ಬೇರೂತ್: ಇತ್ತೀಚೆಗಷ್ಟೇ ಭಾರೀ ಸ್ಫೋಟ ಹಾಗೂ ಸಾವು-ನೋವಿಗೆ ಸಾಕ್ಷಿಯಾಗಿದ್ದ ಲೆಬನಾನ್‌ನಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುವ ಸಮಯ ಸಮೀಪಿಸಿದೆ. ಅಚ್ಚರಿಯ ಬೆಳವಣಿಗೆಯೆಂದರೆ, ಈ ಬಾರಿ ರಾಜತಾಂತ್ರಿಕ ಅಧಿಕಾರಿಯೊಬ್ಬರು ಲೆಬನಾನ್‌ನಲ್ಲಿ ಸರ್ಕಾರ ರಚಿಸಿ, ಪ್ರಧಾನಿ ಹುದ್ದೆಗೆ ಏರಲಿದ್ದಾರೆ.
ಜರ್ಮನಿಯಲ್ಲಿ ಲೆಬನಾನ್ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಮುಸ್ತಫಾ ಆದಿಬ್ ಹೊಸ ಸರ್ಕಾರದ ರೂವಾರಿಯಾಗಲಿದ್ದಾರೆ. 128 ಸದಸ್ಯಬಲದ ಲೆಬಬಾನ್ ಸಂಸತ್‌ನಲ್ಲಿ ಅವರಿಗೆ 90 ಮತಗಳು ಬಿದ್ದಿದ್ದು, ಪ್ರಮುಖ ಪಕ್ಷಗಳ ಬೆಂಬಲವೂ ಸಿಕ್ಕಿದೆ. ಹೀಗಾಗಿ, ಸರ್ಕಾರ ರಚನೆ ಮಾಡುವಂತೆ ಮುಸ್ತಫಾ ರಿಗೆ ಲೆಬನಾನ್ ಅಧ್ಯಕ್ಷ ಮಿಶೆಲ್ ಅವೂನ್ ಸೂಚಿಸಿದ್ದಾರೆ.
ಈ ಕುರಿತು ಮಾತನಾಡಿದ ಮುಸ್ತಫಾ, ಸದ್ಯ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸರ್ಕಾರ ರಚಿಸುವುದು ನನ್ನ ಆದ್ಯತೆಯಾಗಿದೆ. ಸರ್ಕಾರ ರಚಿಸಿದ ಕೂಡಲೇ ಪ್ರಮುಖ ಸುಧಾರಣಾ ಕ್ರಮಗಳನ್ನು ಜಾರಿ ಮಾಡಿ, ಲೆಬನಾನ್ ಜನತೆ ಅಂತಾರಾಷ್ಟ್ರೀಯ ಸಮುದಾಯದವಿಶ್ವಾಸವನ್ನು ಗಳಿಸಬೇಕಿದೆ ಎಂದಿದ್ದಾರೆ.
ಬೇರೂತ್‌ನಲ್ಲಿ ನಡೆದ ಭೀಕರ ಸ್ಫೋಟವು ನೂರಾರು ಮಂದಿಯನ್ನು ಬಲಿಪಡೆದುಕೊಂಡ ಬೆನ್ನಲ್ಲೇ ಸರ್ಕಾರದ ವಿರುದ್ಧದ ಅಲ್ಲಿನ ನಾಗರಿಕರ ಆಕ್ರೋಶವೂ
ಸ್ಫೋಟಗೊಂಡಿತ್ತು. ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ದೇಶದಲ್ಲಿ ಜನರ ಪ್ರತಿ ಭಟನೆ ತೀವ್ರಗೊಂಡ ಕಾರಣ, ವಿಧಿಯಿಲ್ಲದೆ ಸರ್ಕಾರವನ್ನು ವಿಸರ್ಜಿಸಲಾಗಿತ್ತು.