Advertisement

ವಿಶ್ವ ಮಾರುಕಟ್ಟೆಗೆ ರಾಜ್ಯದ ಮಾವು ನೇರ ಪ್ರವೇಶ

03:45 AM Jul 06, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಬೆಳೆಯುವ ಮಾವು ವಿಶ್ವಪ್ರಸಿದ್ಧ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಮಾವನ್ನು ವಿಶ್ವಮಾರುಕಟ್ಟೆಗೆ ತಲುಪಿಸಲು ಬೆಳೆಗಾರರು ಕಂಪನಿ ಅಥವಾ ಏಜೆನ್ಸಿ ಮಾರ್ಗವನ್ನು ಆಶ್ರಯಿಸಬೇಕಿತ್ತು. ಆದರೆ ಈಗ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಬೆಳೆಗಾರರೇ ನೇರವಾಗಿ ವಿಶ್ವಮಾರುಕಟ್ಟೆಯಲ್ಲಿ ಭಾಗಿಯಾಗುವ ಅವಕಾಶವನ್ನು ಸೃಷ್ಟಿಸಿದೆ.

Advertisement

ಅದಕ್ಕಾಗಿ ನಿಗಮವು ಮಾವು ಬೆಳೆಗಾರರಿಗೆ “ಗ್ಲೋಬಲ್‌ ಗ್ಯಾಪ್‌’ ದೃಢೀಕರಣ ಪತ್ರವನ್ನು ಪಡೆಯಲು ಸಹಕಾರ ನೀಡುತ್ತಿದೆ.

ಗುಡ್‌ ಅಗ್ರಿಕಲ್ಚರಲ್‌ ಪ್ರಾಕ್ಟೀಸಸ್‌ ಅನ್ನು ಸಂಕ್ಷಿಪ್ತವಾಗಿ ಗ್ಲೋಬಲ್‌ ಗ್ಯಾಪ್‌ ಎನ್ನಬಹುದು. ಜರ್ಮನ್‌ ಸಂಸ್ಥೆ ನೀಡುವ ಈ ಗ್ಲೋಬಲ್‌ ಗ್ಯಾಪ್‌ ದೃಢೀಕರಣ ಪತ್ರ ಎಂದು ರೀತಿಯ ವಿಶ್ವಮಾರುಕಟ್ಟೆಗೆ ನೇರಪ್ರವೇಶ ನೀಡುವ ರಹದಾರಿ ಪತ್ರ ಎನ್ನಬಹುದು. ಇದು ಅಂತಾರಾಷ್ಟ್ರೀಯ ಮಾನದಂಡಗಳಿಗನುಗುಣವಾಗಿ ಬೆಳೆಯಲಾಗಿದೆ ಎಂದು ನೀಡುವ ದೃಢೀಕರಣ ಪತ್ರ.

ವಿಶ್ವಮಾರುಕಟ್ಟೆಯಲ್ಲಿ ಖ್ಯಾತಿ ಪಡೆದಿರುವ ಮಾವನ್ನು ವಿದೇಶಗಳಿಗೆ ರಫ್ತು ಮಾಡಲು ಆಯಾ ದೇಶಗಳ ತಜ್ಞ ಕಂಪನಿಗಳು ಪರೀಕ್ಷೆ ನಡೆಸಿ ನೀಡುವ ಅನುಮತಿ ಪತ್ರಗಳನ್ನು  ಪಡೆಯುವುದು ಕಡ್ಡಾಯ. ಆಯಾ ದೇಶಗಳು ಪ್ರತ್ಯೇಕ ಮಾನದಂಡಗಳ ಮೂಲಕ ಪರೀಕ್ಷೆ ನಡೆಸುತ್ತಿದ್ದುದರಿಂದ ಬೆಳೆಗಾರರಿಗೆ ಎಲ್ಲಾ ಕಡೆಗೂ ರಫ್ತು ಮಾಡಲಾಗುತ್ತಿರಲಿಲ್ಲ. ಈಗ ಎಲ್ಲಾ ದೇಶಗಳೂ ಮಾನ್ಯ ಮಾಡಿರುವ “ಗ್ಲೋಬಲ್‌ ಗ್ಯಾಪ್‌’ ದೃಢೀಕರಣ ಪತ್ರ ಸಿಗುವುದರಿಂದ ಎಲ್ಲಾ ಕಡೆಗೂ ಬೆಳೆಗಾರರೇ ನೇರವಾಗಿ ಕಂಪನಿ ಅಥವಾ ಏಜೆನ್ಸಿ ಆಶ್ರಯವಿಲ್ಲದೆ ಮಾರಬಹುದು. ಈ “ಗ್ಯಾಪ್‌’ ದೃಢೀಕರಣ ಪತ್ರ ಪಡೆದ ರೈತರ ವಿವರ ವೆಬ್‌ಸೈಟ್‌ನಲ್ಲಿ ಪ್ರಕಟವಾಗುವುದರಿಂದ ವಿದೇಶಗಳ ಉದ್ದಿಮೆದಾರರು ಅಥವಾ ವ್ಯಾಪಾರಸ್ಥರು ನೇರವಾಗಿ ಬೆಳೆಗಾರರನ್ನು ಸಂಪರ್ಕಿಸಲು ನೆರವಾಗಲಿದೆ.

