Advertisement

ದಿನೇಶ್‌ ಕಲ್ಲಹಳ್ಳಿ ದಿಢೀರ್‌ ಠಾಣೆಗೆ ಹಾಜರು : ವಿಚಾರಣೆ ವೇಳೆ ಸಂತ್ರಸ್ತೆಯ ಪರಿಚಯವಿಲ್ಲವೆಂದ

01:57 AM Mar 06, 2021 | Team Udayavani |

ಬೆಂಗಳೂರು: ಪೊಲೀಸ್‌ ಭದ್ರತೆ ನೀಡಿದರೆ ಮಾ.9ರಂದು ವಿಚಾರಣೆಗೆ ಬರುವುದಾಗಿ ಕಬ್ಬನ್‌ ಪಾರ್ಕ್‌ ಪೊಲೀಸರಿಗೆ ಪತ್ರ ಬರೆದಿದ್ದ ದೂರುದಾರ ದಿನೇಶ್‌ ಕಲ್ಲಹಳ್ಳಿ ಅವರು ಶುಕ್ರವಾರ ಮಧ್ಯಾಹ್ನ ಏಕಾಏಕಿ ವಿಚಾರಣೆಗೆ ಹಾಜರಾಗಿ ಪೊಲೀಸರಲ್ಲಿ ಅಚ್ಚರಿ ಮೂಡಿಸಿದ್ದಾರೆ.

Advertisement

ಮಧ್ಯಾಹ್ನ 1.30ರ ಸುಮಾರಿಗೆ ಕಬ್ಬನ್‌ ಪಾರ್ಕ್‌ ಠಾಣೆಗೆ ಆಗಮಿಸಿದ ದಿನೇಶ್‌ ಅವರನ್ನು ಸಂಜೆ 5.30ರ ವರೆಗೆ ಇನ್‌ಸ್ಪೆಕ್ಟರ್‌ ಬಿ.ಮಾರುತಿ, ಎಸಿಪಿ ಯತಿರಾಜ್‌ ಮತ್ತು ಡಿಸಿಪಿ ಎಂ.ಎನ್‌.ಅನುಚೇತ್‌ ವಿಚಾರಣೆ ನಡೆಸಿದರು.

ಸಂತ್ರಸ್ತೆಯ ಪರಿಚಯವಿಲ್ಲ
ವಿಚಾರಣೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ದಿನೇಶ್‌, ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ಮಾಹಿತಿಯನ್ನು ನೀಡಿದ್ದೇನೆ. ಸಂತ್ರಸ್ತೆ ಯಾರೆಂದು ಗೊತ್ತಿಲ್ಲ. ಆಕೆಯ ಮುಖ ಕೂಡ ನೋಡಿಲ್ಲ. ಆಕೆಯ ಸಂಬಂಧಿಕರು ನನಗೆ ಸಿ.ಡಿ. ನೀಡಿದ್ದು, ಅದರ ಆಧಾರದಲ್ಲಿ ದೂರು ನೀಡಿದ್ದೇನೆ. ಸಿ.ಡಿ. ನೀಡಿದ ವ್ಯಕ್ತಿ ಸಹಿತ ಕೆಲವರ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದೇನೆ. ಆದರೆ, ಸೂಕ್ಷ್ಮ ಪ್ರಕರಣವಾದ್ದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ನನ್ನ ಕೈಗೆ ಸಿಕ್ಕಿದ ಬಳಿಕ ಸಿ.ಡಿ.ಯನ್ನು ಎಡಿಟ್‌ ಮಾಡಿಲ್ಲ ಎಂದರು.

