Advertisement

ಡಿಪ್ಲೊಮಾ, ಐಟಿಐ ಪಠ್ಯ ಕನ್ನಡದಲ್ಲೂ ಲಭ್ಯ! ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೆ ಆಗಲಿದೆ ಅನುಕೂಲ

12:37 AM Jun 06, 2022 | Team Udayavani |

ಉಡುಪಿ: ಕನ್ನಡದಲ್ಲಿ ಎಂಜಿನಿಯರಿಂಗ್‌ ಶಿಕ್ಷಣ ಪಡೆಯಲು ಅವಕಾಶ ನೀಡಿರುವ ಸರಕಾರ ಈಗ ಡಿಪ್ಲೊಮಾ, ಐಟಿಐಗಳ ತಾಂತ್ರಿಕ ವಿಷಯಗಳ ಪರೀಕ್ಷೆಯನ್ನೂ ಕನ್ನಡದಲ್ಲಿ ಬರೆಯಲು ಅನುವು ಮಾಡಿಕೊಟ್ಟಿರುವುದರ ಜತೆಗೆ ಇವುಗಳ ಪಠ್ಯವನ್ನೇ ಕನ್ನಡದಲ್ಲಿ ತರಲು ಸಿದ್ಧತೆ ಮಾಡಿಕೊಂಡಿದೆ.

Advertisement

ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಾಂತ್ರಿಕ ಕೋರ್ಸ್‌ಗಳನ್ನು ಕನ್ನಡದಲ್ಲಿ ಬೋಧಿಸುವ ಪ್ರಕ್ರಿಯೆ ಕೆಲವು ವರ್ಷಗಳ ಹಿಂದೆ ಆರಂಭವಾಗಿತ್ತು. ಆದರೆ ತಾಂತ್ರಿಕ ಕಾರಣದಿಂದಾಗಿ ಕೆಲವು ವಿಷಯಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಇರಲಿಲ್ಲ. 2022-23ನೇ ಸಾಲಿನಿಂದ ಕನ್ನಡದಲ್ಲಿ ಪರೀಕ್ಷೆ ಬರೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಕನ್ನಡದಲ್ಲಿ ಪಠ್ಯಕ್ರಮ
ಈವರೆಗೆ ಡಿಪ್ಲೊಮಾ ಕೋರ್ಸ್‌ಗಳ ಪಠ್ಯ ಇಂಗ್ಲಿಷ್‌ನಲ್ಲೇ ಇತ್ತು. ತಾಂತ್ರಿಕ ವಿಷಯ ಆಗಿರುವುದರಿಂದ ಕನ್ನಡದಲ್ಲಿ ಪಠ್ಯಕ್ರಮ ಸಿದ್ಧಪಡಿಸುವುದು ಸವಾಲಾಗಿತ್ತು. ಆದರೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ವು ತಾಂತ್ರಿಕ ಕೋರ್ಸ್‌ಗಳ ವಿಷಯಗಳ ಪಠ್ಯವನ್ನು ಕನ್ನಡಕ್ಕೆ ಅನುವಾದಿಸಲು ತಾಂತ್ರಿಕ ನಿಘಂಟು ಸಿದ್ಧಪಡಿಸಿದೆ. ಅದನ್ನೇ ಆಧಾರವಾಗಿ ಇರಿಸಿಕೊಂಡು, ವಿಷಯ ತಜ್ಞರ ಅನುಭವವನ್ನು ಬಳಸಿ ಕನ್ನಡ ಪಠ್ಯಕ್ರಮವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪಠ್ಯ ಪರಿಷ್ಕರಣೆ
ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಕ್ಕೆ ಅನುಕೂಲವಾಗುವಂತೆ ಕೈಗಾರಿಕೆ/ ಇಂಡಸ್ಟ್ರಿಗಳ ಸಹಭಾಗಿತ್ವದಲ್ಲಿ ನಡೆಯಬೇಕಾದ ಕೋರ್ಸ್‌ಗಳನ್ನು ಕೇಂದ್ರವಾಗಿ ಇರಿಸಿಕೊಂಡು ಪಠ್ಯದಲ್ಲಿ ಪರಿಷ್ಕರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಪ್ರಾಯೋಗಿಕ ಮತ್ತು ರಚನಾತ್ಮಕ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವ ಪಠ್ಯ ಸಿದ್ಧವಾಗುತ್ತಿದೆ. ಸಿಎನ್‌ಸಿ ಯಂತ್ರಗಳು, ರೋಬೊಟ್‌, 3ಡಿ ಮುದ್ರಕ, ಸಿಎಂಎಂ ತಂತ್ರಜ್ಞಾನಗಳನ್ನು ಬಳಸಿಕೊಂಡು ಬೋಧಿಸಲು ವ್ಯವಸ್ಥೆಯಾಗುತ್ತಿದೆ. ಕೈಗಾರಿಕೆ ಮತ್ತು ಕಂಪೆನಿಗಳೊಂದಿಗೆ ಸಮಾಲೋಚನೆ ನಡೆಸಿ, ಪ್ರಸ್ತುತ ಮಾರುಕಟ್ಟೆಯ ಅಗತ್ಯಗಳಿಗೆ ಅನುಕೂಲ ಆಗುವಂತೆ ವಿನ್ಯಾಸಗೊಳಿಸಲಾಗುತ್ತಿದೆ. ಇಂಟರ್ನ್ಶಿಪ್‌ ಆದ್ಯತೆ ನೀಡಲಾಗುತ್ತಿದೆ.

