Advertisement

ನಗರದ 101 ಕ್ಯಾಂಟೀನ್‌ಗಳಲ್ಲಿ ಇಂದಿನಿಂದ ಭೋಜನ ಸೇವೆ

11:30 AM Aug 16, 2017 | |

ಬೆಂಗಳೂರು: ನಗರದಲ್ಲಿ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಉಪಾಹಾರ, ಊಟ ವಿತರಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಇಂದಿರಾ’ ಕ್ಯಾಂಟೀನ್‌ ಸೇವೆ ಆರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಬುಧವಾರ ಜಯನಗರ ವಾರ್ಡ್‌ನ ಕನಕನಪಾಳ್ಯದಲ್ಲಿ ಇಂದಿರಾ ಕ್ಯಾಂಟೀನ್‌ ಉದ್ಘಾಟಿಸುವ ಮೂಲಕ ಯೋಜನೆಗೆ ಚಾಲನೆ ನೀಡುವರು.

Advertisement

ಆ ಮೂಲಕ ನಗರದಲ್ಲಿ ಏಕಕಾಲಕ್ಕೆ 101 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ಗಳು ಕಾರ್ಯಾರಂಭವಾಗಲಿವೆ. ಆರು ಅಡುಗೆ ಕೋಣೆಗಳಿಂದ ಆಹಾರ ಪೂರೈಕೆ ಪ್ರಕ್ರಿಯೆ ಶುರುವಾಗಲಿದೆ. ಉಳಿದ 22 ಅಡುಗೆ ಕೋಣೆಗಳು ಹಾಗೂ 97 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ ಅಕ್ಟೋಬರ್‌ 2ರಂದು ಆರಂಭವಾಗಲಿವೆ.

ಕೋನೇನ ಅಗ್ರಹಾರ ವಾರ್ಡ್‌ ವ್ಯಾಪ್ತಿಯಲ್ಲಿ ಮಣಿಪಾಲ್‌ ಆಸ್ಪತ್ರೆ ಸಮೀಪ ನಿರ್ಮಾಣವಾಗಿರುವ ಅಡುಗೆ ಕೋಣೆಯನ್ನು ಮಂಗಳವಾರ ಪರಿಶೀಲಿಸಿದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅವರು ಅಡುಗೆ ಕೋಣೆ ಹಾಗೂ ಕ್ಯಾಂಟೀನ್‌ ನಿರ್ವಹಣೆಗಾಗಿ ರೂಪಿಸಿರುವ “ಸ್ಟಾಂಡರ್ಡ್‌ ಆಪರೇಟಿಂಗ್‌ ಪ್ರೊಸೀಜರ್‌ ಮ್ಯಾನುಯೆಲ್‌’ ಕೈಪಿಡಿ ಬಿಡುಗಡೆ ಮಾಡಿದರು. ಜತೆಗೆ, “ಇಂದಿರಾ ಕ್ಯಾಂಟೀನ್‌’ ಮೊಬೈಲ್‌ ಆ್ಯಪ್‌ಗ್ ಚಾಲನೆ ನೀಡಿದರು. ನಂತರ ಮಾತನಾಡಿದರು.

“ನಗರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಕೈಗೆಟುವ ದರದಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ವಿತರಿಸುವ ಇಂದಿರಾ ಕ್ಯಾಂಟೀನ್‌ಗಳು ಬುಧವಾರದಿಂದ 101 ವಾರ್ಡ್‌ಗಳಲ್ಲಿ ಆರಂಭವಾಗಲಿದೆ. ಆರು ಅಡುಗೆ ಕೋಣೆಗಳು ಕಾರ್ಯಾರಂಭವಾಗಲಿವೆ. ಉಳಿದ ಕ್ಯಾಂಟೀನ್‌, ಅಡುಗೆ ಕೋಣೆಗಳು ಅ.2ರಿಂದ ಶುರುವಾಗಲಿವೆ. ಅಡುಗೆ ಕೋಣೆ ಹಾಗೂ ಕ್ಯಾಂಟೀನ್‌ ನಿರ್ಮಾಣಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗಿದ್ದು, ಪ್ರಶಾಂತ ವಾತಾವರಣದಲ್ಲಿ ಗುಣಮಟ್ಟದ ಆಹಾರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.  

