Advertisement

ತಾಕತ್ತಿದ್ದರೆ ನಿಮ್ಮ ಕ್ಷೇತ್ರದ ಅನ್ಯಧರ್ಮದ ಪ್ರಾರ್ಥನಾ ಮಂದಿರ ತೆರವು ಮಾಡಿ: ಸಿಎಂ ಗೆ ಸವಾಲು

02:45 PM Sep 18, 2021 | Team Udayavani |

ಧಾರವಾಡ: ಹಿಂದೂ ಸಂಸ್ಕೃತಿ ನಾಶ ಮಾಡುವ ಮತ್ತು ವೀರಶೈವ-ಲಿಂಗಾಯತ ದೇವಸ್ಥಾನಗಳನ್ನು ತೆರವುಗೊಳಿಸುವ ಯತ್ನದಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಬಿಜೆಪಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಾಲೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದರು.

Advertisement

ನಗರದ ಲಿಂಗಾಯತ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ನೆಲಸಮಗೊಳಿಸಿರುವ ನಂಜನಗೂಡಿನ ಪುರಾತನ ದೇವಾಲಯವನ್ನು ಪುನಃ ನಿರ್ಮಾಣ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ದೇವಾಲಯ ಕೆಡುವ ಕುರಿತು ಸುದ್ದಿಗಳು ಮಾಧ್ಯಮಗಳಲ್ಲಿ ಇದೀಗ ಹರಿದಾಡುತ್ತಿದೆ, ರಾಜ್ಯದಲ್ಲಿ ನಡೆದಿರುವ ಇಂತಹ ವ್ಯವಸ್ಥೆಯನ್ನು ಖಂಡಿಸುತ್ತೆನೆ ಎಂದು ಹರಿಹಾಯ್ದರು.

ಇದನ್ನೂ ಓದಿ:ಬೊಮ್ಮಾಯಿ ಸರ್ಕಾರ ಜನಪರ ಆಡಳಿತ ನಡೆಸುತ್ತಿದೆ : ಶಾಸಕ ಸೋಮಲಿಂಗಪ್ಪ

ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ ಮೈಸೂರಿನ ನಿರಂಜನ ಮಠಕ್ಕೆ 200 ವರ್ಷಗಳ ಇತಿಹಾಸವಿದೆ. 1892 ರಲ್ಲಿ ಸ್ವಾಮಿ ವಿವೇಕಾನಂದ ಅವರು ಈ ಮಠಕ್ಕೆ ಭೇಟಿ ನೀಡಿದ್ದರು. ಆಗ ಅವರಿಗೆ ನಿರಂಜನ ಮಠದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು. ಇದನ್ನೇ ಮುಂದಿಟ್ಟುಕೊಂಡು ಸದಾನಂದ ಗೌಡರು ಸಿಎಂ ಆಗಿದ್ದ ಅವಧಿಯಲ್ಲಿ ಆ ಮಠದ ಒಂದು ಎಕರೆ ಜಾಗವನ್ನು ರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ ವೀವೇಕ ಸ್ಮಾರಕ ನಿರ್ಮಿಸಲು ಪರಭಾರೆ ಮಾಡಲು ಸಚಿವ ಸಂಪುಟದಲ್ಲಿ ತೀರ್ಮಾನ ಕೈಕೊಂಡು 5 ಕೋಟಿ ರೂಪಾಯಿ ಅನುದಾನವನ್ನು ನೀಡಲಾಗಿದೆ. ಸುಧೀರ್ಘ ಒಂದು ಇತಿಹಾಸ ಹೊಂದಿರುವ ನಿರಂಜನ ಮಠದ ಪರಂಪರೆಯನ್ನು ನಾಶ ಮಾಡಿ ಹೊಸದೊಂದು ಇತಿಹಾಸ ಸೃಷ್ಠಿ ಮಾಡಲು ಮುಂದಾಗಿದ್ದು ಖಂಡನೀಯ. ಆಗ ಸದಾನಂದ ಗೌಡರ ಕಾಲದಲ್ಲಿ ನಿರಂಜನ ಮಠಕ್ಕೆ ಹಿನ್ನಡೆಯಾಗಿದೆ. ನಾನು ಮೈಸೂರಿಗೆ ಹೋಗಿ ನಿರಂಜನ ಮಠದ ಸ್ವಾಮಿಜಿ ಭಕ್ತರ ಸಭೆ ಮಾಡಿದ್ದೆನೆ. ಪುರಾತನ ತತ್ವ ಇಲಾಖೆಗೆ ಸೇರಿದ ಇಲ್ಲವೋ ಎಂಬುದರ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಸರಕಾರದಲ್ಲಿ ಮೂರ್ಖ ಅಧಿಕಾರಿಗಳಿದ್ದಾರೆ, ಹಿಂದೂ ಧರ್ಮಕ್ಕೆ ಸರಕಾರ ಅನ್ಯಾಯ ಮಾಡಿದೆ ಎಂದರು.

