ಲಾಕ್‌ಡೌನ್ ನಿಧಾನವಾಗಿ ತೆರವಾಗುತ್ತಿದ್ದಂತೆ, ನಟಿ ರಚಿತಾರಾಮ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಹೊಸಚಿತ್ರ ಅದ್ಧೂರಿಯಾಗಿ ಸೆಟ್ಟೇರಿದೆ. ಕನ್ನಡದ ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರ ಇದಾಗಿದ್ದು, ಚಿತ್ರದ ಶೀರ್ಷಿಕೆಯ ಗುಟ್ಟು ಬಿಟ್ಟುಕೊಡದ ಚಿತ್ರತಂಡ, ಚಿತ್ರದ ಮುಹೂರ್ತ ಸಮಾರಂಭ ದಲ್ಲಿ ಚಿತ್ರದ ಹೆಸರು “ಕಸ್ತೂರಿ ನಿವಾಸ’ ಎಂದು ಅಧಿಕೃತವಾಗಿ ಘೋಷಣೆ ಮಾಡಿತು.
ಆದರೆ ಚಿತ್ರತಂಡ “ಕಸ್ತೂರಿ ನಿವಾಸ’ ಅಂಥ ಟೈಟಲ್ ಘೋಷಣೆ ಮಾಡುತ್ತಿದ್ದಂತೆ, ಚಿತ್ರರಂಗದ ಹಲವರಿಂದ ಅದರಲ್ಲೂ ವರನಟ ಡಾ. ರಾಜಕುಮಾರ್ ಅಭಿಮಾನಿಗಳಿಂದ ಒಂದಷ್ಟು ಆಕ್ಷೇಪ ವ್ಯಕ್ತವಾಯಿತು. ಮತ್ತೂಂದೆಡೆ ಜನಪ್ರಿಯ ಚಿತ್ರಗಳ ಟೈಟಲ್ ಮರುಬಳಕೆ ಮಾಡುವ ಬಗ್ಗೆ ಮತ್ತೆ ಪರ – ವಿರೋಧ ಚರ್ಚೆಗಳೂ ಆರಂಭವಾದವು. ಯಾವಾಗ ಚಿತ್ರದ ಟೈಟಲ್ ವಿಷಯ ಕಾವು ಪಡೆದುಕೊಂಡಿತೋ, ಚಿತ್ರತಂಡ ದಿನಕಳೆಯುವುದರೊಳಗೆ “ಕಸ್ತೂರಿ ನಿವಾಸ’ ಟೈಟಲ್ ಬದಲಾಯಿಸುವ ನಿರ್ಧಾರಕ್ಕೆ ಬಂದಿತು. ಸದ್ಯಕ್ಕೆ “ಕಸ್ತೂರಿ ನಿವಾಸ’ ಟೈಟಲ್ ಕೈ ಬಿಟ್ಟಿರುವ ಚಿತ್ರತಂಡ, “ಕಸ್ತೂರಿ’ ಹೆಸರಿನಲ್ಲಿ ಚಿತ್ರದ ಶೂಟಿಂಗ್ ಶುರುಮಾಡುವ ಪ್ಲಾನ್ ಹಾಕಿಕೊಂಡಿದೆ. ಇದಿಷ್ಟು “ಕಸ್ತೂರಿ ನಿವಾಸ’ ಟೈಟಲ್ ಕಥೆ.
ಇನ್ನು ಈ ಚಿತ್ರದ ಕಥೆ ಬಗ್ಗೆ ಮಾತನಾಡುವ ನಿರ್ದೇಶಕ ದಿನೇಶ್ ಬಾಬು, “ಇದು ಕಸ್ತೂರಿ ಎನ್ನುವ ಹುಡುಗಿಯೊಬ್ಬಳು ಇರುವ ಮನೆಯೊಂದರಲ್ಲಿ ನಡೆಯುವ ಘಟನೆಗಳ ಸುತ್ತ ನಡೆಯುವ ಸಿನಿಮಾ. ಹಾರರ್ – ಥ್ರಿಲ್ಲರ್, ಕಾಮಿಡಿ, ಎಮೋಶನ್ಸ್ ಎಲ್ಲವೂ ಈ ಸಿನಿಮಾದಲ್ಲಿ ಇರಲಿದೆ. ಸಿನಿಮಾದ ಕ್ಯಾರೆಕ್ಟರ್ ಮತ್ತು ಸಬೆಕ್ಟ್ ಎರಡಕ್ಕೂ ಹೊಂದಾಣಿಕೆಯಾಗುತ್ತದೆ ಅನ್ನೋ ಕಾರಣಕ್ಕೆ ಮೊದಲಿಗೆ “ಕಸ್ತೂರಿ ನಿವಾಸ’ ಅಂಥ ಟೈಟಲ್ ಇಟ್ಟಿದ್ದೆವು’ ಎನ್ನುತ್ತಾರೆ.
