ಸುಳ್ಯ: ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಸುಳ್ಯದಲ್ಲಿ ಬಿಜೆಪಿ ಗೆಲುವಿನ ಓಟ ಮುಂದುವರಿಸುವ ಸಿದ್ಧತೆಯಲ್ಲಿದ್ದರೆ, ಶತಾಯಗತಾಯ ಮರಳಿ ಗೆಲ್ಲುವ ಉತ್ಸಾಹದಿಂದ ಕಾಂಗ್ರೆಸ್ ಅಖಾಡಕ್ಕೆ ಧುಮುಕಿದೆ.
ಬಿಜೆಪಿ ಅಭ್ಯರ್ಥಿ ಅಧಿಕೃತ ಘೋಷಣೆಯಾದರೆ, ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಪಕ್ಕಾ ಆಗಿದ್ದು, ಘೋಷಣೆಗೆ ಮಾತ್ರ ಬಾಕಿ ಉಳಿದಿದೆ. 7ನೇ ಬಾರಿ ಅಖಾಡಕ್ಕೆ ಇಳಿಯುತ್ತಿರುವ ಸುಳ್ಳಿ ಅಂಗಾರ ಹಾಗೂ 4ನೇ ಬಾರಿ ಸ್ಪರ್ಧಿಸುವ ತಯಾರಿಯಲ್ಲಿರುವ ಬೆಳ್ಳಿಪ್ಪಾಡಿ ಡಾ| ರಘು ಅವರ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದೆ.
1962ರಲ್ಲಿ ಪುತ್ತೂರು ಕ್ಷೇತ್ರದಿಂದ ಪ್ರತ್ಯೇಕಿಸಲ್ಪಟ್ಟು ಹೊಸ ಕ್ಷೇತ್ರವಾಗಿ ರೂಪುಗೊಂಡ ಸುಳ್ಯದಲ್ಲಿ ತಲಾ ಒಂದು ಬಾರಿ ಸ್ವತಂತ್ರ ಪಕ್ಷ, ಜನತಾ ಪಕ್ಷ ಗೆದ್ದಿರುವುದನ್ನು ಬಿಟ್ಟರೆ ಉಳಿದ ಅವಧಿಗಳಲ್ಲಿ ಬಿಜೆಪಿ, ಕಾಂಗ್ರೆಸ್ ಗೆಲುವು ಸಾಧಿಸಿವೆ. 1967ರಲ್ಲಿ ಎಸ್‌ಸಿ ಮೀಸಲು ಕ್ಷೇತ್ರವಾದ ಮೇಲೆ ನಡೆದ ಚುನಾವಣೆಗಳಲ್ಲಿ 6 ಬಾರಿ ಬಿಜೆಪಿ, 3 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದ್ದವು. 1994ರಿಂದ 2013ರ ತನಕ ಬಿಜೆಪಿ ನಿರಂತರ ಗೆದ್ದಿದೆ.
ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತದಾರರ ಸಂಖ್ಯೆ ಅತ್ಯಧಿಕ. ಪ. ಜಾತಿ, ಮುಸ್ಲಿಂ ಸಮುದಾಯ, ಪ. ವರ್ಗ ಅನಂತರದ ಸ್ಥಾನದಲ್ಲಿವೆ. ಮಲಯಾಳಿ ಕ್ರೈಸ್ತರು, ತಮಿಳು ಭಾಷಿಕ ಮತದಾರರೂ ಇಲ್ಲಿದ್ದಾರೆ. ಉಳಿದಂತೆ ಬಿಲ್ಲವ, ಮಣಿಯಾಣಿ, ಬಂಟ ಇತ್ಯಾದಿ ಮತದಾರರು.
Related Articles
ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ಇದೆ. ಎಸ್‌ಡಿಪಿಐ, ಜೆಡಿಎಸ್ ಬೆಂಬಲಿತ ಬಿಎಸ್‌ಪಿ, ಅಂಬೇಡ್ಕರ್ ಸೇವಾ ಸಮಿತಿ ಬೆಂಬಲಿತ ಅಭ್ಯರ್ಥಿಗಳೂ ಕಣಕ್ಕೆ ಇಳಿಯುವ ಮುನ್ಸೂಚನೆ ದೊರೆತಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರಕ್ಕೆ ಧುಮುಕಿವೆ. ಬಿಜೆಪಿಯಿಂದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮಡಿಕೇರಿಗೆ ತೆರಳುವ ಸಂದರ್ಭ ಸುಳ್ಯದಲ್ಲಿ ಕಾರ್ನರ್ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಎರಡೂ ಪಕ್ಷಗಳು ಮನೆಮನೆ ಭೇಟಿ ಕಾರ್ಯಕ್ರಮಕ್ಕೆ ಒತ್ತು ನೀಡಿದ್ದು, ಬಹಿರಂಗ ಸಭೆಗಳಿಂದ ದೂರ ಉಳಿದಿರುವುದು ಕಂಡುಬಂದಿದೆ.
