ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರನ್ನು ಆಕೆಯ ಸಂಬಂಧಿ ಟಿಟಿವಿ ದಿನಕರನ್ ಹಾಗೂ ರಾಜ್ಯಸಭೆ ಉಪಾಧ್ಯಕ್ಷ ಎಂ. ತಂಬಿದೊರೈ ಮಂಗಳವಾರ ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು.
ಮಂಗಳವಾರ ಮಧ್ಯಾಹ್ನ ಸುಮಾರು 3.30ರಲ್ಲಿ ಶಶಿಕಲಾ ಅವರನ್ನು ಭೇಟಿಯಾದ ದಿನಕರನ್ ಮತ್ತು ಎಂ. ತಂಬಿದೊರೈ ಪ್ರತ್ಯೇಕವಾಗಿ ಸುಮಾರು ಒಂದು ಗಂಟೆಗಳ ಕಾಲ ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ ಎಂದು ಪರಪ್ಪನ ಅಗ್ರಹಾರ ಕಾರಾಗೃಹದ ಮೂಲಗಳು ತಿಳಿಸಿವೆ.
ಒಬ್ಬೊಬ್ಬರನ್ನೇ ಕರೆದು ಮಾತನಾಡಿದ ಚಿನ್ನಮ್ಮ: ಎಂ. ತಂಬಿದೊರೈ ಮತ್ತು ದಿನಕರನ್ ಒಟ್ಟಿಗೆ ಶಶಿಕಲಾ ನಟರಾಜನ್ ಅವರನ್ನು ಭೇಟಿಯಾಗಲು ಇಚ್ಚಿಸಿದ್ದರು. ಆದರೆ, ಶಶಿಕಲಾ ಅವರು, ಇಬ್ಬರನ್ನು ಪ್ರತ್ಯೇಕವಾಗಿ ಕಳುಹಿಸುವಂತೆ ಜೈಲಿನ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.
ಈ ಹಿನ್ನೆಲೆಯಲ್ಲಿ ಮೊದಲಿಗೆ ದಿನಕರನ್ ಮತ್ತು ಪತ್ನಿ ಅನುರಾಧ ಅವರನ್ನು ಒಳಗೆ ಬಿಡಲಾಯಿತು. ಇವರು ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿ ಹೊರಬಂದರು. ನಂತರ ಎಂ. ತಂಬಿದೊರೈ ಅವರು ಕೂಡ ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೇ ಪಕ್ಷದ ಎರಡೆಲೆ ಚಿಹ್ನೆ ಪಡೆಯುವ ಸಲುವಾಗಿ ಚುನಾವಣಾ ಆಯೋಗಕ್ಕೆ ಲಂಚ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ, ಜಾಮೀನು ಪಡೆದು ಬಿಡುಗಡೆಯಾದ ದಿನಕರನ್, ಎರಡನೇ ಬಾರಿಗೆ ಶಶಿಕಲಾ ನಟರಾಜನ್ ಅವರನ್ನು ಭೇಟಿಯಾಗಿದ್ದಾರೆ.