Advertisement

ಇದೀಗ ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ ದೇವಸ್ಥಾನಗಳನ್ನು ನ್ಯಾಯಾಲಯದ ಆದೇಶ ಮುಂದಿಟ್ಟುಕೊಂಡು ನೆಲಸಮಗೊಳಿಸಲು ಸರಕಾರ ಹೊರಟಿದೆ. ನ್ಯಾಯಾಲಯದ ಆದೇಶ, ದೇವಸ್ಥಾನದ ಬಗ್ಗೆ ಅಗತ್ಯ ಅಧ್ಯಯನ, ಭಕ್ತರ ಭಾವನೆ ಮತ್ತಿತರ ಅಂಶಗಳನ್ನು ಪರಿಗಣಿಸದೇ ನೆಲಸಮ ಗೊಳಿಸುತ್ತಿರುವುದು ಇಡೀ ಸಮಾಜದ ಜನರಿಗೆ ನೋವುಂಟು ಮಾಡಿದೆ. ಬಿಜೆಪಿ ಸರಕಾರದಲ್ಲಿ ಹಿಂದೂ ಧರ್ಮದ ಮತ್ತು ವೀರಶೈವ-ಲಿಂಗಾಯತ ಸಮಾಜದ ದೇವಾಲಯಗಳಿಗೆ ರಕ್ಷಣೆ ಇಲ್ಲದಾಗಿದೆ. ಸಮಾಜದ ಜನಪ್ರತಿನಿಧಿಗಳು ಕೂಡ ಗಮನಹರಿಸದಿರುವುದು ಸರಿಯಲ್ಲ ಎಂದರು.

ಈಗಿನ ಸಿಎಂ ಬೊಮ್ಮಾಯಿ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಸಿದಿದ್ದರೆ, ನಾವು ನಮ್ಮ ಮುಂದಿನ ನಡೆಯನ್ನು ಸಮಾಜದ ಸ್ವಾಮೀಜಿಗಳ ಜೊತೆ ಚರ್ಚಿಸಿ ಸ್ಪಷ್ಟಪಡಿಸುತ್ತೇವೆ. ಇದೇ ವೇಳೆ ಸರಕಾರ ತನ್ನ ತಪ್ಪು ತಿದ್ದಿಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಸಿದರು.

ಅನ್ಯಧರ್ಮದ ಪ್ರಾರ್ಥನಾ ಮಂದಿರ ತೆರವುಗೊಳಿಸಿ: ಸರಕಾರದ ಈ ನಡೆ ಹುತ್ತದೊಳಗೆ ಕೈ ಹಾಕಿಂದತೆಯಾಗುತ್ತದೆ. ಅಂತಹ ಮೂರ್ಖತನ ಮಾಡಲು ಹೋಗಬೇಡಿ. ರಾಷ್ಟ್ರೀಯ ಹೆದ್ದಾರಿ-4 ರ ಮಧ್ಯದಲ್ಲಿ ಬಂಕಾಪೂರ ಬಳಿ ಅನ್ಯ ಧರ್ಮದ ಪ್ರಾರ್ಥನಾ ಮಂದಿರ ಇದೆ. ತಮ್ಮ ಕ್ಷೇತ್ರದಲ್ಲಿಯೇ ಇರುವ ಈ ಪ್ರಾರ್ಥನಾ ಮಂದಿರವನ್ನು ತಾಕತ್ತಿದ್ದರೆ ತೆರವುಗೊಳಿಸಲಿ ಎಂದು ಸಿಎಂ ಬೊಮ್ಮಾಯಿಗೆ ಸ್ವಾಮೀಜಿ ಸವಾಲು ಹಾಕಿದರು.