ಅಂತಾರಾಷ್ಟ್ರೀಯ ಮಾನದಂಡಗಳ ಪಾಲನೆ ಕಡ್ಡಾಯ:
ಗ್ಲೋಬಲ್‌ ಗ್ಯಾಪ್‌ ನೋಂದಣಿ  ಪಡೆಯಲು ಫ‌ಲಾನುಭವಿ ತನ್ನ ತೋಟದಲ್ಲಿ ಉತ್ತಮ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಗೊಬ್ಬರ ಬಳಕೆ, ಕೀಟನಾಶಕಗಳ ಸಮತೋಲನ ಬಳಕೆ, ಸಮಗ್ರ ರೋಗ ಮತ್ತು ಕೀಟ ನಿಯಂತ್ರಣ, ಕೊಯ್ಲೋತ್ತರ ಚಟುವಟಿಕೆ ಅಳವಡಿಸಿಕೊಳ್ಳಬೇಕು. ತೋಟದಲ್ಲಿ ಕನಿಷ್ಠ ಮೂಲಭೂತ ಸೌಲಭ್ಯ (ದಾಸ್ತಾನು ಘಟಕ, ಶೌಚಾಲಯ, ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇತ್ಯಾದಿ) ಹೊಂದಿರಬೇಕು. ಮುಖ್ಯವಾಗಿ ಇಳುವರಿ ಕೊಡುವಂತಹ ಮತ್ತು ರಫ್ತಿಗೆ ಯೋಗ್ಯವಾದ ಮಾವಿನ ತಳಿಗಳನ್ನು ಹೊಂದಿರುವುದು ಕಡ್ಡಾಯ. ಸ್ವತಃ ಸಾಗುವಳಿ ಮಾಡುತ್ತಿರಬೇಕು ಎಂಬ ನಿಬಂಧನೆಗಳ ಪಾಲನೆ ಕಡ್ಡಾಯ.

Advertisement

ಈ ಬಗ್ಗೆ ರೈತರು ನೋಂದಣಿಗೆ ಅರ್ಜಿ ಸಲ್ಲಿಸಿದಾಗ, ದೃಢೀಕರಣ ಸಂಸ್ಥೆಯು ಪ್ರತಿ ತಾಲೂಕುಗಳಿಗೆ ಭೇಟಿ ನೀಡಿ, ಎಲ್ಲಾ ಪದ್ಧತಿ ಅಳವಡಿಸಿಕೊಂಡಿರುವ ಬಗ್ಗೆ ಖಾತರಿಪಡಿಸಿಕೊಂಡು ದೃಢೀಕರಣ ಪತ್ರ ಒದಗಿಸಲಿದೆ. ಬಳಿಕವಷ್ಟೇ ದೃಢೀಕರಣ ಪತ್ರ ಪಡೆದ ರೈತರ ವಿವರಗಳನ್ನು ಗ್ಲೋಬಲ್‌ ಗ್ಯಾಪ್‌ ವೆಬ್‌ಸೈಟ್‌ನಲ್ಲಿ ನೋಂದಣಿಯಾಗುತ್ತದೆ. ಇದು ಪ್ರತಿ ವರ್ಷ ಫ‌ಸಲಿನ ಸಮಯದಲ್ಲಿ ಪರಿಶೀಲನೆಯಾಗುತ್ತದೆ.

