Advertisement

ಭಾರತಕ್ಕೆ ರಾಜತಾಂತ್ರಿಕ ಗೆಲುವು

11:41 AM Jul 17, 2020 | mahesh |

ಹೊಸದಿಲ್ಲಿ/ಇಸ್ಲಾಮಾಬಾದ್‌: ಭಾರತಕ್ಕೆ ಅತಿದೊಡ್ಡ ರಾಜತಾಂತ್ರಿಕ ಗೆಲುವು ಎಂಬಂತೆ, ಪಾಕಿಸ್ಥಾನದ ವಶದಲ್ಲಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರಿಗೆ ತಮ್ಮ ಗಲ್ಲುಶಿಕ್ಷೆ ತೀರ್ಪಿನ ಮರುಪರಿಶೀಲನೆ ಕೋರಿ ಅರ್ಜಿ ಸಲ್ಲಿಸುವ ಅವಕಾಶ ದೊರೆತಿದೆ. ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ಥಾನದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಜಾಧವ್‌ರಿಗೆ ಕಾನ್ಸುಲರ್‌ ಭೇಟಿಗೆ ಅವಕಾಶ ಕೊಡದೇ ಸತಾಯಿಸುತ್ತಿದ್ದ ಪಾಕಿಸ್ಥಾನವು, ಗುರುವಾರ ಭಾರತದ ಒತ್ತಾಯಕ್ಕೆ ಮಣಿದಿದೆ.

Advertisement

ಅದರಂತೆ, ಭಾರತೀಯ ರಾಜತಾಂತ್ರಿಕ ಅಧಿಕಾರಿ ಗೌರವ್‌ ಅಹ್ಲುವಾಲಿಯಾ ಹಾಗೂ ಮತ್ತೂಬ್ಬ ಅಧಿಕಾರಿಯು ಪಾಕಿಸ್ಥಾನದಲ್ಲಿ ಜಾಧವ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಭಾರತೀಯ ಹೈಕಮಿಷನ್‌ ಅಧಿಕಾರಿಗಳು ಸುಮಾರು 2 ಗಂಟೆಗಳ ಕಾಲ ಜಾಧವ್‌ ಜತೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಾಧವ್‌ಗೆ ಕಾನ್ಸುಲರ್‌ ಭೇಟಿಗೆ ಅವಕಾಶ ನೀಡುವಂತೆ ಭಾರತ ಮಾಡಿದ ಆಗ್ರಹಕ್ಕೆ ಕೊನೇ ಕ್ಷಣದಲ್ಲಿ ಪಾಕಿಸ್ಥಾನ ಒಪ್ಪಿದ್ದು ಹಾಗೂ ಜಾಧವ್‌ ಅವರು ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸುವ ಇರಾದೆ ವ್ಯಕ್ತಪಡಿಸಿರುವುದು ಭಾರತದ ಮಟ್ಟಿಗೆ ಮಹತ್ವದ ರಾಜತಾಂತ್ರಿಕ ಜಯವಾಗಿದೆ.

ಮತ್ತೂಂದು ಸುಳ್ಳು: ಯಾವುದೇ ಅಡೆತಡೆ ಮಾಡದೇ, ಹಸ್ತಕ್ಷೇಪ ಮಾಡದೇ ಮಾತುಕತೆಗೆ ಅವಕಾಶ ಕಲ್ಪಿಸಬೇಕೆಂದು ಭಾರತ ಆಗ್ರಹಿಸಿತ್ತು. ಗುರುವಾರ ಸಂಜೆ 3 ಗಂಟೆಗೆ ಜಾಧವ್‌ ಭೇಟಿಗೆ ಅವಕಾಶ ಸಿಕ್ಕಿದರೂ, ಅದು ಪಾಕ್‌ ಅಧಿಕಾರಿಗಳ ಮೇಲ್ವಿಚಾರಣೆಯಲ್ಲೇ ನಡೆಯಿತು ಎಂದು ಭಾರತ ಸರಕಾರದ ಮೂಲಗಳು ತಿಳಿಸಿವೆ. ಆದರೆ, ಪಾಕಿಸ್ಥಾನದ ವಿದೇಶಾಂಗ ಇಲಾಖೆ ಮಾತ್ರ, ಯಾವುದೇ ಹಸ್ತಕ್ಷೇಪ ಮಾಡದೇ ಜಾಧವ್‌ ಹಾಗೂ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ಮಾತುಕತೆ ನಡೆದಿದೆ ಎಂದು ಹೇಳಿದೆ.

