Advertisement

ಡಿಪ್ಲೊಮಾ ಪರೀಕ್ಷೆ: 779 ವಿದ್ಯಾರ್ಥಿಗಳ ವಿಚಾರಣೆ‌

03:45 AM Jun 25, 2017 | |

ಬೆಂಗಳೂರು: ತಾಂತ್ರಿಕ ಶಿಕ್ಷಣ ಇಲಾಖೆಯು ಕಳೆದ ಏಪ್ರಿಲ್‌ನಲ್ಲಿ ನಡೆಸಿದ ಡಿಪ್ಲೊಮಾ ಪರೀಕ್ಷೆಯಲ್ಲಿ ಅಕ್ರಮವೆಸಗಿರುವ 779 ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿದ್ದು, ವಿಚಾರಣೆಗೆ ಬರುವಂತೆ ನೋಟಿಸ್‌ ನೀಡಲಾಗಿದೆ.

Advertisement

ರಾಜ್ಯದ ವಿವಿಧ ವಿಭಾಗದಲ್ಲಿ ಡಿಪ್ಲೊಮಾ ಪದವಿ ಪಡೆಯುತ್ತಿರುವ 1ರಿಂದ 6ನೇ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಏಪ್ರಿಲ್‌ನಲ್ಲಿ ಸೆಮಿಸ್ಟರ್‌ ಪರೀಕ್ಷೆ ಆಯೋಜಿಸಲಾಗಿತ್ತು. ಪರೀಕ್ಷೆ ಬರೆಯುವಾಗ ನಕಲು ಮಾಡಿರುವುದು, ಚೀಟಿ ತೆಗೆದುಕೊಂಡು ಹೋಗಿದ್ದು ಅಥವಾ ಇನ್ನಿತರೆ ಪರೀಕ್ಷಾ ಅಕ್ರಮದಲ್ಲಿ ತೊಡಗಿಸಿಕೊಂಡಿದ್ದ ಬಗ್ಗೆ 779 ವಿದ್ಯಾರ್ಥಿಗಳ ವಿರುದ್ಧ ಕೊಠಡಿ ಮೇಲ್ವಿಚಾರಕರು ತಾಂತ್ರಿಕ ಶಿಕ್ಷಣ ಸಂಸ್ಥೆಗೆ ದೂರು ಸಲ್ಲಿಸಿದ್ದರು.ಈ ದೂರಿನಂತೆ ರಾಜ್ಯದ ವಿವಿಧ ಕಾಲೇಜಿನ 779 ವಿದ್ಯಾರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಜೂ.27ರಂದು 128, ಜೂ.28ರಂದು 132, ಜೂ.29ರಂದು 133, ಜೂ.30ರಂದು 121, ಜುಲೈ 1ರಂದು 125 ಹಾಗೂ ಜುಲೈ 3ರಂದು 141 ವಿದ್ಯಾರ್ಥಿಗಳ ವಿಚಾರಣೆ ನಡೆಯಲಿದ್ದು, ಹಾಜರಾಗುವಂತೆ ಎಲ್ಲಾ ವಿದ್ಯಾರ್ಥಿಗಳಿಗೂ ನೋಟಿಸ್‌ ನೀಡಲಾಗಿದೆ. ಈ ವೇಳೆ ವಿದ್ಯಾರ್ಥಿಗಳ ವಿರುದ್ಧ ಅಕ್ರಮ ದೂರು ನೀಡಿರುವ ಸಿಬ್ಬಂದಿ, ಪರೀಕ್ಷಾ ಕೊಠಡಿ ಮೇಲ್ವಿಚಾರಕರು, ಕೇಂದ್ರದ ಮುಖ್ಯ ಅಧೀಕ್ಷಕರು, ಉಪ ಮುಖ್ಯ ಅಧೀಕ್ಷಕರು ಕಡ್ಡಾಯವಾಗಿ ಹಾಜರಿರಬೇಕು. 

ಅಕ್ರಮದಲ್ಲಿ ಭಾಗಿಯಾದ 779 ವಿದ್ಯಾರ್ಥಿಗಳ ಫ‌ಲಿತಾಂಶವನ್ನು ಈಗಾಗಲೇ ತಡೆಹಿಡಿಯಲಾಗಿದ್ದು, ವಿದ್ಯಾರ್ಥಿಗಳು ವಿಚಾರಣೆಗೆ ಹಾಜರಾಗದಿದ್ದರೆ ಅವರ ಫ‌ಲಿತಾಂಶ ಪ್ರಕಟವಾಗುವುದಿಲ್ಲ, ಪುನರ್‌ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ ಹಾಗೂ ಮುಂದಿನ ಸೆಮಿಸ್ಟರ್‌ಗೆ ಸೇರಿಕೊಳ್ಳಲು ಅವಕಾಶ ಇಲ್ಲ. ಪರೀಕ್ಷಾ ಮೇಲ್ವಿಚಾರಕರು ಹಾಗೂ ಅಧೀಕ್ಷಕರು ಹಾಜರಾಗದಿದ್ದರೆ ತಾಂತ್ರಿಕ ಶಿಕ್ಷಣ ಮಂಡಳಿಯೇ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂಬ ಎಚ್ಚರಿಕೆ ನೀಡಿದೆ.

ವಿಚಾರಣಾ ಸಮಿತಿ:
ಪರೀಕ್ಷಾ ಅಕ್ರಮದಲ್ಲಿ ತೊಡಗಿರುವ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಲು ಮತ್ತು ಸರ್ಕಾರದ ಆದೇಶದಂತೆ ಶಿಕ್ಷೆ ನೀಡಲು 11 ಮಂದಿ ತಜ್ಞರ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ತಾಂತ್ರಿಕ ಶಿಕ್ಷಣ ಮಂಡಳಿಯ ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು, ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ನಾಲ್ವರು ಪ್ರಾಂಶುಪಾಲರು ಹಾಗೂ ನಾಲ್ವರು ಹಿರಿಯ ಉಪನ್ಯಾಸಕರು ಸೇರಿದ್ದಾರೆ. ಈ ಸಮಿತಿಯ ಶಿಫಾರಸಿನಂತೆ ಮಂಡಳಿಯು ವಿದ್ಯಾರ್ಥಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಿದೆ.

ವಿದ್ಯಾರ್ಥಿಗಳು ಪರೀಕ್ಷಾ ಅಕ್ರಮದಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಕೊಠಡಿ ಮೇಲ್ವಿಚಾರಕರು, ಅಧೀಕ್ಷಕರು ನೀಡಿರುವ ದೂರಿನಂತೆ ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ವಿಚಾರಣೆಗೆ ಬರಲು ಸೂಚಿಸಿದ್ದೇವೆ. ಅವರು ನಡೆಸಿರುವ ಲೋಪ ಅಥವಾ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಮಿತಿ ನೀಡುವ ಶಿಫಾರಸಿನಂತೆ ಶಿಕ್ಷೆ ವಿಧಿಸಲಾಗುತ್ತದೆ. ತಪ್ಪು ಮಾಡಿಲ್ಲ ಎಂಬುದು ಸಾಬೀತಾದರೆ ಅಂತಹ ವಿದ್ಯಾರ್ಥಿಗಳ ಫ‌ಲಿತಾಂಶ ನೀಡಲಿದ್ದೇವೆ.
– ಮಂಜುನಾಥ್‌, ಕಾರ್ಯದರ್ಶಿ, ತಾಂತ್ರಿಕ ಪರೀಕ್ಷಾ ಮಂಡಳಿ

Advertisement

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next