ಪಂಚತಾರಾ ಹೋಟೆಲ್‌ನಂತಹ ಸೌಲಭ್ಯ ಕ್ಯಾಂಟೀನ್‌ಗಳನ್ನು ಅತ್ಯಾಧುನಿಕವಾಗಿ ನಿರ್ಮಿಸಲಾಗಿದ್ದು, ಪಂಚತಾರಾ ಹೋಟೆಲ್‌ಗ‌ಳ ಅಡುಗೆ ಕೋಣೆಯಂತಹ ವ್ಯವಸ್ಥೆ ಕಲ್ಪಿಸಲಾಗಿದೆ. ಅಡುಗೆ ಕೋಣೆ ನಡೆಸುವ ಗುತ್ತಿಗೆ ಪಡೆದ ಸಂಸ್ಥೆಗಳು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ಮುಖ್ಯಮಂತ್ರಿಗಳೇ ಸೂಚನೆ ನೀಡಿದ್ದಾರೆ.

Advertisement

ಅದರಂತೆ ಮೇಯರ್‌ ಹಾಗೂ ಪಾಲಿಕೆ ಅಧಿಕಾರಿಗಳು ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಿದರು ದಾಖಲೆ ಅವಧಿಯಲ್ಲಿ ನಿರ್ಮಾಣ ಜೂನ್‌ 12ರಂದು ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಸರ್ಕಾರ ಆದೇಶ ಹೊರಡಿಸಿದ್ದು, 63 ದಿನಗಳಲ್ಲಿ 101 ಕ್ಯಾಂಟೀನ್‌ಗಳು ನಿರ್ಮಾಣವಾಗಿವೆ.

ಪಾಲಿಕೆ ಮಾತ್ರವಲ್ಲ ಸರ್ಕಾರದಿಂದಲೂ ದಾಖಲೆ ಅವಧಿಯಲ್ಲಿ ಇಂತಹ ಕಾರ್ಯ ನಡೆದಂತಿಲ್ಲ. 198 ವಾರ್ಡ್‌ಗಳಲ್ಲಿ ಏಕಕಾಲಕ್ಕೆ ಕ್ಯಾಂಟೀನ್‌ ಆರಂಭಿಸುವ ಗುರಿಯಿತ್ತು. ಆದರೆ ಪ್ರತಿ ವಾರ್ಡ್‌ನಲ್ಲಿ ಅಗತ್ಯವಿರುವಷ್ಟು ಸೂಕ್ತ ಜಾಗ ತಕ್ಷಣ ಸಿಗದ ಕಾರಣ ವಿಳಂಬವಾಯಿತು. ಕೆಲ ವಾರ್ಡ್‌ಗಳಲ್ಲಿ ಇಂದಿಗೂ ಸೂಕ್ತ ಸ್ಥಳ ಲಭ್ಯವಾಗಿಲ್ಲ.

ಹಾಗಾಗಿ ಜಾಗ ಸಿಗದಿದ್ದರೆ ಖಾಸಗಿ ಕಟ್ಟಡದಲ್ಲಾದರೂ ಆರಂಭಿಸುವಂತೆ ಸೂಚಿಸಲಾಗಿದೆ. ಮುಂದಿನ ಬಾರಿಯೂ ಕಾಂಗ್ರೆಸ್‌ ಸರ್ಕಾರವೇ ಅಧಿಕಾರಕ್ಕೆ ಬರಲಿದ್ದು, ಯೋಜನೆ ಯಶಸ್ವಿಯಾಗಿ ಮುಂದುವರಿಯಲಿದೆ ಎಂದು ಹೇಳಿದರು. 3 ಲಕ್ಷ ಮಂದಿಗೆ ಪೂರೈಕೆ ಎಲ್ಲ 198 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ ಆರಂಭವಾದರೆ ನಿತ್ಯ ಮೂರು ಲಕ್ಷ ಮಂದಿ ಆಹಾರ ಸೇವಿಸಲಿದ್ದಾರೆ.

ಪ್ರತಿ ಕ್ಯಾಂಟೀನ್‌ನಲ್ಲೂ ಲಭ್ಯವಿರುವ ಉಪಾಹಾರ, ಊಟದ ಸಂಖ್ಯೆಯ ವಿವರ ಪ್ರದರ್ಶಿತವಾಗುತ್ತಿರುತ್ತದೆ. ಪ್ರತಿ ಕ್ಯಾಂಟೀನ್‌ನಲ್ಲಿ 300ರಿಂದ 500 ಮಂದಿಗೆ ಆಹಾರ ವಿತರಿಸುವ ಗುರಿ ಇದೆ ಎಂದು ಹೇಳಿದರು. ಹಸಿವಿಗೆ ರಜೆಯಿಲ್ಲ ರಾಹುಲ್‌ ಗಾಂಧಿ ಉದ್ಘಾಟನೆ ಮಾಡಲಿರುವ ಕನಕನಪಾಳ್ಯ ಕ್ಯಾಂಟೀನ್‌ನಲ್ಲಿ ಬುಧವಾರ ಮಧ್ಯಾಹ್ನ ಉಚಿತವಾಗಿ ಊಟ ವಿತರಿಸಲಾಗುವುದು.

