ತುಮಕೂರು: ಡಿ.ಕೆ.ಶಿವಕುಮಾರ್ಗೆ ಬೇಜಾರಾಗಲು ಯಾರಾದರೂ ಅವರ ಆಸ್ತಿ ಬರೆಸಿಕೊಂಡಿದ್ದಾರಾ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿರುಗೇಟು ನೀಡಿದರು.
ಡಿನ್ನರ್ ಮೀಟಿಂಗ್ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಬೇಜಾರಾಗಿದ್ದಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ರಾಜಣ್ಣ, ರಾಜ್ಯದಲ್ಲಿ ಪರಿಶಿಷ್ಟ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಮ್ಯಾನೇಜ್ಮೆಂಟ್ ಕೋಟಾದಡಿ ಪ್ರವೇಶ ಪಡೆದವರಿಗೆ ಹಾಸ್ಟೆಲ್ ಪ್ರವೇಶ ನೀಡುತ್ತಿಲ್ಲ. ಇಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸಭೆ ಕರೆದಿದ್ದೇವೆ. ಸಭೆ ಮಾಡಬೇಡಿ ಎಂದು ವಿರೋಧಿಸುವುದು ಎಷ್ಟರ ಮಟ್ಟಿಗೆ ಸರಿ. ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ? ಇದೆಲ್ಲ ತುಂಬಾ ದಿನ ನಡೆಯುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳ ಜ್ವಲಂತ ಸಮಸ್ಯೆಗಳ ಕುರಿತು ಸಭೆ ಮಾಡುವುದಕ್ಕೆ ಹೋದರೆ ಅದಕ್ಕೆ ರಾಜಕೀಯ ಲೇಪನ ಹಚ್ಚಿ ಮಾಡಬೇಡಿ, ಮುಟ್ಟಬೇಡಿ ಅಂದ್ರೆ ಅದು ಎಸ್ಸಿ/ಎಸ್ಟಿ ಸಮುದಾಯಕ್ಕೆ ಮಾಡುವ ಅನ್ಯಾಯ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಟೀಕಿಸಿದರು.
ಮತ್ತೊಂದು ಗೊಂದಲ ಬೇಡವೆಂದು ಸಭೆ ಮುಂದೂಡಿಕೆ:
ಡಿನ್ನರ್ ಮೀಟಿಂಗ್ ನನ್ನ ಪ್ರಕಾರ ರದ್ದಾಗಿಲ್ಲ. ಮುಂದೂಡಿಕೆ ಮಾಡಲಾಗಿದೆ. ಈ ಬಗ್ಗೆ ಡಾ.ಜಿ. ಪರಮೇಶ್ವರ್ ಮಾಹಿತಿ ಕೊಟ್ಟಿದ್ದಾರೆ. ಇತ್ತೀಚೆಗೆ ಜಾರಕಿಹೊಳಿ ಮನೆಯಲ್ಲಿ ನಡೆದ ಮೀಟಿಂಗ್ ವಿಚಾರದಿಂದ ಪಕ್ಷದಲ್ಲಿ ಸಾಕಷ್ಟು ಗೊಂದಲ ಮೂಡಿದೆ. ಈಗ ಮತ್ತೊಂದು ಗೊಂದಲ ಸೃಷ್ಟಿಯಾಗೋದು ಬೇಡ ಎಂದು ಸಭೆಯನ್ನು ಮುಂದೂಡುವಂತೆ ಹೈಕಮಾಂಡ್ ಹೇಳಿದೆ ಎಂದರು.