ಉಡುಪಿ: ಪಶ್ಚಿಮ ಘಟ್ಟದ ಮೇಲೆ ವಾಣಿಜ್ಯ ದೃಷ್ಟಿ ಬಿದ್ದ ಅನಂತರ ಅಪಾಯ ಉಂಟಾಗಿದೆ ಎಂದು ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಹೇಳಿದ್ದಾರೆ.
ಮಾ.28ರಂದು ಉಡುಪಿ ಕುಂಜಿಬೆಟ್ಟಿನ ಡಾ| ಟಿಎಂಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ “ನದಿ ತಿರುವು ಮತ್ತು ನದಿ ಜೋಡಣೆ’ ವಿಷಯದ ಕುರಿತಾದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ವಿವಿಧ ಯೋಜನೆಗಳ ಹೆಸರಿನಲ್ಲಿ ಪಶ್ಚಿಮಘಟ್ಟ ನಾಶವಾಗುತ್ತಿದೆ. ಪಶ್ಚಿಮ ಘಟ್ಟದಲ್ಲಿರುವ ನದಿ ಮೂಲಗಳು ಸೂಕ್ಷ್ಮ ಪ್ರದೇಶಗಳು. ಅವುಗಳ ಮೇಲೂ ಅತಿಕ್ರಮಣವಾಗುತ್ತಿದೆ. ನದಿ ಮೂಲ ಬಡಕಲಾಗುತ್ತಿದೆ. ಒಮ್ಮೆ ನದಿ ಮೂಲ ಅಳಿದರೆ ಯಾವ ತಂತ್ರಜ್ಞಾನ ದಿಂದಲೂ ಅದರ ಮರುಸೃಷ್ಟಿ ಅಸಾಧ್ಯ. ಪಶ್ಚಿಮ ಘಟ್ಟಕ್ಕೆ ಮಾರಣಾಂತಿಕವಾದ ಯೋಜನೆಗಳನ್ನು ತಡೆಯುವುದು ಅತ್ಯವಶ್ಯ ಎಂದರು.
ನದಿ ತಿರುವು ಯೋಜನೆಯಿಂದ ದುರಂತ ಉಂಟಾಗಬಹುದು. ನದಿ ಜೋಡಣೆ ಯೋಜನೆಯಿಂದ ಮಹಾ ದುರಂತವೇ ಸಂಭವಿಸಬಹುದು. ಇಂಥ ಯೋಜನೆಗಳನ್ನು ಪ್ರಪಂಚದ ಎಲ್ಲ ದೇಶಗಳು ಕೂಡ ತಿರಸ್ಕರಿವೆ. ಇಂತಹ ಯೋಜನೆಗಳ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.
ಕಾಡ್ಗಿಚ್ಚಿಗೆ ಮನುಷ್ಯನೇ ಕಾರಣ ಇತ್ತೀಚಿನ ವರ್ಷಗಳಲ್ಲಿ ಕಾಡ್ಗಿಚ್ಚಿನ ಪ್ರಮಾಣ ಅಧಿಕವಾಗಿದೆ. ಪ್ರತಿಯೊಂದು ಕಾಡ್ಗಿಚ್ಚು ಕೂಡ ಮನುಷ್ಯನಿಂದಲೇ ನಡೆಯುತ್ತದೆ. ಕೆಲವೊಮ್ಮೆ ಚಾರಣಿಗರು ಕೂಡ ಕಾಡ್ಗಿಚ್ಚಿಗೆ ಕಾರಣರಾಗುತ್ತಿದ್ದಾರೆ. ಕಾಡ್ಗಿಚ್ಚಿನಿಂದ ಬೆಟ್ಟದ ಮೇಲಿನ ಹುಲ್ಲು ನಿರಂತರವಾಗಿ ನಾಶವಾದರೂ ಅದರಿಂದ ದುಷ್ಪರಿಣಾಮವುಂಟಾಗುತ್ತದೆ. ಕಾಡ್ಗಿಚ್ಚು ಉಂಟಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೆಲಿಕಾಪ್ಟರ್‌ಗಳ ಮೂಲಕ ಕಾಡ್ಗಿಚ್ಚನ್ನು ನಂದಿಸಲು ಸರಕಾರಗಳು ಕ್ರಮ ಕೈಗೊಳ್ಳ ಬೇಕಾಗಿದೆ ಎಂದರು.
ಪ್ರಾಂಶುಪಾಲ ಡಾ| ಮಹಾಬಲೇಶ್ವರ ರಾವ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಶಕೀಲಾ ಸ್ವಾಗತಿಸಿದರು. ಮಮತಾ ಸಾಮಂತ್ ಪರಿಚಯಿಸಿದರು.