ಎಚ್‌ಡಿಕೆ ಹೇಳಿಕೆಗೆ ಸ್ವಾಗತ
ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಪತಿಕ್ರಿಯಿಸಿದ ದಿನೇಶ್‌, ಅವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಬ್ಲ್ಯಾಕ್‌ ಮೇಲ್‌ ಮಾಡುವವರನ್ನು ಬಂಧಿಸಲಿ. ನಾನು ಯಾರನ್ನೂ ಬ್ಲ್ಯಾಕ್‌ ಮೇಲ್‌ ಮಾಡಿಲ್ಲ. ಸಂತ್ರಸ್ತೆಯ ಪರವಾಗಿ ದೂರು ನೀಡಿದ್ದೇನೆ. ಭದ್ರತೆ ಇಲ್ಲದಿದ್ದರೂ ತನಿಖೆಗೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ವಿಚಾರಣೆ ಹಾಜರಾಗಿದ್ದೇನೆ ಎಂದರು.

ತಂಡ ರಚನೆ
ಸಂತ್ರಸ್ತೆಯ ಪತ್ತೆಗೆ ಪೊಲೀಸರ ತಂಡ ರಚಿಸಲಾಗಿದೆ. ಆಕೆಯ ಮೊಬೈಲ್‌ ನಂಬರ್‌ ಹಾಗೂ ಇತರ ಮಾಹಿತಿ ಪತ್ತೆಗಾಗಿ ಶೋಧ ನಡೆಸಲು ಸೂಚಿಸಲಾಗಿದೆ. ಈ ತಂಡ ಈಗಾಗಲೇ ಕಾರ್ಯಾಚರಣೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

Advertisement

ತನಿಖೆಗೆ ಸಹಕರಿಸದ ದಿನೇಶ್‌
ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದರೂ ಸಂತ್ರಸ್ತೆ ಹಾಗೂ ಸಿ.ಡಿ. ನೀಡಿದ ವ್ಯಕ್ತಿ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಗಾಂಧಿನಗರದ ಖಾಸಗಿ ಲಾಡ್ಜ್ನಲ್ಲಿಯೇ ಸಂತ್ರಸ್ತೆಯ ಕುಟುಂಬ ಸದಸ್ಯರು ಸಿ.ಡಿ. ಕೊಟ್ಟು ಹೋದರು. ಅನಂತರ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಅದನ್ನು ಎಲ್ಲಿ ಎಡಿಟ್‌ ಮಾಡಲಾಗಿದೆ ಎಂಬುದು ಗೊತ್ತಿಲ್ಲ. ಆಕೆಯ ಕುಟುಂಬ ಸದಸ್ಯರು ಕೊಟ್ಟ ಸಿ.ಡಿ.ಯನ್ನು ನೇರವಾಗಿ ಪೊಲೀಸರಿಗೆ ನೀಡಿದ್ದೇನೆ ಎಂದು ದಿನೇಶ್‌ ವಿಚಾರಣೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ. ಲಾಡ್ಜ್ನ ಸಿಸಿ ಕೆಮರಾದಲ್ಲಿ ನೀವು ಸೆರೆಯಾಗಿಲ್ಲ. ಆದರೂ ಅಲ್ಲಿಯೇ ಆ ವ್ಯಕ್ತಿ ಸಿಡಿ ನೀಡಿದ್ದಾನೆ ಎಂದು ಹೇಳಿಕೆ ನೀಡುತ್ತಿದ್ದೀರಾ ಎಂಬ ಪೊಲೀಸರ ಪ್ರಶ್ನೆಗೆ, ಅದೇ ಲಾಡ್ಜ್ ನಲ್ಲಿ ಸಿ.ಡಿ. ಪಡೆದುಕೊಂಡಿದ್ದೇನೆ. ಮತ್ತೂಂದು ಕೆಮರಾದ ದೃಶ್ಯವನ್ನು ಪರಿಶೀಲಿಸಿ ಎಂದು ತನಿಖಾಧಿಕಾರಿಗಳಿಗೆ ಹೇಳಿದ್ದಾರೆ ಎನ್ನಲಾಗಿದೆ..

