ನವ ದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಐಪಿಎಲ್ ನಿಂದ ನಿವೃತ್ತಿಯಾಗಿದ್ದಾರೆ ಎಂದು ವರದಿಯಾಗಿದೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಸೋಲನುಭವಿಸಿದ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ವಿದಾಯದ ಸೂಚನೆಯನ್ನು ನೀಡಿದ್ದಾರೆ ಅಲ್ಲದೆ ಪಂದ್ಯ ಮುಗಿಯುತ್ತಿದ್ದಂತೆ ಕಾರ್ತಿಕ್ ಗ್ಲೌಸ್ ತೆಗೆದು ಪ್ರೇಕ್ಷಕರತ್ತ ಕೈಬೀಸಿ ಧನ್ಯವಾದ ಅರ್ಪಿಸಿ ಬಳಿಕ ಆಟಗಾರರಿಂದ ಭಾವನಾತ್ಮಕ ಗೌರವ ಪಡೆದುಕೊಂಡರು. ವಿರಾಟ್ ಕೊಹ್ಲಿ ಕಾರ್ತಿಕ್ ಅವರನ್ನು ಅಪ್ಪಿಕೊಂಡು ಕಣ್ಣೀರಿನೊಂದಿಗೆ ಮೈದಾನದಿಂದ ಹೊರನಡೆದರು.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಾರ್ತಿಕ್ ತಮ್ಮ ಕೊನೆಯ ಇನ್ನಿಂಗ್ಸ್‌ನಲ್ಲಿ 13 ಎಸೆತಗಳಲ್ಲಿ 11 ರನ್ ಗಳಿಸಿದರು. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸೋಲಿನ ನಂತರ ಆರ್ ಸಿಬಿ ಪಂದ್ಯಕೂಟದಿಂದ ಹೊರಬಿದ್ದಿತು. ಈ ಐಪಿಎಲ್ ತನ್ನ ವೃತ್ತಿಜೀವನದ ಕೊನೆಯ ಸೀಸನ್ ಆಗಲಿದೆ ಎಂದು ಋತುವಿನ ಆರಂಭಕ್ಕೂ ಮುನ್ನ ಕಾರ್ತಿಕ್ ಹೇಳಿದ್ದರು.
17 ವರ್ಷಗಳ ಐಪಿಎಲ್ ವೃತ್ತಿ ಜೀವನದಲ್ಲಿ ದಿನೇಶ್ ಕಾರ್ತಿಕ್ ಒಟ್ಟು 6 ತಂಡಗಳ ಪರ ಅದಿದ್ದರು. ಈ ವೇಳೆ 2013 ರಲ್ಲಿ ಮುಂಬೈ ಇಂಡಿಯನ್ಸ್ ಪರ ಅವರು ಟ್ರೋಫಿ ಗೆದ್ದಿದ್ದರು. ಇದಾದ ಬಳಿಕ ಹಲವು ತಂಡಗಳ ಪರ ಆಡಿದರೂ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಆಗಲಿಲ್ಲ. ಆದರೆ ವೃತ್ತಿ ಜೀವನದ ಕೊನೆಯ ಪಂದ್ಯಾಟದಲ್ಲಿ ಟ್ರೋಫಿ ಗೆಲ್ಲುವ ಕನಸು ಕಂಡಿದ್ದ ದಿನೇಶ್ ಕಾರ್ತಿಕ್ ಅವರ ಕನಸು ಮಾತ್ರ ಕನಸಾಗಿಯೇ ಉಳಿಯುವಂತಾಯಿತು.