ಜು.20 ಕೊನೆಯ ದಿನ: ಇತ್ತೀಚೆಗಷ್ಟೇ ಜಾಧವ್‌ ವಿಚಾರದಲ್ಲಿ ನಾಟಕವಾಡಿದ್ದ ಪಾಕ್‌, ಗಲ್ಲುಶಿಕ್ಷೆ ತೀರ್ಪಿನ ಮರುಪರಿಶೀಲನೆಗೆ ಕೋರಿ ಅರ್ಜಿ ಸಲ್ಲಿಸಲು ಸ್ವತಃ ಜಾಧವ್‌ ಅವರೇ ನಿರಾಕರಿಸಿದ್ದಾರೆ ಎಂದು ಹೇಳಿತ್ತು. ಅಲ್ಲದೆ, ಅವರು ತಮ್ಮ ಕ್ಷಮಾದಾನ ಅರ್ಜಿಯ ತೀರ್ಪಿಗಾಗಿ ಕಾಯಲು ನಿರ್ಧರಿಸಿದ್ದಾರೆ ಎಂದು ಹೇಳಿತ್ತು. ಮರುಪರಿಶೀಲನಾ ಅರ್ಜಿ ಸಲ್ಲಿಸಲು ಜುಲೈ 20 ಕೊನೆಯ ದಿನವಾದ ಕಾರಣ, 20ರೊಳಗಾಗಿ ಜಾಧವ್‌ ಅವರಿಗೆ ಕಾನ್ಸುಲರ್‌ ಭೇಟಿಗೆ ಬೇಷರತ್‌ ಅನುಮತಿ ನೀಡಲೇಬೇಕು ಮಾತ್ರವಲ್ಲ, ಭಾಷಾ ಮಾಧ್ಯಮವಾಗಿ ಇಂಗ್ಲಿಷ್‌ ಅನ್ನೇ ಬಳಸಬೇಕೆಂದು ಒತ್ತಡ ಹೇರುವಂತಿಲ್ಲ ಎಂದು ಪಾಕಿಸ್ಥಾನಕ್ಕೆ ಭಾರತ ಸರಕಾರ ತಾಕೀತು ಮಾಡಿತ್ತು. ಅದರ ಬೆನ್ನಲ್ಲೇ ಈ ಎಲ್ಲ ಬೆಳವಣಿಗೆಗಳು ನಡೆದಿವೆ.

ಭಾರತದ ಪರ ಬಂದಿತ್ತು ತೀರ್ಪು
ಬೇಹುಗಾರಿಕೆ ಹಾಗೂ ಭಯೋತ್ಪಾದನೆ ಆರೋಪ ಹೊರಿಸಿ 2017ರ ಎಪ್ರಿಲ್‌ನಲ್ಲಿ ಜಾಧವ್‌ ಅವರಿಗೆ ಗಲ್ಲುಶಿಕ್ಷೆ ವಿಧಿಸಿ ಪಾಕ್‌ ಸೇನಾ ನ್ಯಾಯಾಲಯ ತೀರ್ಪು ನೀಡಿತ್ತು. ಜಾಧವ್‌ಗೆ ಕಾನ್ಸುಲರ್‌ ಭೇಟಿಗೆ ಅವಕಾಶ ನಿರಾಕರಿಸಿ, ಮೇಲ್ಮನವಿ ಸಲ್ಲಿಸಲೂ ಅನು ಮತಿ ನೀಡದ ಪಾಕ್‌ ವಿರುದ್ಧ ಭಾರತವು ನಂತರ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಹೇಗ್‌ ಮೂಲದ ನ್ಯಾಯಾಲಯ, 2019ರ ಜುಲೈಯಲ್ಲಿ ತೀರ್ಪು ನೀಡಿ, ಪಾಕಿಸ್ಥಾನವು ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ಹೇಳಿತ್ತು. ಜತೆಗೆ, ಸ್ವಲ್ಪವೂ ವಿಳಂಬ ಮಾಡದೇ ಕಾನ್ಸುಲರ್‌ ಭೇಟಿಗೆ ಅವಕಾಶ ನೀಡುವಂತೆ ಪಾಕಿಸ್ಥಾನಕ್ಕೆ ಸೂಚಿಸಿತ್ತು.

