ಮುಂಬೈ: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಇಲ್ಲಿನ ಡಿ ವೈ ಪಾಟೀಲ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸಿದೆ. ಕಡಿಮೆ ರನ್ ಸೆಣಸಾಟದಲ್ಲಿ ಆರ್ ಸಿಬಿ ರೋಚಕ ಜಯ ಸಾಧಿಸಿದೆ.
ಕೊನೆಯ ಓವರ್ ನಲ್ಲಿ ಏಳು ರನ್ ಬೇಕಾಗಿತ್ತು. ಕ್ರೀಸ್ ನಲ್ಲಿದ್ದ ದಿನೇಶ್ ಕಾರ್ತಿಕ್ ಮೊದಲೆರಡು ಎಸೆತಗಳಲ್ಲಿ ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ ಆರ್ ಸಿಬಿಗೆ ಜಯ ತಂದಿತ್ತರು.
ಪಂದ್ಯದ ಬಳಿಕ ಮಾತನಾಡಿದ ನಾಯಕ ಫಾಫ್ ಡುಪ್ಲೆಸಿಸ್, “ ಕೂಲ್ ಆಗಿರುವ ವಿಚಾರದಲ್ಲಿ ದಿನೇಶ್ ಕಾರ್ತಿಕ್ ಅವರು ಮಹೇಂದ್ರ ಸಿಂಗ್ ಧೋನಿಗೆ ಸಮ” ಎಂದರು.
ದಿನೇಶ್ ಕಾರ್ತಿಕ್ ಅವರನ್ನು ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಸಿದ ಬಗ್ಗೆ ಮಾತನಾಡಿದ ಫಾಫ್, “ ಅವರಿಗೆ ಇರುವ ಅನುಭವಕ್ಕೆ ಈ ನಿರ್ಧಾರ. ರನ್ ನಮಗೆ ಯಾವುದೇ ಸಮಸ್ಯೆಯಾಗಿರಲಿಲ್ಲ” ಎಂದರು.
ದಿನೇಶ್ ಕಾರ್ತಿಕ್ ಅವರು ಏಳು ಎಸೆತಗಳಲ್ಲಿ 14 ರನ್ ಸಿಡಿಸಿದರು. ಮೊದಲ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದ ದಿನೇಶ್, ಕೇವಲ 14 ಎಸೆತಗಳಲ್ಲಿ 32 ರನ್ ಚಚ್ಚಿದ್ದರು.