ಹುಬ್ಬಳ್ಳಿ: ಮೂರುಸಾವಿರಮಠ ಉಳಿಯಬೇಕೆನ್ನುವ ಉದ್ದೇಶದಿಂದ ಹೋರಾಟ ಮಾಡುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲಾಗುವುದು ಎನ್ನುವವರ ನಿಲುವು ಸ್ವಾರ್ಥದಿಂದ ಕೂಡಿದ್ದು, ಬುದ್ಧಿಗೇಡಿತನಕ್ಕೆ ಹಿಡಿದ ಕನ್ನಡಿಯಾಗಿದೆ. ಯಾರನ್ನೋ ಮೆಚ್ಚಿಸಲು ಈ ಹೇಳಿಕೆ ನೀಡುತ್ತಿರುವುದು ಸ್ಪಷ್ಟವಾಗಿದೆ ಎಂದು ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಶ್ರೀಮಠ ಉಳಿಸಬೇಕೆನ್ನುವ ಹೋರಾಟ ಇಂದು ನಿನ್ನೆಯದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಮಠದ ಪರವಾಗಿ ಹೋರಾಟ ಮಾಡುತ್ತಿರುವವರ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿಕೆ ನೀಡುವವರು, ಶ್ರೀಮಠದ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕು. ಈ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದರೆ ಬಹಿರಂಗ ಚರ್ಚೆಗೆ ವೇದಿಕೆ ಸಿದ್ಧಪಡಿಸಿದರೆ ನಾವು ಬರಲು ತಯಾರಿದ್ದೇವೆ.
ನಾಡಿನ ಭಕ್ತರಿಗೆ ಪ್ರತಿಯೊಂದು ವಿಚಾರವನ್ನು ದಾಖಲೆ ಮೂಲಕ ತಿಳಿಸುತ್ತೇನೆ. ಈ ಸಭೆಗೆ ಶ್ರೀಮಠದ ಜಗದ್ಗುರುಗಳು, ಕೆಎಲ್‌ಇ ಸಂಸ್ಥೆ, ಮಠದ ಉನ್ನತ ಸಮಿತಿ ಸದಸ್ಯರು, ಯಾರಾದರೂ ಮಠಾ ಧಿಪತಿಗಳು ಬರಬಹುದು. ಕೆಎಲ್‌ಇ ಪರವಾಗಿ ಹೇಳಿಕೆ ನೀಡುವುದನ್ನು ಬಿಟ್ಟು ಶ್ರೀಮಠದ ಗತವೈಭವ ಮತ್ತು ಇಂದಿನ ಪರಿಸ್ಥಿತಿಯನ್ನು ಗಮನಿಸಬೇಕು.
ನಮ್ಮ ಹೋರಾಟ ಕೆಎಲ್‌ಇ ಸಂಸ್ಥೆ, ವೈದ್ಯಕೀಯ ಬೋಧನಾ ಆಸ್ಪತ್ರೆ ವಿರುದ್ಧವಲ್ಲ. ಮಠ ಉಳಿದು ಬೆಳೆಯಬೇಕೆನ್ನುವುದಾಗಿದೆ. ಕೆಎಲ್‌ಇ ಸಂಸ್ಥೆ ಹುಬ್ಬಳ್ಳಿಯಲ್ಲಿ ನೂರಾರು ಎಕರೆ ಭೂಮಿ ಹೊಂದಿದ್ದು, ಮಠದ ಆಸ್ತಿ ಪಡೆದು ಮಠವನ್ನು ವಿವಾದದ ಕೇಂದ್ರವಾಗಿಸಿದ್ದಾರೆ. ಅವರ ಸ್ವಂತ ಭೂಮಿಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಾಡಿ ಮೂಜಗಂ ಅವರ ಹೆಸರು ನಾಮಕರಣ ಮಾಡಿ ಅಭಿಮಾನ ಮೆರೆಯಬೇಕು.
ಸತ್ಯದ ಅರಿವಿಲ್ಲದೆ ಯಾರದೋ ಒತ್ತಡ ಮತ್ತು ಪ್ರಭಾವಕ್ಕೆ ಒಳಗಾಗಿ ಹೇಳಿಕೆ ನೀಡುವುದು ಸರಿಯಲ್ಲ. ಮಠ, ಮಠದ ಉತ್ತರಾಧಿಕಾರ ವಿಚಾರವಾಗಿ ಮಾತನಾಡುವಾಗ ನಮ್ಮೊಂದಿಗೆ ಚರ್ಚಿಸಬೇಕು. ಈ ರೀತಿ ಹೇಳಿಕೆ ನೀಡುವುದರಿಂದ ಮಠದ ಘನತೆಗೆ ದಕ್ಕೆ ಕೆಲಸವಾಗಲಿದೆ. ಶ್ರೀಮಠದ ಆಸ್ತಿ ಪರಭಾರೆ ಮಾಡಿದ್ದು, ಕಾನೂನು ಬಾಹಿರ ಮತ್ತು ಸಮಾಜ ಬಾಹಿರವಾಗಿದೆ. ಕೆಎಲ್‌ಇ ಸಂಸ್ಥೆ ಬೆಳೆಯಬೇಕೆನ್ನುವುದು ಎಷ್ಟು ಮುಖ್ಯವೋ ಶ್ರೀಮಠ ಉಳಿದು ಬೆಳೆಯಬೇಕಿರುವುದು ಅದಕ್ಕಿಂತ ಹೆಚ್ಚು ಎಂದು ತಿಳಿಸಿದ್ದಾರೆ.