Advertisement

ನಮಗೆ ಗೊತ್ತಾಗಿತ್ತು
ಕಳೆದ 4 ವರ್ಷಗಳಿಂದಲೂ ಸುಳ್ಳನ್ನೇ ಹೇಳುತ್ತಾ ಬಂದಿರುವ ಪಾಕಿಸ್ಥಾನವು, ಜಾಧವ್‌ ಮರುಪರಿ ಶೀಲನಾ ಅರ್ಜಿ ಸಲ್ಲಿಸಲು ನಿರಾಕರಿಸಿದ್ದಾರೆ ಎಂದು ಮತ್ತೂಂದು ಸುಳ್ಳು ಹೇಳಿತ್ತು. ಪಾಕ್‌ ಹೇಳಿಕೆಯನ್ನು ನಾವು ಅಂದೇ ನಿರಾಕರಿಸಿದ್ದೆವು. ಪಾಕ್‌ ಸೇನೆಯ ವಶದಲ್ಲಿರುವ ಜಾಧವ್‌ ಮೇಲೆ ಅವರು ಎಷ್ಟು ಒತ್ತಡ ಹಾಕುತ್ತಿರಬಹುದು ಎಂಬುದನ್ನು ನಾವು ಊಹಿಸಿ ದ್ದೆವು. ಭಾರತೀಯರ ಪ್ರಾಣ ರಕ್ಷಿಸಲು ನಾವು ಬದ್ಧರಾಗಿರುವ ಕಾರಣ, ನಮಗಿರುವ ಎಲ್ಲ ಕಾನೂನಾತ್ಮಕ ಅವಕಾಶಗಳನ್ನು ಬಳಸಿಕೊಂಡಿದ್ದೇವೆ ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ ಅನುಗಾರ್‌ ಶ್ರೀವಾಸ್ತವ ಹೇಳಿದ್ದಾರೆ.

ತೀವ್ರ ಒತ್ತಡದಲ್ಲಿದ್ದಂತೆ ಕಂಡುಬಂದ ಜಾಧವ್
ಜಾಧವ್‌ ಒತ್ತಡದಲ್ಲಿದ್ದರು. ಅವರ ಮುಖಭಾವವೇ ಅವರೊಳಗಿನ ಒತ್ತಡವನ್ನು ಸಾರಿ ಹೇಳುತ್ತಿತ್ತು. ಹೀಗೆಂದು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಬಂದ ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ. ಮುಕ್ತ ಮಾತುಕತೆಗೆ ಅವಕಾಶ ಕಲ್ಪಿಸಿದ್ದೇವೆ ಎಂಬ ಪಾಕ್‌ ಹೇಳಿಕೆಯ ಹಿಂದಿನ ಸತ್ಯವನ್ನೂ ಬಹಿರಂಗಪಡಿಸಿರುವ ಅಧಿಕಾರಿಗಳು, ನಾವು ಜಾಧವ್‌ ಜತೆಗೆ ಆಡಿದ ಅಷ್ಟೂ ಮಾತುಗಳು ರೆಕಾರ್ಡ್‌ ಆಗುತ್ತಿತ್ತು ಎಂದಿದ್ದಾರೆ. ಮಾತುಕತೆ ಖಾಸಗಿಯಾಗಿ ನಡೆಯಲು ಬಿಡಬೇಕು, ಅಲ್ಲಿ ಪಾಕಿಸ್ಥಾನದ ಯಾವ ಅಧಿಕಾರಿಯೂ ಇರಬಾರದು, ನಮ್ಮ ಮಾತುಕತೆಗಳನ್ನು ರೆಕಾರ್ಡ್‌ ಮಾಡಬಾರದು ಎಂದು ಕೇಳಿಕೊಳ್ಳಲಾಗಿತ್ತು. ಅದಕ್ಕೆಲ್ಲ ಪಾಕ್‌ ಸರಕಾರ ಒಪ್ಪಿದ್ದರೂ, ಒಳಹೊಕ್ಕ ಬಳಿಕವೇ ನೆರೆರಾಷ್ಟ್ರವು ನಮ್ಮನ್ನು ವಂಚಿಸಿರುವುದು ಬೆಳಕಿಗೆ ಬಂತು. ಜಾಧವ್‌ ಪಕ್ಕದಲ್ಲೇ ಪಾಕ್‌ ಅಧಿಕಾರಿ ನಿಂತಿದ್ದರು. ಭಾರತದ ಕಾನ್ಸುಲರ್‌ಗಳು ಆಕ್ಷೇಪಿಸಿದರೂ ಪ್ರಯೋಜನವಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next