Advertisement
ಇತ್ತೀಚೆಗಷ್ಟೇ ಪಕ್ಷದ ಎರಡೆಲೆ ಚಿಹ್ನೆಗೆ ಚುನಾವಣಾ ಆಯೋಗಕ್ಕೆ ಲಂಚ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ, ಜಾಮೀನು ಪಡೆದು ಬಿಡುಗಡೆಯಾದ ನಂತರ ಇದೇ ಮೊದಲ ಬಾರಿಗೆ ದಿನಕರನ್ ಅವರು ಶಶಿಕಲಾ ನಟರಾಜನ್ ಅವರನ್ನು ಭೇಟಿಯಾಗಿ ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದ್ದಾರೆ.
Related Articles
Advertisement
ಅಭಿಮಾನಿಗಳ ಜಮಾವಣೆ: ಶಿಶಿಕಲಾರನ್ನು ದಿನಕರನ ಭೇಟಿ ಮಾಡುವ ವಿಷಯ ತಿಳಿದ ಪಕ್ಷದ ಅಭಿಮಾನಿಗಳು ಮತ್ತು ಮುಖಂಡರು ಜೈಲಿನ ಬಳಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇನ್ನು ಸಾಮಾನ್ಯ ಕೈದಿಗಳನ್ನು ಭೇಟಿ ಮಾಡುವ ರೀತಿಯಲ್ಲಿಯೇ ದಿನಕರನ್ ಅವರನ್ನು ಒಳಗೆ ಬಿಟ್ಟು ಶಶಿಕಲಾರನ್ನು ಭೇಟಿ ಮಾಡಿಸಲಾಯಿತು. ಈ ಮೂಲಕ ಶಶಿಕಲಾರಿಗೆ ಯಾವುದೇ ವಿಶೇಷ ಪ್ರಾತಿನಿಧ್ಯ ಕೊಡುತ್ತಿಲ್ಲ ಎಂದು ಜೈಲಿನ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಶಶಿಕಲಾಗೆ ಇಲ್ಲ ಪೆರೋಲ್: ದಿನಕರನ್ ಅವರು ಶಶಿಕಲಾ ಅವರನ್ನು ಭೇಟಿ ಮಾಡುವ ಸುದ್ದಿ ಹರಡುತ್ತಿದ್ದಂತೆ ಇಡೀ ತಮಿಳುನಾಡಿನ ಮಾಧ್ಯಮಗಳು ಆರೋಪಿಗೆ ಪೆರೋಲ್ ಸಿಕ್ಕಿದೆ ಎಂದು ವರದಿ ಮಾಡಿವೆ. ಆದರೆ, ಯಾವುದೇ ಕಾರಣಕ್ಕೂ ಶಶಿಕಲಾಗೆ ಪೆರೋಲ್ ನೀಡಿಲ್ಲ. ಅವರು ಜೈಲಿನಲ್ಲೇ ಇದ್ದಾರೆ. ಅಲ್ಲದೆ, ಶಿಕ್ಷೆ ಪ್ರಕಟವಾಗಿ ಜೈಲಿಗೆ ಬಂದ ಒಂದು ವರ್ಷದವರೆಗೆ ಯಾರಿಗೂ ಪೆರೋಲ್ ಕೊಡಲು ಸಾಧ್ಯವಿಲ್ಲ. ಶಶಿಕಲಾರದ್ದು ಇನ್ನೂ ಶಿಕ್ಷೆಯ ಅವಧಿ ಒಂದು ವರ್ಷ ಆಗಿಲ್ಲದ ಕಾರಣ ಅವರಿಗೆ ಪೆರೋಲ್ ನೀಡಲು ಸಾಧ್ಯವಿಲ್ಲ ಎಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಜೈಲರ್ ಕೃಷ್ಣ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.
ಚಿನ್ನಮ್ಮನ ಆಶಿರ್ವಾದ: ದಿನಕರನ್ ಜೈಲಿನಿಂದ ಹೊರಬರುವಾಗ ಚಿನ್ನಮ್ಮ ಅರ್ಥಾತ್ ಶಶಿಕಲಾ ನಟರಾಜನ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಈ ವೇಳೆ ವಿಜಯಶಾಂತಿ ಕೂಡ ಇದ್ದರು ಎಂದು ಮೂಲಗಳು ತಿಳಿಸಿವೆ.