಕನಗವಲ್ಲಿ ಹೇಳಿದರು.
ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮ, ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಲಾಗಿದ್ದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ಮಾತನಾಡಿದರು.
ಮಾವು ಮೇಳದಿಂದ ರೈತರು ತಾವು ಬೆಳೆದಿರುವ ಹಣ್ಣುಗಳನ್ನು ಯಾವುದೇ ಮಧ್ಯವರ್ತಿಗಳ ಸಹಾಯ ಇಲ್ಲದೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಸಹಕಾರಿಯಾಗಲಿದೆ. ಹಣ್ಣುಗಳನ್ನು ನೈಸರ್ಗಿಕವಾಗಿ ಮಾಗಿಸಿ ಮಾರಾಟ ಮಾಡಲಾಗುತ್ತಿರುವುದರಿಂದ ಆರೋಗ್ಯದ ದೃಷ್ಠಿಯಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ. ಜಿಲ್ಲೆಯ ರೈತರು ಬೆಳೆದಿರುವ ಹಣ್ಣುಗಳು ಮೇಳದಲ್ಲಿ ಲಭ್ಯವಿದ್ದು ಸಂತೋಷದ ವಿಷಯವಾಗಿದೆ. ಕಳೆದ ವರ್ಷ
ಮಾವು ಮೇಳವನ್ನು ಜಿಲ್ಲೆಯಲ್ಲಿ ಮೊದಲನೇ ಬಾರಿಗೆ ಏರ್ಪಡಿಸಲಾಗಿತ್ತು. ಈ ಮೇಳವು ತುಂಬಾ ಯಶಸ್ವಿಯಾಗಿದ್ದು, ಈ ವರ್ಷವೂ ರೈತರಿಗೆ ಹಾಗೂ ಜಿಲ್ಲೆಯ ಸಾರ್ವಜನಿಕರಿಗೆ ಮಾವು ಮೇಳವು ಪ್ರಯೋಜನಕಾರಿಯಾಗಲಿದೆ. ತೋಟಗಾರಿಕೆ ಇಲಾಖೆ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣಾ ಉಕ್ಕುಂದ ಅವರು ಮಾತನಾಡಿ, ಮಾವು ಮೇಳವನ್ನು ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮದ ಸಹಯೋಗದೊಂದಿಗೆ ಆಯೋಜಿಸಲಾಗಿದೆ.
ಮೇಳದಲ್ಲಿ ಕೊಪ್ಪಳ ಜಿಲ್ಲೆಯ ಹಾಗೂ ಸುತ್ತ ಮುತ್ತ ಸೇರಿ ಸುಮಾರು 50ಕ್ಕೂ ಹೆಚ್ಚಿನ ರೈತರು ತಮ್ಮ ಹೆಸರನ್ನು ನೋಂದಾಯಿಸಿ ಬೇನೆಷಾನ್, ಕೇಸರ್, ದಶಹರಿ, ಆಪೂಸ್, ಮಲ್ಲಿಕಾ, ರಸಪುರಿ, ಸುವರ್ಣರೇಖ, ಇಮಾಮ್ ಪಸಂದ್ ಮುಂತಾದ ತಳಿಗಳನ್ನು ತಂದಿದ್ದಾರೆ. ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳು ಸವಿಯಲು ಜಿಲ್ಲೆಯ ಸಾರ್ವಜನಿಕರಿಗೆ ಲಭ್ಯವಾಗಿವೆ. ರೈತರೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದರಿಂದ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಹಲವು ತಳಿಯ ಮಾವು ಹಣ್ಣುಗಳ ಲಭ್ಯವಾಗಲಿದ್ದು, ರೈತರಿಗೆ ಯಾವುದೇ ನಷ್ಟ ಇಲ್ಲದೇ ನೇರ ಲಾಭ ದೊರೆಯಲಿದೆ. ಹಾಗೂ ಮಾವಿನ ಹಣ್ಣನ್ನು ಸೇವಿಸುವುದರಿಂದಾಗುವ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ನೀಡಲಾಗುತ್ತಿದೆ. ಮಾವಿನ ಹಣ್ಣಿನಿಂದ ಸಂಸ್ಕರಿಸಿದ ಉತ್ಪನ್ನಗಳಾದ ಚಟ್ನಿ, ಉಪ್ಪಿನಕಾಯಿ, ಮಾವಿನ ರಸ ಹಾಗೂ ಇತರೆ ಉತ್ಪನ್ನಗಳ ಬಗ್ಗೆ ರೈತರಿಗೂ ಹಾಗೂ ಸಾರ್ವಜನಿಕರಿಗೂ ಮಾಹಿತಿಯನ್ನು ನೀಡಲಾಗುವುದು. ಕೊಪ್ಪಳ ಜಿಲ್ಲೆಯ ಗ್ರಾಹಕರು ಮೇಳದಲ್ಲಿ ಭಾಗವಹಿಸಿ ರೈತರಿಂದ ನೇರವಾಗಿ ಖರೀದಿಸಿ ಜಿಲ್ಲೆಯ ಮಾವು ಬೆಳೆಗಾರರಿಗೆ ಪ್ರೋತ್ಸಾಹ ನೀಡಿ, ಹಾಗೂ ಮಾವು ಮೇಳವನ್ನು ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.