Advertisement
ಮೊದಲು ಅಸ್ಸಾಂ ರಾಜ್ಯದಲ್ಲಿದ್ದ ಇದು ಹೊಸತಾಗಿ ನಾಗಾಲ್ಯಾಂಡ್ ರಾಜ್ಯ ಸ್ಥಾಪನೆಯಾದಾಗ ಇದರ ಮುಖ್ಯ ವ್ಯಾಪಾರ ಕೇಂದ್ರವಾಗಿ ಇದು ಗುರುತಿಸಿಕೊಂಡಿದೆ. ನಾಗಾಲ್ಯಾಂಡ್ ರಾಜಧಾನಿ ಕೊಹಿಮಾ ಇಲ್ಲಿಂದ ಎಪ್ಪತ್ತೈದು ಕಿ.ಮೀ. ದೂರದಲ್ಲಿದೆ. ಈ ದಿಮಾಪುರಕ್ಕೆ ಇಲ್ಲಿಯ ಸ್ಥಳ ಪುರಾಣ ಪ್ರಕಾರ ಒಂದು ಕತೆಯೆ ಇದೆ. ಹಿಂದೆ ಮಹಾಭಾರತ ಕಾಲದಲ್ಲಿ ಪಾಂಡವರು ವನವಾಸಕ್ಕೆ ಬಂದಾಗ, ಭೀಮ, ಹಿಡಿಂಬೆಯನ್ನು ವಿವಾಹವಾಗಿ ವನಸಂಚಾರಕ್ಕೆ ಇಲ್ಲಿಗೆ ಇಬ್ಬರು ಬಂದಿದ್ದರಂತೆ. ಮುಂದೆ ಬೇಸರ ಕಳೆಯಲು ಇಲ್ಲಿಯೇ ಚದುರಂಗ (ಚೆಸ್) ಆಟ ಆಡಿದರಂತೆ. ಇದರ ಕುರುಹುಗಳೆಂಬಂತೆ ಆಳೆತ್ತರದ ಚದುರಂಗದ ಕಲ್ಲುಗಳನ್ನು ಇಲ್ಲಿ ಕಾಣಬಹುದು. ಜೊತೆಗೆ ಹಲವು ತುಂಡಾದ ಚದುರಂಗದಾಳದ ಕಲ್ಲುಗಳು ಇಲ್ಲಿ ಕಾಣಬಹುದು. ಇಲ್ಲಿ ಕಾಣುವ ಚದುರಂಗದ ಕಲ್ಲುಗಳನ್ನು ನೋಡಿದಾಗ ಮಹಾಭಾರತದ ಮನುಷ್ಯರು ಎಷ್ಟು ದೊಡ್ಡ ಗಾತ್ರದವರು ಎಂದು ಊಹಿಸಲು ಅಸಾಧ್ಯ. ಭೀಮ ಮತ್ತು ಹಿಡಿಂಬೆ ಆಟವಾಡಿದ ಈ ವನ ನಗರದಿಂದ ಎರಡು ಕಿ.ಮೀ. ದೂರದಲ್ಲಿದ್ದು , ಪ್ರಾಚ್ಯ ಇಲಾಖೆಯವರು ಬೇಲಿ ಹಾಕಿ ಇಡಿ ಸ್ಥಳ ಸುರಕ್ಷಿತವಾಗಿ ಇಟ್ಟಿದ್ದಾರೆ.