ಮೀಸಲು ಕ್ಷೇತ್ರ
ಸುಳ್ಯ, ಕಡಬ ತಾಲೂಕು ಹಾಗೂ ಪುತ್ತೂರು ತಾಲೂಕಿನ ಕೆಲ ಗ್ರಾಮ ಒಳಗೊಂಡಂತೆ, 76 ಗ್ರಾಮಗಳು ಈ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿವೆ. 1967ರ ಅನಂತರ ಪ.ಜಾತಿ ಮೀಸಲು ಕ್ಷೇತ್ರವಾಗಿ ರೂಪುಗೊಂಡ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಪ್ರಥಮವಾಗಿ ಗೆದ್ದದ್ದು ಸ್ವತಂತ್ರ ಪಕ್ಷದ ರಾಮಚಂದ್ರ ಅವರು. ಅನಂತರದ 10 ಚುನಾವಣೆಗಳಲ್ಲಿ ಪಿ.ಡಿ ಬಂಗೇರ, ಎ. ರಾಮಚಂದ್ರ, ಬಾಕಿಲ ಹುಕ್ರಪ್ಪ, ಕೆ. ಕುಶಲ, ಅಂಗಾರ ಅವರು ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಹಾಲಿ ಶಾಸಕ ಎಸ್. ಅಂಗಾರ ಅತೀ ಹೆಚ್ಚು ಅಂದರೆ 6 ಚುನಾವಣೆಗಳಲ್ಲಿ ಸ್ಪರ್ಧಿಸಿ 5 ಬಾರಿ ಗೆದ್ದಿದ್ದಾರೆ. 2003ರಿಂದ ಡಾ| ರಘು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಮೂರು ಚುನಾವಣೆಗಳಲ್ಲೂ ಅವರ ಮತ ಗಳಿಕೆಯ ಪ್ರಮಾಣ ವೃದ್ಧಿಯಾಗುತ್ತಿರುವುದರಿಂದ ಈ ಬಾರಿ ಅವರಿಗೆ ಟಿಕೆಟ್ ಖಾತರಿ ಆಗಿದೆ.
ಕ್ಷೇತ್ರದ ಶಾಸಕರು ಇವರು
1957 – ಕೆ.ವಿ. ಗೌಡ ಮತ್ತು ಸುಬ್ಬಯ್ಯ ನಾಯ್ಕ (ಕಾಂಗ್ರೆಸ್), 1962-ಕೆ.ವಿ. ಗೌಡ ಮತ್ತು ಸುಬ್ಬಯ್ಯ ನಾಯ್ಕ (ಕಾಂಗ್ರೆಸ್), 1967 – ಎ. ರಾಮಚಂದ್ರ (ಸ್ವತಂತ್ರ ಪಕ್ಷ), 1972 – ಪಿ.ಡಿ. ಬಂಗೇರ (ಕಾಂಗ್ರೆಸ್), 1978 – ಎ. ರಾಮಚಂದ್ರ (ಜನತಾ ಪಕ್ಷ), 1983 – ಬಾಕಿಲ ಹುಕ್ರಪ್ಪ (ಬಿಜೆಪಿ), 1985 – ಕೆ. ಕುಶಲ (ಕಾಂಗ್ರೆಸ್), 1989 – ಕೆ. ಕುಶಲ (ಕಾಂಗ್ರೆಸ್), 1994, 1999, 2003, 2008 ಮತ್ತು 2013ರಲ್ಲಿ ಎಸ್. ಅಂಗಾರ (ಬಿಜೆಪಿ).
ಮಂತ್ರಿಗಿರಿ ಸಿಕ್ಕಿಲ್ಲ
ಸುಳ್ಯ ತಾಲೂಕಿನವರಾಗಿ, ಬೇರೆ ಕ್ಷೇತ್ರದಿಂದ ಗೆದ್ದವರು ಮುಖ್ಯಮಂತ್ರಿ, ಸಚಿವರಾಗಿದ್ದಾರೆ. ಆದರೆ ಸುಳ್ಯ ಕ್ಷೇತ್ರದಿಂದ ಚುನಾಯಿತರಾದ ವರಿಗೆ ಆ ಭಾಗ್ಯ ಸಿಕ್ಕಿಲ್ಲ. ದ್ವಿ-ಸದಸ್ಯ ಕ್ಷೇತ್ರವಾಗಿ ಪುತ್ತೂರು-ಸುಳ್ಯದಿಂದ 15 ವರ್ಷ ಶಾಸಕರಾಗಿದ್ದ ಕೆ.ವಿ. ಗೌಡ ಅವರಿಗೆ ನಿಜ ಲಿಂಗಪ್ಪ ಸರಕಾರದಲ್ಲಿ ಉಪಸಚಿವ ಸ್ಥಾನದ ಆಹ್ವಾನ ಬಂದಿತ್ತು. ಆದರೆ ಕ್ಯಾಬಿನೆಟ್ ಸ್ಥಾನ ನಿರೀಕ್ಷೆಯಲ್ಲಿದ್ದ ಕೆ.ವಿ. ಗೌಡರು ಇದನ್ನು ತಿರಸ್ಕರಿಸಿದ್ದರು. 2008ರ ಬಿಜೆಪಿ ಸರಕಾರದಲ್ಲಿ ಅಂಗಾರಗೆ ಸಚಿವ ಸ್ಥಾನ ದೊರೆಯಲಿದೆ ಎಂದು ಭಾವಿಸಲಾಗಿದ್ದರೂ ಅವಕಾಶ ಸಿಕ್ಕಿರಲಿಲ್ಲ.