ಜಿಟಿಟಿಸಿಯಲ್ಲೂ ಕನ್ನಡ
ರಾಜ್ಯದ ಬಹುತೇಕ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಸರಕಾರಿ ಟೂಲ್‌ ರೂಂ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ವನ್ನು ತೆರೆಯಲಾಗಿದೆ. ಎಐಸಿಟಿ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆದ ಕೋರ್ಸ್‌ಗಳನ್ನು ಇಲ್ಲಿ ಬೋಧಿಸಲಾಗುತ್ತದೆ. ವಿಶೇಷವೆಂದರೆ ಮೂರು ವರ್ಷಗಳ ಡಿಪ್ಲೊಮಾ ಜತೆಗೆ ಇನ್ನೊಂದು ವರ್ಷ ಕೈಗಾರಿಕೆಗಳಲ್ಲಿ ಇಂಟರ್ನ್ಶಿಪ್‌ ಇರಲಿದೆ. ಈ ಇಂಟರ್ನ್ಶಿಪ್‌ ವೇಳೆ ಸರಕಾರದಿಂದ ಸ್ಟೈಫ‌ಂಡ್‌ ನೀಡಲಾಗುತ್ತದೆ. ಜಿಟಿಟಿಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ.

Advertisement

ಐಟಿಐಯಲ್ಲೂ ಕನ್ನಡಕ್ಕೆ ಸಿದ್ಧತೆ
ಕೈಗಾರಿಕೆ ತರಬೇತಿ ಕೇಂದ್ರ (ಐಟಿಐ)ಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ಆದರೆ ಕನ್ನಡದಲ್ಲಿ ಪಠ್ಯವಿಲ್ಲ. ಇದನ್ನು ಸಿದ್ಧಪಡಿಸಲು ಸರಕಾರದ ಹಂತದಲ್ಲಿ ಈಗಾಗಲೇ ಒಂದು ಸುತ್ತಿನ ಸಭೆ ನಡೆದಿದೆ. ಕೊರೊನಾ ಮತ್ತಿತರ ಕಾರಣ ಈ ಕಾರ್ಯ ವಿಳಂಬವಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯಕ್ರಮ ಸಿಗುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಡಿಪ್ಲೊಮಾ ಪಠ್ಯಗಳನ್ನು ಪರಿಷ್ಕರಿಸುವ ಜತೆಗೆ ಕನ್ನಡದಲ್ಲೂ ಸಿದ್ಧಪಡಿಸಲಿದ್ದೇವೆ. ಪ್ರಸಕ್ತ ಸಾಲಿನಿಂದಲೇ ಕನ್ನಡದಲ್ಲಿ ತಾಂತ್ರಿಕ ವಿಷಯಗಳನ್ನು ಬರೆಯಲು ಅವಕಾಶ ಕಲ್ಪಿಸಲಾಗಿದೆ.
-ಶ್ರೀಕಾಂತ್‌ ಜಿ. ಜಂಟಿ ನಿರ್ದೇಶಕ, ತಾಂತ್ರಿಕ ಶಿಕ್ಷಣ ಇಲಾಖೆ, ಸಿಡಿಸಿ ವಿಭಾಗ

ಐಟಿಐ ಪಠ್ಯಕ್ರಮವನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಬಗ್ಗೆ ಈಗಾಗಲೇ ಸಭೆ ನಡೆಸಿದ್ದೇವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕನ್ನಡದಲ್ಲಿ ಪಠ್ಯಕ್ರಮ ಸಿದ್ಧಪಡಿಸಲಾಗುವುದು.
-ಯೋಗೇಶ್ವರ ಎಸ್‌. ನಿರ್ದೇಶಕ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next