ದಿಮಾಪುರಕ್ಕೆ ಗೌಹಾತಿಯಿಂದ ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಿಂದೆ ಕಚೇರಿ ಕೆಲಸ ನಿಮಿತ್ತ ಹೋದಾಗ ಸಾಕಷ್ಟು ಹೆದರಿಕೊಂಡೇ ಹೋಗಬೇಕಾಯಿತು. ದಿಮಾಪುರ ಎಂದರೆ ಅದೇಕೋ ಎಲ್ಲರಿಗೂ ಭಯ. ರಾತ್ರಿ ಆರು ಗಂಟೆಯಾಗುತ್ತಲೆ ಇಲ್ಲಿಯ ರಸ್ತೆಗಳಲ್ಲಿ ಜನಸಂಚಾರ ಇರದು. ರಸ್ತೆಯಲ್ಲಿ ಒಬ್ಬಂಟಿಗರಾಗಿ ನಡೆದುಕೊಂಡು ಹೋದರೆ ಹೆದರಿಸಿ ದುಡ್ಡು ಕೇಳುವುದು, ಇಲ್ಲವೆ ಕೈಯಲ್ಲಿದ್ದಷ್ಟು ಕೊಡಲು ಒತ್ತಾಯಿಸುವುದು, ಜೊತೆಗೆ ಪ್ರಾಣಾಪಾಯ ಭೀತಿ ಸಹ ಇಲ್ಲಿದೆ. ಇಲ್ಲಿಯ ಸ್ಥಳೀಯರು ರಾತ್ರಿ ಹೊತ್ತು ಹೊರಗಡೆ ತಿರುಗಾಡುವುದು ಕಡಿಮೆ. ದಿಮಾಪುರ ನಗರದುದ್ದಕ್ಕೂ ವಿದ್ಯುದ್ದೀಪ. ದಾರಿದೀಪಗಳೇ ಕಡಿಮೆ. ಆಗಾಗ್ಗೆ ಬಂದ್, ಹರತಾಳ, ಗುಂಡಿನ ಕಾಳಗ ಇವುಗಳು ನಡೆಯುತ್ತಲೆ ಇರುತ್ತವೆ. ಇತ್ತೀಚೆಗೆ ನಗರ ಕಾರ್ಪೊರೇಷನ್ ಕೆಲವು ದಿಟ್ಟ ಹೆಜ್ಜೆ ಇಟ್ಟು , ರಸ್ತೆ ಅಗಲೀಕರಣ, ಅನಧಿಕೃತ ಕಟ್ಟಡ ನೆಲಸಮ ಮಾಡಿ, ಜನೋಪಯೋಗಿ ಕಾರ್ಯ ಮಾಡುತ್ತಿದೆ.
Related Articles
ನಾಗಾಲ್ಯಾಂಡ್‌ನಲ್ಲಿ ಮದ್ಯ ಮಾರಾಟ ಇಲ್ಲ. ಆದರೆ ಬ್ಲ್ಯಾಕ್‌ನಲ್ಲಿ ಸಿಗುತ್ತದೆ! ನಾಗಾಲ್ಯಾಂಡ್‌ನಲ್ಲಿ ನಾಯಿ ಮಾಂಸಕ್ಕೆ ತುಂಬಾ ಬೇಡಿಕೆ ಇರುವಂತೆ ಇಲ್ಲಿಯೂ ಇದೆ. ಮಾರ್ಕೆಟ್‌ನಲ್ಲಿ ಗೋಣಿಚೀಲದಲ್ಲಿ ನಾಯಿ ಇಟ್ಟು ತಲೆ ಮಾತ್ರ ತೋರುತ್ತಿರುವಂತೆ ಇಟ್ಟಿರುತ್ತಾರೆ. ಹಾಗೆಯೆ ಕಪ್ಪೆ , ಎರೆಹುಳ, ಹಾತೆ, ಮಾಂಸದಂತೆ ಮಾರಾಟವಾಗುವ ದೃಶ್ಯ ಮೈ ಜುಮ್ಮೆನ್ನುತ್ತದೆ. ಬುಧವಾರ ಮಾರ್ಕೆಟ್ ಇಲ್ಲಿ ಪ್ರಸಿದ್ಧವಾಗಿದ್ದು, ನಾಗಾ ತೊಡುಗೆಯಲ್ಲಿ ಹಳ್ಳಿಗಳಿಂದ ಜನರು ಬಂದು ತಮ್ಮ ತರಕಾರಿ ಹಾಗೂ ಇತರ ಸಾಮಾನುಗಳನ್ನು ಬಿಕರಿ ಮಾಡಿ ಹೋಗುತ್ತಾರೆ.
Advertisement
– ನಾಗ ಶಿರೂರು