ಕಳೆದ ವರ್ಷ ಮಾವು ನಿಗಮ, ಪ್ರಾಯೋಗಿಕವಾಗಿ 200 ಹೆಕ್ಟೇರ್‌ ಪ್ರದೇಶದ 227 ಮಂದಿ ಮಾವು ಬೆಳೆಗಾರರನ್ನು ಗ್ಲೋಬಲ್‌ ಗ್ಯಾಪ್‌ ವ್ಯಾಪ್ತಿಗೆ ಅಳವಡಿಸಿದ್ದು, ಸದ್ಯದಲ್ಲೇ ಅವರಿಗೆ ಗ್ಲೋಬಲ್‌ ಗ್ಯಾಪ್‌ ದೃಢೀಕರಣ ಪತ್ರ ದೊರೆಯಲಿದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಕೊಪ್ಪಳ, ಧಾರವಾಡ, ಬೆಳಗಾವಿ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಲ್ಲಿ 1000 ಹೆಕ್ಟೇರ್‌ ಪ್ರದೇಶದಲ್ಲಿ ಗ್ಲೋಬಲ್‌ ಗ್ಯಾಪ್‌ ಮಾನದಂಡದಂತೆ ಮಾವು ಕೃಷಿ ಮಾಡುತ್ತಿದ್ದು ಅವರೆಲ್ಲರನ್ನೂ ಹಂತ ಹಂತವಾಗಿ “ಗ್ಯಾಪ್‌’ ಅಡಿ ಸೇರ್ಪಡೆ ಮಾಡಲು ತೀರ್ಮಾನಿಸಿದೆ.

ಪ್ರಪಂಚದ ಯಾವುದೇ ಭಾಗದಿಂದ ಮಾವು ಖರೀದಿಸಲು ಬಯಸುವವರು ಗ್ಲೋಬಲ್‌ ಗ್ಯಾಪ್‌ ದೃಢೀಕರಣ ಪತ್ರ ಪಡೆದ ರೈತರ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪಡೆದು ನೇರವಾಗಿ ಅವರನ್ನೇ ಸಂಪರ್ಕಿಸಲು ಇದು ನೆರವಾಗಲಿದೆ. ಅಂತಾರಾಷ್ಟ್ರೀಯ ಸ್ಪರ್ಧಾತ್ಮಕ ಬೆಲೆ ಸಿಗುವುದರಿಂದ ಮಾವಿಗೆ ಹೆಚ್ಚಿನ ಬೇಡಿಕೆ, ಮೌಲ್ಯ ಸಿಗಲಿದೆ.
-ಗೋಪಾಲಕೃಷ್ಣ, ಅಧ್ಯಕ್ಷ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ

ಪ್ರಮಾಣ ಪತ್ರ ಪಡೆದ ರೈತರ ವಿವರ ಜಾಗತಿಕ ವೆಬ್‌ಸೈಟ್‌ನಲ್ಲಿ ನೋಂದಣಿ ಆಗುವುದರಿಂದ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ವಿಸ್ತರಿಸಲು ಅವಕಾಶ ಸಿಗಲಿದೆ. ರಾಸಾಯನಿಕ ಪದಾರ್ಥ ನಿಯಂತ್ರಿಸಿ ಗ್ರಾಹಕರಿಗೆ ಉತ್ತಮ ಉತ್ಪನ್ನದ ಜತೆಗೆ ರಫ್ತು ಮಾರುಕಟ್ಟೆಯಲ್ಲಿ ಬೇಡಿಕೆಗೆ ಗ್ಲೋಬಲ್‌ ಗ್ಯಾಪ್‌ ಸಹಕಾರಿ.
– ಕದಿರೇಗೌಡ, ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಮಾವು ಅಭಿವೃದ್ಧಿ ನಿಗಮ.

– ಸಂಪತ್‌ ತರೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next