ಅದೇ ರೀತಿ ಬುಧವಾರ ರಾತ್ರಿ ಎಲ್ಲ 101 ಕ್ಯಾಂಟೀನ್‌ಗಳಲ್ಲಿ ಉಚಿತ ಊಟ ವಿತರಣೆಯಾಗಲಿದೆ. ಹಸಿವಿಗೆ ರಜೆಯಿಲ್ಲದ ಕಾರಣ ಕ್ಯಾಂಟೀನ್‌ಗೂ ರಜೆಯಿಲ್ಲ. ವಾರದ ಎಲ್ಲ ದಿನ ಕ್ಯಾಂಟೀನ್‌ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.  ಸಹಕರಿಸುವಂತೆ ಮೇಯರ್‌ ಮನವಿ ಮೇಯರ್‌ ಜಿ.ಪದ್ಮಾವತಿ ಮಾತನಾಡಿ, “ವಾರದ ಏಳು ದಿನವೂ ಎರಡು ರೀತಿಯ ಉಪಾಹಾರ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.

ನಗರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಕೈಗೆಟುಕುವ ದರದಲ್ಲಿ ಆಹಾರ ವಿತರಿಸುವ ಯೋಜನೆಗೆ ಎಲ್ಲರೂ ಸಹಕಾರ ನೀಡಬೇಕು. ಆ ಮೂಲಕ ಹಸಿದರಿಗೆ ಸ್ಪಂದಿಸಲು ಕೈಜೋಡಿಸಬೇಕು,’ ಎಂದು ಮನವಿ ಮಾಡಿದರು.  ವಿಶೇಷ ಆಯುಕ್ತ ಮನೋಜ್‌ ಕುಮಾರ್‌ ಮಾತನಾಡಿ, “ಪ್ರತಿ ಅಡುಗೆ ಕೋಣೆಯು 6000ದಿಂದ 7000 ಮಂದಿಗೆ ಅಡುಗೆ ತಯಾರಿಸುವ ಸಾಮರ್ಥಯ ಹೊಂದಿದ್ದು, 101 ವಾರ್ಡ್‌ಗಳಿಗೆ ಸದ್ಯ ಆಹಾರ ಪೂರೈಸಲಿವೆ.

ಐದು ದಿನದಲ್ಲಿ ಇನ್ನೂ ನಾಲ್ಕು ಅಡುಗೆ ಕೋಣೆಗಳು ನಿರ್ಮಾಣವಾಗಲಿದ್ದು, ಯಾವುದೇ ರೀತಿಯ ತೊಂದರೆಯಾಗದು. ಪ್ರತಿ ಅಡುಗೆ ಕೋಣೆಗೂ ರೂಟ್‌ ಮ್ಯಾಪ್‌ ನೀಡಲಾಗಿದ್ದು, ಅದರಂತೆ ಕ್ಯಾಂಟೀನ್‌ಗಳಿಗೆ ಆಹಾರ ವಿತರಿಸಲಿದೆ ಎಂದು ಹೇಳಿದರು. ಆಯುಕ್ತ ಮಂಜುನಾಥ ಪ್ರಸಾದ್‌ ಇತರರು ಉಪಸ್ಥಿತರಿದ್ದರು.  

ಮೊಬೈಲ್‌ ಆ್ಯಪ್‌ ಬಿಡುಗಡೆ
ಕ್ಯಾಂಟೀನ್‌ ಸೇವೆ ಪಡೆಯಲು ಅನುಕೂಲವಾಗುವಂತೆ “ಇಂದಿರಾ ಕ್ಯಾಂಟೀನ್‌’ ಎಂಬ ವಿಶೇಷ ಮೊಬೈಲ್‌ ಆ್ಯಪ್‌ ಸೇವೆ ಆರಂಭಿಸಲಾಗಿದೆ. ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರೆ ಜನ ತಾವಿರುವ ಸ್ಥಳಕ್ಕೆ ಸಮೀಪದಲ್ಲಿರುವ ಐದು ಕ್ಯಾಂಟೀನ್‌ಗಳ ಗೂಗಲ್‌ ಮ್ಯಾಪ್‌ ವಿವರ ಸಿಗಲಿದೆ. ಜತೆಗೆ ಆ ಕ್ಯಾಂಟೀನ್‌ನಲ್ಲಿ ಆ ಹೊತ್ತಿಗೆ ಲಭ್ಯವಿರುವ ಊಟದ ವಿವರವೂ ಗೊತ್ತಾಗಲಿದೆ. ಜತೆಗೆ ಉಪಾಹಾರ, ಊಟದ ಮೆನು ಕೂಡ ಸಿಗಲಿದೆ. ಹಾಗೆಯೇ ಬಳಕೆದಾರರು ತಮ್ಮ ಸಲಹೆ, ಅಭಿಪ್ರಾಯವನ್ನೂ ದಾಖಲಿಸಲು ಅವಕಾಶವಿದೆ. ಜನರ ಅಭಿಪ್ರಾಯ ಆಧರಿಸಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಲು ಅನುಕೂಲವಾಗಲಿದೆ.   

