Advertisement

ಅನ್ನಕ್ಕೆ ಕಲ್ಲು ಹಾಕುವುದು ಯಾವ ಧರ್ಮ?: ದಿನೇಶ್ ಗುಂಡೂರಾವ್ ಟೀಕೆ

12:44 PM Apr 10, 2022 | Team Udayavani |

ಬೆಂಗಳೂರು: ಧಾರವಾಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ನುಗ್ಗೆಕೇರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ಸೇನೆಯವರು ನಡೆಸಿರುವ ಪುಂಡಾಟ ಹೇಯ ಮತ್ತು ಹೀನ ಕೃತ್ಯ. ಬಡ ಮು‌ಸ್ಲಿಮನೊಬ್ಬನ ಅಂಗಡಿ ನಾಶಪಡಿಸಿ,ಮಾರಾಟಕ್ಕೆ ಇಟ್ಟಿದ್ದ ಕಲ್ಲಂಗಡಿ ಹಣ್ಣುಗಳನ್ನು ಹಾಳು ಮಾಡಿದ ಶ್ರೀರಾಮ ಸೇನೆಯವರು ಸಾಧಿಸಿದ್ದೇನು? ಅನ್ನಕ್ಕೆ ಕಲ್ಲು ಹಾಕುವುದು ಯಾವ ಧರ್ಮ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

Advertisement

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಧಾರವಾಡದ ನುಗ್ಗೇಕೇರಿ ಆಂಜನೇಯ ದೇವಸ್ಥಾನದಲ್ಲಿ ಶ್ರೀರಾಮ ಸೇನೆಯವರು ನಡೆಸಿದ ದಾಂಧಲೆ ಭಯೋತ್ಪಾದನೆಗೆ ಸಮ. ಶ್ರೀರಾಮನ ತತ್ವಾದರ್ಶಗಳನ್ನು ನಿಜವಾಗಿ ಪಾಲಿಸುವವರು ಇಂತಹ ಕಿರಾತಕ ಕೆಲಸ ಮಾಡುವುದಿಲ್ಲ.‌ ಶ್ರೀರಾಮ ಸೇನೆಯ ಕೃತ್ಯ ರಾಮನ ಹೆಸರಿಗೆ ಕಳಂಕ ತರುವ ಯತ್ನ. ದಾಂಧಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲೇಬೇಕು ಎಂದು ಆಗ್ರಹಿಸಿದ್ದಾರೆ.

ಸಾಮರಸ್ಯ,ಸಹಬಾಳ್ವೆ ‌ಮತ್ತು ಶಾಂತಿಗೆ ನಮ್ಮ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗಿತ್ತು. ಆದರೀಗ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ರಾಜ್ಯ ‘ಜಂಗಲ್ ರಾಜ್’ ಆಗಿ ಬದಲಾಗುತ್ತಿದೆ. ಬೊಮ್ಮಾಯಿಯವರೆ, ಶಾಂತಿಯ ನಾಡಾಗಿದ್ದ ಕರ್ನಾಟಕವನ್ನು ನೀವೇನು ಮಾಡಲು ಹೊರಟ್ಟಿದ್ದೀರಿ? ಬಸವಣ್ಣ ಶರಣಾದಿ ಪರಂಪರೆಯಿಂದ ಬಂದ ನೀವು ಮಾಡುತ್ತಿರುವುದು ನಿಮಗೆ ಸಮ್ಮತವೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಹೊಸಕೋಟೆ:ವಿವಾಹ ಆಗಬೇಕಿದ್ದ ಯುವತಿ ಫೋನ್‌ನಲ್ಲಿ ಸರಿಯಾಗಿ ಮಾತಾನಾಡದಕ್ಕೆ ನೇಣಿಗೆ ಶರಣಾದ ಯುವಕ

ಕಳೆದ ಕೆಲ ದಿನಗಳಿಂದ ರಾಜ್ಯ ಅಸಹಿಷ್ಣುತೆಯ ನಾಡಾಗಿದೆ. ಸಮಾಜಘಾತುಕ ಶಕ್ತಿಗಳು ಕೆಲ ಅಭಿಯಾನದ ಮೂಲಕ ಮಾನವ ದ್ವೇಷ ಹರಡುತ್ತಿವೆ. ಇಷ್ಟಾದರೂ ಬೊಮ್ಮಾಯಿಯವರು ಸರ್ಕಾರಕ್ಕೂ ಸಮಾಜಘಾತುಕ ಶಕ್ತಿಗಳ ಅಭಿಯಾನಕ್ಕೂ ಸಂಬಂಧವಿಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆ. ಅವರ ಕಣ್ಣ ಇಶಾರೆ ಇಲ್ಲದೆ ಸಮಾಜ ಘಾತುಕ ಶಕ್ತಿಗಳು ಹೀಗೆ ಬಾಲ ಬಿಚ್ಚಲು ಸಾಧ್ಯವೆ? ಬೊಮ್ಮಾಯಿಯವರೆ, ನೀವು ಹಸುವಿನ ವೇಷ ತೊಟ್ಟ ಗೋಮುಖವ್ಯಾಘ್ರ ಆಗುವುದು ಬೇಡ. ಮುಖ್ಯಮಂತ್ರಿಯಾಗಿ ನೀವು ಈ ರಾಜ್ಯದ ಯಜಮಾನನಿದ್ದಂತೆ. ನಾಡಿನ ದೊರೆಯಾಗಿ ಸರ್ವರನ್ನು ಸಮಾನವಾಗಿ ಕಾಣುವ ಔದಾರ್ಯ ಬೆಳೆಸಿಕೊಳ್ಳಿ. ಧರ್ಮವನ್ನು ಒಡೆದು ಆಳುವ ನಿಮ್ಮ ನೀತಿ ಕೊನೆಗೆ ನಿಮಗೆ‌ ಮುಳ್ಳಾಗಲಿದೆ ಎಂಬ ಕನಿಷ್ಟ ಪ್ರಜ್ಞೆ ನಿಮಗಿರಲಿ ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next