ದಾವಣಗೆರೆ: ಸೇನಾ ದಾಳಿ ವಿಚಾರ ಚುನಾವಣೆಯಲ್ಲಿ ಬಳಸಿಕೊಳ್ಳಬಾರದೆಂಬ ಕಾನೂನಿದ್ದರೂ ಉಗ್ರರ ಮೇಲಿನ ಏರ್ ಸ್ಟ್ರೈಕ್ ಘಟನೆಯನ್ನೇ ಪ್ರಸ್ತಾಪಿಸುವ ಮೂಲಕ ಕಾನೂನು ಉಲ್ಲಂಘಿಸುತ್ತಿರುವ ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಬಿಜೆಪಿಯದ್ದು ಯಾವುದೇ ಸಕಾರಾತ್ಮಕ ಅಜೆಂಡಾ ಇಲ್ಲ. ಕೇವಲ ಭಾವನಾತ್ಮಕ ಹೇಳಿಕೆ, ಪ್ರಚೋದನಾಕಾರಿ ಭಾಷಣವೇ ಬಂಡವಾಳ. ಸೇನಾ ದಾಳಿ ಘಟನೆಯನ್ನೂ ಪ್ರಧಾನಿ ಮೋದಿ ಬಳಸಿಕೊಳ್ಳುತ್ತಿದ್ದು,
ಚುನಾವಣಾ ಆಯೋಗ ಕೂಡ ಅವರ ಅಡಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಚುನಾವಣಾ ಆಯೋಗದ ಮೇಲೂ ಮೋದಿ ಹತೋಟಿ ಹೊಂದಿದ್ದಾರೆ. ಹಾಗಾಗಿ ಆಯೋಗದ ಬಗ್ಗೆಯೂ ವಿಶ್ವಾಸ ಕಡಿಮೆಯಾಗಿದೆ ಎಂದರು.
ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಮಿಡಲ್ ಮ್ಯಾನ್. ಸುಪ್ರೀಂಕೋರ್ಟ್ ಆ ಪ್ರಕರಣದ ವಿಚಾರಣೆ ನಡೆಸಲಿದ್ದು, ನರೇಂದ್ರ ಮೋದಿ ಜೈಲಿಗೆ ಹೋಗುವ ಕಾಲ ದೂರವಿಲ್ಲ.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