ಸೋರುತಿಹುದು ಕ್ಯಾಂಟೀನ್‌ ಮಾಳಿಗೆ
ಬೆಂಗಳೂರು:
ಇಂದು ಲೋಕಾರ್ಪಣೆಗೊಳ್ಳಲಿರುವ ಇಂದಿರಾ ಕ್ಯಾಂಟೀನ್‌ಗಳು ಮಳೆಯಿಂದ ಸೋರಲಾರಂಭಿಸಿವೆ. ಕ್ಯಾಂಟೀನ್‌ ಹಾಗೂ ಅಡುಗೆ ಕೋಣೆಗಳ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುತ್ತಿದ್ದು ಸೋಮವಾರ ಕಂಡುಬಂತು. ಭಾರಿ ಮಳೆಯಿಂದಾಗಿ ಕೆಲ ಕ್ಯಾಂಟೀನ್‌, ಅಡುಗೆ ಕೋಣೆಗಳಲ್ಲಿ ಸೋರಿಕೆಯಾಗಿ ನೀರು ನಿಂತಿತ್ತು. ಕೋನೇನ ಅಗ್ರಹಾರದಲ್ಲಿ ನಿರ್ಮಾಣವಾಗಿರುವ ಅಡುಗೆ ಕೋಣೆಯ ಮೇಲ್ಛಾವಣಿಯಲ್ಲಿ ನೀರು ನಿಂತು ಸೋರುತ್ತಿತ್ತು. ಬಳಿಕ ಸಿಬ್ಬಂದಿ ನೀರು ಹೊರ ಹಾಕಿ ಸ್ವತ್ಛಗೊಳಿಸಿದರು.

ಕ್ಯಾಂಟೀನ್‌, ಅಡುಗೆ ಕೋಣೆಗಳ ಮೇಲ್ಛಾವಣಿ ಸೋರಿಕೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕೆ.ಜೆ.ಜಾರ್ಜ್‌, “ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕೆಲವೆಡೆ ಇಂದಿರಾ ಕ್ಯಾಂಟೀನ್‌, ಅಡುಗೆ ಕೋಣೆಗಳಲ್ಲಿ ಸೋರಿಕೆಯಾಗಿರಬಹುದು. ಕೂಡಲೇ ಅದನ್ನು ಸಮರ್ಪಕ ರೀತಿಯಲ್ಲಿ ದುರಸ್ತಿಪಡಿಸುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.

ಆಯುಕ್ತ ಮಂಜುನಾಥ ಪ್ರಸಾದ್‌ ಪ್ರತಿಕ್ರಿಯಿಸಿ, “ಇಂದಿರಾ ಕ್ಯಾಂಟೀನ್‌ಗಳನ್ನು ಪ್ರೀಕಾಸ್ಟ್‌ ಎಲಿಮೆಂಟ್‌ಗಳ ಮೂಲಕ ಜೋಡಿಸಿ ನಿರ್ಮಿಸಲಾಗಿದೆ. ಪ್ರೀಕಾಸ್ಟ್‌ ಎಲಿಮೆಂಟ್‌ಗಳನ್ನು ಜೋಡಿಸುವಾಗ ಮಧ್ಯ ಸಣ್ಣ ಅಂತರವಿರಲಿದ್ದು, ಅದನ್ನು ಎರಡು ಬಾರಿ ನೀರುತಡೆ ಸಾಧನದಿಂದ ಮುಚ್ಚಲಾಗುತ್ತದೆ. ಅದರಂತೆ ಮೊದಲ ಸುತ್ತಿನಲ್ಲಿ ನೀರು ತಡೆ ಸಾಧನ ಅಳವಡಿಸಲಾಗಿದ್ದು, ಮತ್ತೂಂದು ಸುತ್ತಿನಲ್ಲೂ ಬಳಸಬೇಕಿದೆ. ಆ ಕಾರ್ಯ ಮುಗಿದ ಬಳಿಕ ಯಾವುದೇ ರೀತಿಯ ಸೋರಿಕೆ ಉಂಟಾಗದು’ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next