Advertisement
ಪಳನಿ ಹಾಗೂ ಪನ್ನೀರ್‌ಸೆಲ್ವಂ ಸರಕಾರವು “ಕೊಲೆ ಗಡುಕ ಸರಕಾರ’ ಎಂದು ಬರೆದಿರುವ ಕರಪತ್ರವನ್ನು ದಿನಕರನ್ ಬೆಂಬಲಿಗರು ಇತ್ತೀಚೆಗೆ ಸಾರ್ವಜನಿಕರಿಗೆ ಹಂಚಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು, ದಿನಕರನ್‌ರ 10 ಮಂದಿ ಬೆಂಬಲಿಗರನ್ನು ಬಂಧಿಸಿದೆ. ಇವರ ವಿರುದ್ಧ ದೇಶದ್ರೋಹ, ಕ್ರಿಮಿನಲ್ ಸಂಚು, ಶತ್ರುತ್ವಕ್ಕೆ ಪ್ರಚೋದನೆ, ಮಾನಹಾನಿ, ಉದ್ದೇಶಪೂರ್ವಕ ಅವಮಾನ ಸೇರಿದಂತೆ ಹಲವು ಆರೋಪ ಗಳನ್ನು ಹೊರಿಸಲಾಗಿದ್ದು, ಆರೋಪ ಸಾಬೀತಾದರೆ ಗರಿಷ್ಠ ಜೀವಾವಧಿ ಶಿಕ್ಷೆ ಎದುರಿಸಬೇಕಾಗಬಹುದು.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ತಮಗೆ 15 ದಿನಗಳ ಪರೋಲ್ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅನಾರೋಗ್ಯಕ್ಕೀಡಾಗಿರುವ ತಮ್ಮ ಪತಿ ಎಂ. ನಟರಾಜನ್‌ರನ್ನು ಭೇಟಿಯಾಗಲು ಅವಕಾಶ ಕಲ್ಪಿಸುವಂತೆ ಶಶಿಕಲಾ ಮನವಿ ಮಾಡಿದ್ದಾರೆ ಎಂದು ಅವರ ಸಂಬಂಧಿ, ಪಕ್ಷದ ನಾಯಕ ಟಿಟಿವಿ ದಿನಕರನ್ ಹೇಳಿದ್ದಾರೆ. ನಟರಾಜನ್ ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದು, ಸದ್ಯದಲ್ಲೇ ಯಕೃತ್ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಕರ್ನಾಟಕ ಬಂದೀಖಾನೆ ಇಲಾಖೆ ನಮ್ಮ ಮನವಿಯನ್ನು ಸಮ್ಮತಿಸಿ ಪರೋಲ್ ನೀಡು ತ್ತದೆ ಎಂಬ ಭರವಸೆ ಇದೆ ಎಂದು ಅವರು ಹೇಳಿದ್ದಾರೆ.