ಲಂಡನ್: ಈ ವರ್ಷದ ಐಪಿಎಲ್ ಹಾಗೂ ಇತ್ತೀಚೆಗೆ ನಡೆದ ದಕ್ಷಿಣ ಆಫ್ರಿಕಾ- ಭಾರತ ನಡುವಿನ ಟಿ20 ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತೀಯ ಕ್ರಿಕೆಟಿಗ ದಿನೇಶ್ ಕಾರ್ತಿಕ್, ಬುಧವಾರ ಬಿಡುಗಡೆಯಾದ ಐಸಿಸಿ ಟಿ20 ರ್‍ಯಾಂಕಿಂಗ್ ಪರಿಷ್ಕೃತ ಪಟ್ಟಿಯಲ್ಲಿ ಬರೋಬ್ಬರಿ 108 ಸ್ಥಾನಗಳ ಏರಿಕೆ ಕಂಡು, 87ನೇ ಸ್ಥಾನ ಗಳಿಸಿದ್ದಾರೆ.
ಈ ಬಾರಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಪರವಾಗಿ 16 ಪಂದ್ಯಗಳಿಂದ 166 ಸ್ಟ್ರೈಕ್ ರೇಟ್‌ನೊಂದಿಗೆ 330 ರನ್ ಚಚ್ಚಿದ್ದರು. ಇತ್ತೀಚೆಗೆ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ 4ನೇ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಕಾರ್ತಿಕ್ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದಲ್ಲದೆ, ಪಂದ್ಯ ಪುರುಷೋತ್ತಮ (ಮ್ಯಾನ್ ಆಫ್ ದ ಮ್ಯಾಚ್) ಗೌರವಕ್ಕೂ ಪಾತ್ರರಾಗಿದ್ದರು.
ಟಾಪ್ 10ರಲ್ಲಿ ಕಿಶನ್: ವಿಶೇಷವೆಂದರೆ, ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಈಶನ್ ಕಿಶನ್ (703 ರೇಟಿಂಗ್), 6ನೇ ಸ್ಥಾನ ಗಳಿಸಿದ್ದಾರೆ. ಈ ಮೂಲಕ, ರ್‍ಯಾಂಕಿಂಗ್ ಪಟ್ಟಿಯ ಟಾಪ್ 10ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಪಟ್ಟಿಯಲ್ಲಿ ಪಾಕಿಸ್ತಾನದ ಬಾಬರ್ ಆಜಂ (818 ರೇಟಿಂಗ್) ಮೊದಲ ಸ್ಥಾನದಲ್ಲಿದ್ದರೆ, ಮತ್ತೂಬ್ಬ ಪಾಕಿಸ್ತಾನದ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ 2ನೇ ಸ್ಥಾನದಲ್ಲಿ ಹಾಗೂ ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕಮ್ 3ನೇ ಸ್ಥಾನದಲ್ಲಿದ್ದಾರೆ.
23ನೇ ಸ್ಥಾನದಲ್ಲಿ ಚಾಹಲ್: ಬೌಲರ್‌ಗಳ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಯಜುವೇಂದ್ರ ಚಾಹಲ್, 3 ಸ್ಥಾನಗಳ ಏರಿಕೆ ಕಂಡು ಪಟ್ಟಿಯ 23ನೇ ಸ್ಥಾನದಲ್ಲಿ ಕುಳಿತಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ, ಆಸ್ಟ್ರೇಲಿಯಾದ ಜೋಷ್ ಹ್ಯಾಜಲ್‌ವುಡ್ ಮೊದಲ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ನ ಆದಿಲ್ ರಶೀದ್ ದ್ವಿತೀಯ ಹಾಗೂ ದಕ್ಷಿಣ ಆಫ್ರಿಕಾದ ತಬ್ರೇಜ್ ಶಮ್ಸಿ ತೃತೀಯ ಸ್ಥಾನದಲ್ಲಿದ್ದಾರೆ.