ಇನ್ನು ಇದ್ದಕ್ಕಿದ್ದಂತೆ “ಕಸ್ತೂರಿ ನಿವಾಸ’ ಟೈಟಲ್ ದಿನಕಳೆಯುವುದರೊಳಗೆ ಬದಲಾದ ಬಗ್ಗೆ ಮಾತನಾಡಿರುವ ದಿನೇಶ್ ಬಾಬು, “ನಮ್ಮ ಸಬೆjಕ್ಟ್ಗೆ ಮ್ಯಾಚ್ ಆಗುತ್ತದೆ ಅನ್ನೋ ಒಂದೇ ಕಾರಣಕ್ಕೆ ಈ ಟೈಟಲ್ ಇಟ್ಟುಕೊಂಡಿದ್ದೆವು ಹೊರತು ಅದರ ಹಿಂದೆ ಬೇರೆ ಯಾವುದೇ ಲೆಕ್ಕಚಾರ ಅಥವಾ ಉದ್ದೇಶಗಳಿರಲಿಲ್ಲ. ಆದ್ರೆ ಟೈಟಲ್ ಅನೌನ್ಸ್ ಆದ ನಂತರ ನನಗೆ ಮತ್ತು ನಮ್ಮ ಚಿತ್ರತಂಡಕ್ಕೆ ಅನೇಕರು ಪೋನ್ ಮಾಡಿ ಈ ಟೈಟಲ್ ಮರುಬಳಕೆ ಮಾಡಬೇಡಿ ಎಂದು ಮನವಿ ಮಾಡಿದ್ದರು. ಇನ್ನೂ ಕೆಲವರು “ಕಸ್ತೂರಿ ನಿವಾಸ’ ಕನ್ನಡ ಚಿತ್ರರಂಗದಲ್ಲಿ ಕ್ಲಾಸಿಕ್ ಸಿನಿಮಾವಾಗಿದ್ದರಿಂದ, ಅದಕ್ಕೆ ಅಪಚಾರ ಮಾಡಬೇಡಿ ಎಂದೂ ಹೇಳಿದರು. ಟೈಟಲ್ ಬಗ್ಗೆ ಇಂಥ ಗೊಂದಲಗಳನ್ನು ಮಾಡಿಕೊಳ್ಳಲು ನಮಗೂ ಇಷ್ಟವಿಲ್ಲ. ಹೀಗಾಗಿ ಸಿನಿಮಾದ ಟೈಟಲ್ ಬದಲಾಯಿಸುವ ನಿರ್ಧಾರಕ್ಕೆ ಬಂದಿದ್ದೇವೆ. ನಮ್ಮ ಸಬ್ಜೆಕ್ಟ್ ಸೂಕ್ತವೆನಿಸುವಂತ “ಕಸ್ತೂರಿ’ ಎಂದಷ್ಟೇ ಟೈಟಲ್ ಇಡುವ ಬಗ್ಗೆಯೂ ಯೋಚಿಸುತ್ತಿ ದ್ದೇವೆ. ಅಥವಾ ಮುಂದೆ ಟೈಟಲ್ ಬೇರೆ ಏನಾದ್ರೂ ಆದರೂ ಆಗಬಹುದು’ ಎನ್ನುತ್ತಾರೆ.
ಇನ್ನು ತಮ್ಮ ಹೊಸಚಿತ್ರದ ಬಗ್ಗೆ ಮಾತನಾಡುವ ನಟಿ ರಚಿತಾ ರಾಮ್, “ಲಾಕ್‌ಡೌನ್ ವೇಳೆ ನಾನು ಕೇಳಿದ ಕಥೆದ ಒಂದೊಳ್ಳೆ ಕಥೆ ಈಗ ಸಿನಿಮಾವಾಗ್ತಿದೆ. ಇದರಲ್ಲಿ ನನ್ನ ಪಾತ್ರದ ಹೆಸರು ಕಸ್ತೂರಿ ಅಂಥ. ಹೋಮ್ಲಿ ಲುಕ್ ಇರುವಂಥ ಕ್ಯಾರೆಕ್ಟರ್. ಸಿನಿಮಾದಲ್ಲಿ ತುಂಬ ಸಸ್ಪೆನ್ಸ್ – ಥ್ರಿಲ್ಲರ್ ಎಲಿಮೆಂಟ್ಸ್ ಹೆಚ್ಚಾಗಿ ಇರೋದ್ರಿಂದ್ರ, ಈಗಲೇ ನನ್ನ ಕ್ಯಾರೆಕ್ಟರ್ ಬಗ್ಗೆ, ಸಬೆjಕ್ಟ್ ಬಗ್ಗೆ ಹೆಚ್ಚು ಮಾಹಿತಿ ಬಿಟ್ಟುಕೊಡುವಂತಿಲ್ಲ’ ಎಂದರು.
ಈ ಚಿತ್ರದಲ್ಲಿ ರಚಿತಾ ರಾಮ್ ಜೊತೆಗೆ ಸ್ಕಂದ ಅಶೋಕ್, ಶ್ರುತಿ ಪ್ರಕಾಶ್, ರಂಗಾಯಣ ರಘು ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಮುಹೂರ್ತ ವನ್ನು ಆಚರಿಸಿ ಚಿತ್ರೀಕರಣಕ್ಕೆ ಚಾಲನೆ ನೀಡಿರುವ ದಿನೇಶ್ ಬಾಬು ಆ್ಯಂಡ್ ಟೀಮ್, ಸಕಲೇಶಪುರ, ತೀರ್ಥಹಳ್ಳಿ, ಚಿಕ್ಕಮಗಳೂರು, ಮಡಿಕೇರಿ ಮೊದಲಾದ ಕಡೆಗಳಲ್ಲಿ ತಮ್ಮ ಹೊಸಚಿತ್ರವನ್ನು ಶೂಟಿಂಗ್ ಮಾಡುವ ಪ್ಲಾನ್‌ನಲ್ಲಿದ್ದಾರೆ. ರವೀಶ್ ಮತ್ತು ರುಬಿನ್ ರಾಜ್ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.
– ಜಿ. ಎಸ್. ಕಾರ್ತಿಕ ಸುಧನ್