ನಾಗ್ಪುರ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯ ಶುಕ್ರವಾರ ನಾಗ್ಪುರದಲ್ಲಿ ನಡೆಯಿತು. ಮಳೆಯ ಕಾರಣದಿಂದ ತಡವಾಗಿ ಆರಂಭವಾಗಿ ತಲಾ ಎಂಟು ಓವರ್ ಗಳ ಪಂದ್ಯ ಮಾತ್ರ ಸಾಧ್ಯವಾಯಿತು. ಈ ಪಂದ್ಯವನ್ನು ಗೆದ್ದ ಭಾರತ ತಂಡವು ಸರಣಿಯನ್ನು 1-1ರಿಂದ ಸಮಬಲ ಮಾಡಿಕೊಂಡಿತು.
8 ಓವರ್ ಗಳ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ತಂಡ ಐದು ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿದರೆ, ಭಾರತ ತಂಡವು 7.2 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 92 ರನ್ ಮಾಡಿ ಜಯ ಸಾಧಿಸಿತು. ನಾಯಕ ರೋಹಿತ್ ಶರ್ಮಾ ಅವರು 20 ಎಸೆತಗಳಲ್ಲಿ ಅಜೇಯ 46 ರನ್ ಬಾರಿಸಿದರು. ಅಂತಿಮ ಓವರ್ ನಲ್ಲಿ ಗೆಲುವಿಗೆ 9 ರನ್ ಅಗತ್ಯವಿದ್ದಾಗ ಕ್ರೀಸ್ ಗೆ ಬಂದ ದಿನೇಶ್ ಕಾರ್ತಿಕ್ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಎರಡೇ ಎಸೆತದಲ್ಲಿ ಪಂದ್ಯ ಮುಗಿಸಿದರು.
ಇದನ್ನೂ ಓದಿ:ಸೋಲಿನೊಂದಿಗೆ ಟೆನ್ನಿಸ್ ಅಂಕಣಕ್ಕೆ ಅಂತಿಮ ವಿದಾಯ ಹೇಳಿದ ರೋಜರ್ ಫೆಡರರ್
ಪಂದ್ಯದ ಬಳಿಕ ಮಾತನಾಡಿದ ದಿನೇಶ್ ಕಾರ್ತಿಕ್, ಮೈದಾನಕ್ಕಾಗಮಿಸಿದ್ದ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು. ಕೋವಿಡ್ -19 ನಂತರ ಮೊದಲ ಬಾರಿಗೆ ಇಷ್ಟು ಜನಸಂದಣಿ ಮತ್ತು ಅಭಿಮಾನಿಗಳನ್ನು ನೋಡಿದ್ದೇನೆ ಎಂದು ಅವರು ಹೇಳಿದರು. ಮಳೆಯಿಂದಾಗಿ 7 ಗಂಟೆಗೆ ಆರಂಭವಾಗಬೇಕಾದ ಪಂದ್ಯ 9.30ಕ್ಕೆ ಆರಂಭವಾದರೂ ಮೈದಾನದಲ್ಲಿ ಕಿಕ್ಕಿರಿದು ನೆರೆದಿದ್ದರು. ಹೀಗಾಗಿ ಜನರ ಪ್ರೀತಿಗಾಗಿ ನಾವು ಆಡಿದ್ದೇವೆ ಎಂದರು.
“ನಾವು ಒಂದೇ ಒಂದು ಕಾರಣಕ್ಕಾಗಿ ಆಡಲು ತುಂಬಾ ಉತ್ಸುಕರಾಗಿದ್ದೆವು. ನಾವು ಹೋಟೆಲ್ ನಿಂದ ಹೊರಟ ಸಮಯದಿಂದ, ಮೈದಾನದವರೆಗೂ ಜನಸಂದಣಿ ಇತ್ತು. ಸಮಾನ್ಯವಾಗಿ ಮೈದಾನವನ್ನು ತಲುಪಲು ನಾವು ತೆಗೆದುಕೊಳ್ಳಬೇಕಾದ ಸಮಯಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಂಡಿದ್ದೇವೆ. ಸ್ಟೇಡಿಯಂನಲ್ಲಿ ನಿಂತಿದ್ದ ಜನರನ್ನು ಕಂಡು ಇದು ವಿಶೇಷ ಸಂದರ್ಭ ಎಂದು ನಾವು ಭಾವಿಸಿದೆವು. ಕೋವಿಡ್ ನಂತರ, ಇಷ್ಟು ಜನಸಂದಣಿ ಮತ್ತು ಅಭಿಮಾನಿಗಳನ್ನು ನೋಡಿದ್ದೇನೆ” ಎಂದು ಕಾರ್ತಿಕ್ ಹೇಳಿದರು.
“ನಾವು ಆಡಲೇ ಬೇಕು ಎಂದು ಬಯಸಿದ್ದೆವು. ನಿಸ್ಸಂಶಯವಾಗಿ ಆರಂಭದಲ್ಲಿ ಕಷ್ಟವಾಗಬಹುದು ಎಂಬ ಭಾವನೆ ನಮಗೆ ಬಂದಿತು. ಆದರೆ ಎರಡೂ ತಂಡಗಳು ಧೈರ್ಯದಿಂದ ಆಟವಾಡಿದವು. ನಾವು ಎರಡೂ ತಂಡಗಳು ನಾಗ್ಪುರ ನಗರಕ್ಕಾಗಿ ಆಡಿದ್ದೇವೆ. ಹೌದು, ಅದು ಸರಣಿಯಲ್ಲಿ 1-1 ಗಳಿಸಲು ಈ ಪಂದ್ಯ ಸಹಾಯ ಮಾಡಿದೆ. ಆದರೆ ನಾಗ್ಪುರದ ಜನರಿಗೆ ಆಟವಾಡಿರುವು ತುಂಬಾ ವಿಶೇಷ “ಎಂದು ಕಾರ್ತಿಕ್ ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.