ಪಂಚಮಸಾಲಿ ಮೀಸಲಾತಿಗೆ ಬೆಂಬಲ: ಪಂಚಮಸಾಲಿ ಸಮಾಜದವರಿಗೆ 2 ಎ ಮಿಸಲಾತಿ ವಿಚಾರದಲ್ಲಿ ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ಒಂದು ಸಮುದಾಯಕ್ಕೆ ಸರಕಾರಿ ಸೌಲಭ್ಯ ಸಿಗಬೇಕು ಎಂಬುದು ಅವರ ಆಶಯ. ನಾನೂ ವೀರಶೈವ ಲಿಂಗಾಯತ ಒಳಪಂಗಡಗಳಿಗೆ ಸೇರಿದವರೆಲ್ಲರಿಗೂ ಸರಕಾರದ ಸೌಲಭ್ಯಗಳು ಸಿಗಬೇಕು ಎಂದು ಬಯಸುತ್ತೇನೆ. ಮುಂದಿನ ದಿನಗಳಲ್ಲಿ ಜಯಮೃತ್ಯುಂಜಯ ಸ್ವಾಮಿಜಿ ಜೊತೆ ಸೇರಿ ಆಗಿ ಕೆಲಸ ಮಾಡುತ್ತೆನೆ ಎಂದರು.

ಮೂರುಸಾವಿರ ಮಠದ ವಿಷಯಕ್ಕೆ ಮೌನ: ಈಗ ಸಮಾಜದ ಮುಂದಿರುವ ಸಮಸ್ಯೆಗಳ ಬಗ್ಗೆ ಗಮನಹರಿಸಿದ್ದೇನೆ. ಹೀಗಾಗಿ ಹುಬ್ಬಳ್ಳಿ ಮೂರುಸಾವಿರ ಮಠದ ಉತ್ತರಾಧಿಕಾರಿ ಪ್ರಕರಣ ಕುರಿತು ಮಾತನಾಡುವುದಿಲ್ಲ ಎನ್ನುವ ಮೂಲಕ ಸ್ವಾಮೀಜಿ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಬೊಮ್ಮನಹಳ್ಳಿ-ಮುಳ್ಳಳ್ಳಿಯ ಶ್ರೀ ಶಿವಯೋಗೀಶ್ವರ ಸ್ವ್ವಾಮೀಜಿ, ಹಿರೇ ನಾಗಾಂವ ಶ್ರೀ ಜಯಶಾಂತಲಿಂಗ  ಸ್ವ್ವಾಮೀಜಿ, ಮಂಟೂರನ ಶ್ರೀ ಶಿವಲಿಂಗ ಸ್ವಾಮೀಜಿ, ಗಡಿಗೌಡಗಾವದ ಶ್ರೀ ಶಾಂತವೀರ ಶಿವಾಚಾರ್ಯರು, ತಾಳಿಕೋಟಿಯ ಶ್ರೀ ಶಿವಯೋಗಿ ಶಿವಾಚಾರ್ಯರು, ಅಖಿಲ  ಭಾರತ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಶಿಮರದ, ಕೋಶಾಧ್ಯಕ್ಷ ಎಸ್.ಬಿ.ಗೋಲಪ್ಪನವರ, ಕಾರ್ಯದರ್ಶಿ ಸಿದ್ದಣ್ಣ ಕಂಬಾರ, ಗಣ್ಯರಾದ ಎಲ್ಲಪ್ಪ ಕಲಿವಾಳ, ಎಂ.ಎಫ್.ಹಿರೇಮಠ, ಎನ್.ಎಸ್.ಬಿರಾದಾರ, ಮಂಜುನಾಥ ಮುಗ್ಗನವರ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next