ನೇರಾನೇರ ಹಣಾಹಣಿ
ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಪೈಪೋಟಿ ಇದೆ. ಬಿಜೆಪಿ ಹಿಂದಿನ ಲೆಕ್ಕಾಚಾರದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದೆ. ಕಾಂಗ್ರೆಸ್ 25 ವರ್ಷಗಳ ಬಳಿಕವಾದರೂ ಮತದಾರರು ಅವಕಾಶ ಕೊಡುತ್ತಾರೆ ಎಂಬ ಆಶಾಭಾವ ಹೊಂದಿದೆ. ಆದರೆ ಗೆಲುವು ಅಷ್ಟೇನೂ ಸಲೀಸಲ್ಲ ಅನ್ನುವುದು ಪ್ರಚಾರದ ಸಂದರ್ಭ ಎರಡು ಪಕ್ಷಗಳಿಗೂ ಖಾತರಿ ಆಗಿದೆ.
5 ಅವಧಿಯಲ್ಲಿ ಬಿಜೆಪಿಯ ವೈಫಲ್ಯಗಳು, ಕಾಂಗ್ರೆಸ್ ಸರಕಾರದ ಸಾಧನೆಗಳು ಗೆಲುವಿಗೆ ಪೂರಕ ಎಂದು ಕಾಂಗ್ರೆಸ್ ಮುಖಂಡರು ವಿಶ್ವಾಸದಲ್ಲಿದ್ದರೆ, ಬಿಜೆಪಿಯ ಅಭಿವೃದ್ಧಿ ಕೆಲಸ, ಕೇಂದ್ರದ ಆಡಳಿತ ನಮ್ಮ ಗೆಲುವಿಗೆ ಸೋಪಾನ ಅನ್ನುತ್ತಾರೆ ಬಿಜೆಪಿ ಮುಖಂಡರು.
ಮತದಾನ ಬಹಿಷ್ಕಾರದ ಕೂಗು
ಈ ಚುನಾವಣೆಯಲ್ಲಿ ಮೂಲಸೌಕರ್ಯಗಳ ಕೊರತೆ ಬಗ್ಗೆ ಜನರು ಧ್ವನಿ ಎತ್ತುತ್ತಿರುವುದು ಗಮನಾರ್ಹ. 110 ಕೆ.ವಿ. ಸಬ್ ಸ್ಟೇಶನ್ ನನೆಗುದಿಯಲ್ಲಿರುವುದು, ಅಂಬೇಡ್ಕರ್ ಭವನ, ತಾಲೂಕು ಕ್ರೀಡಾಂಗಣ ಅಪೂರ್ಣ, ಕುಡಿಯುವ ನೀರಿಗೆ ಶಾಶ್ವತ ವ್ಯವಸ್ಥೆ ಇಲ್ಲ, ರಸ್ತೆ ಅವ್ಯವಸ್ಥೆ ಇತ್ಯಾದಿಗಳ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್‌ಗಳನ್ನು ಜನರು ಪ್ರಶ್ನಿಸುತ್ತಿದ್ದಾರೆ. ಕೆಲ ಭಾಗದಲ್ಲಿ ನೋಟಾ ಚಲಾವಣೆ, ಮತದಾನ ಬಹಿಷ್ಕಾರದ ಕೂಗು ಕೇಳಿ ಬಂದಿದೆ. ಹಾಗಾಗಿ ಪಕ್ಷ ರಾಜಕೀಯದ ಜತೆಗೆ ಅಭಿವೃದ್ಧಿ ವಿಚಾರಗಳು ಸೋಲು-ಗೆಲುವನ್ನು ನಿರ್ಧರಿಸಲಿವೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.
ಕಿರಣ್ ಪ್ರಸಾದ್ ಕುಂಡಡ್ಕ