ಮಹಿಳಾ ಆಯೋಗದಲ್ಲೂ ದೂರು ದಾಖಲು
ಬೆಂಗಳೂರು: ರಮೇಶ್‌ ಜಾರಕಿಹೊಳಿಗೆ ಮತ್ತೂಂದು ಸಂಕಷ್ಟ ಎದುರಾಗಿದ್ದು, ಅಶ್ಲೀಲ ವೀಡಿಯೋದಲ್ಲಿರುವ ಸಂತ್ರಸ್ತೆಗೆ ವಂಚನೆ, ಬೆದರಿಕೆ ಆರೋಪ ಸಂಬಂಧ ರಾಜ್ಯ ಮಹಿಳಾ ಆಯೋಗವು ಮಾಜಿ ಸಚಿವರ ವಿರುದ್ಧ ಎರಡು ದೂರುಗಳನ್ನು ದಾಖಲಿಸಿಕೊಂಡಿದೆ. ಕನ್ನಡಿಗರ ರಕ್ಷಣಾ ವೇದಿಕೆ ಮತ್ತು ವಕೀಲರೊಬ್ಬರು ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮತ್ತೂಂದೆಡೆ ಶುಕ್ರವಾರ ಪೊಲೀಸರ ವಿಚಾರಣೆಗೆ ಹಾಜರಾದ ದೂರುದಾರ ದಿನೇಶ್‌ ಕಲ್ಲಹಳ್ಳಿ ಸಿ.ಡಿ. ನೀಡಿದ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ ಎಂದು ಆಯೋಗದ ಅಧ್ಯಕ್ಷೆ ಪ್ರವೀಳಾ ನಾಯ್ಡು ತಿಳಿಸಿದ್ದಾರೆ.

ಮದುವೆಗೆ ಹೋಗುತ್ತೇನೆ ಎಂದು ವಿಚಾರಣೆಗೆ ಬಂದ ದಿನೇಶ್‌
ಗುರುವಾರವಷ್ಟೇ ಪೊಲೀಸ್‌ ಭದ್ರತೆ ನೀಡಿದರೆ ಮಾ.9ರಂದು ವಿಚಾರಣೆಗೆ ಬರುವುದಾಗಿ ಹೇಳಿದ್ದ ದಿನೇಶ್‌ ಕಲ್ಲಹಳ್ಳಿ, ಕನಕಪುರದ ತನ್ನ ಮನೆಯ ಬಳಿ ನೀಡಿದ್ದ ಪೊಲೀಸ್‌ ಭದ್ರತಾ ಸಿಬಂದಿಗೆ ತಾನು ಬೆಂಗಳೂರಿನಲ್ಲಿರುವ ಸಂಬಂಧಿಕರ ಮದುವೆಗೆ ಹೋಗುವುದಾಗಿ ಸುಳ್ಳು ಹೇಳಿ ವಿಚಾರಣೆಗೆ ಹಾಜರಾಗಿದ್ದಾರೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮೂವರಿಂದ ಆತ್ಮಹತ್ಯೆ ಯತ್ನ
ಗೋಕಾಕ್: ರಮೇಶ್‌ ಬೆಂಬಲಿಗರಿಂದ ಶುಕ್ರವಾರವೂ ಪ್ರತಿಭಟನೆ ನಡೆದಿದ್ದು, ಮೂವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಗರದ ಬಸವೇಶ್ವರ ವೃತ್ತದಲ್ಲಿ ಹಾಳಬಾಗ ಗಲ್ಲಿಯ ನಿವಾಸಿ ಗಣಪತಿ ರಜಪೂತ (55) ಎಂಬಾತನು ಉರಿಯುತ್ತಿದ್ದ ಟೈರ್‌ಗಳ ಮೇಲೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳದಲ್ಲಿದ್ದ ಪೊಲೀಸರು ತತ್‌ಕ್ಷಣ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನೊಂದೆಡೆ ಮಾಲದಿನ್ನಿ ಕ್ರಾಸ್‌ನಲ್ಲಿ ನಡೆದ ಪ್ರತಿಭಟನೆಯಲ್ಲೂ ಇಬ್ಬರು ಅಭಿಮಾನಿಗಳು ಮೈ ಮೇಲೆ ಡೀಸೆಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳದಲ್ಲಿದ್ದವರು ತಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next